ADVERTISEMENT

ಬೆಳೆಯುವ ಪ್ರತಿಭೆಗೆ ಬೇಕು ನೆರವಿನ ಹಸ್ತ

ಎಸ್ಎಸ್‌ಎಲ್‌ಸಿಯಲ್ಲಿ ಶೇ 96 ಅಂಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 12:42 IST
Last Updated 17 ಜೂನ್ 2018, 12:42 IST
ರಕ್ಷಿತ್‌
ರಕ್ಷಿತ್‌   

ಖಾಸಗಿ ಶಾಲೆಗಳಲ್ಲಿ ಅಂಕ ಗಳಿಕೆಗೆ ಪೈಪೋಟಿ ನಡೆಸುವುದು ಸಾಮಾನ್ಯ. ಆದರೆ, ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ಶಾಲೆಯ ಇತಿಹಾಸದಲ್ಲಿಯೇ ಯಾರೂ ಗಳಿಸದಷ್ಟು ಅಂಕ ಗಳಿಸಿದರೂ, ಮುಂದಿನ ವ್ಯಾಸಂಗ ನಡೆಸಲು ಹಣವಿಲ್ಲದೇ ಆಕಾಶ ನೋಡುವಂತಹ ಪರಿಸ್ಥಿತಿ ಬಂದೊದಗಿದೆ.

ಪಟ್ಟಣದ ಬಸ್‌ ನಿಲ್ದಾಣದ ಬಳಿಯಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪನೆಯಾದ ಶಾಲೆ. ತಾಲ್ಲೂಕಿನ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಈ ಶಾಲೆಯು ಶೈಕ್ಷಣಿಕ ಚಟುವಟಿಕೆಗೆ ಆಧಾರ ಸ್ತಂಭ. ಈ ಶಾಲೆಯಲ್ಲಿ ಓದಿದ ಬಿಳಗುಳ ಗ್ರಾಮದ ಎಸ್‌.ಕೆ. ರಕ್ಷಿತ್‌ ಎಂಬ ವಿದ್ಯಾರ್ಥಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 602 ಅಂಕಗಳನ್ನು (ಶೇ. 96) ಪಡೆಯುವ ಮೂಲಕ ಶಾಲೆಯ ಇತಿಹಾಸದಲ್ಲಿಯೇ ಯಾರೂ ಪಡೆಯದ ಅಂಕ ಪಡೆದು ಗಳಿಸಿ ಕೀರ್ತಿ ತಂದಿದ್ದಾನೆ.

ಈತನ ಅಂಕಪಟ್ಟಿಯನ್ನು ಕಣ್ಣಾಡಿಸಿದರೆ ಸರ್ಕಾರಿ ಶಾಲೆಯಲ್ಲೂ ಇಷ್ಟು ಸಾಧನೆ ಮಾಡಲು ಸಾಧ್ಯವಿದೆ ಎಂಬುದು ಅರಿವಾಗುತ್ತದೆ. ಎಸ್‌.ಕೆ. ರಕ್ಷಿತ್‌ ಕನ್ನಡದಲ್ಲಿ 122, ಇಂಗ್ಲಿಷ್‌ನಲ್ಲಿ 99, ಹಿಂದಿಯಲ್ಲಿ 97, ಗಣಿತದಲ್ಲಿ 98, ಸಮಾಜ ವಿಜ್ಞಾನದಲ್ಲಿ 98, ವಿಜ್ಞಾನದಲ್ಲಿ 88 ಅಂಕ ಗಳಿಸಿದ್ದಾನೆ. ವಿಜ್ಞಾನದ ವಿಷಯದಲ್ಲಿ ಇನ್ನು ಹತ್ತು ಅಂಕಗಳು ಬರಬೇಕಿತ್ತು ಎಂಬುದು ಎಸ್‌.ಕೆ. ರಕ್ಷಿತ್‌ನ ನಿರೀಕ್ಷೆಯಿತ್ತು. ಆದರೆ, ಉತ್ತರ ಪತ್ರಿಕೆಯನ್ನು ಮರು ಎಣಿಕೆ ಅಥವಾ ಮರು ಮೌಲ್ಯಮಾಪನಕ್ಕೆ ಹಾಕುವಷ್ಟು ಆರ್ಥಿಕ ಸಂಕಷ್ಟ ಆತನ ಕುಟುಂಬವನ್ನು ಕಾಡುತ್ತಿದೆ.

ADVERTISEMENT

ಎಸ್‌.ಕೆ. ರಕ್ಷಿತ್‌ ಬಿಳಗುಳ ಗ್ರಾಮದ ವಿದ್ಯಾವತಿ ಹಾಗೂ ಕೆಂಚಪ್ಪ ದಂಪತಿಯ ಕಿರಿಯ ಪುತ್ರ. ಮೂರು ವರ್ಷಗಳ ಹಿಂದೆ ಎಸ್‌.ಕೆ. ರಕ್ಷಿತ್‌ ತಂದೆ ಕೆಂಚಪ್ಪ ಸಾವನ್ನಪ್ಪಿದ್ದು, ತಾಯಿಯ ಆಸರೆಯಲ್ಲಿ ಬಾಡಿಗೆ ಮನೆಯಲ್ಲಿ ಜೀವಿಸುತ್ತಿರುವ ಎಸ್‌.ಕೆ. ರಕ್ಷಿತ್‌ಗೆ ಆರ್ಥಿಕ ಸಂಕಷ್ಟವೆಂಬುದು ಹಾಸಿಹೊದ್ದಿದೆ. ಆತನ ಸಹೋದರ ಎಸ್‌.ಕೆ. ದೀಕ್ಷಿತ್‌ ಕುಟುಂಬ ನಿರ್ವಹಣೆಗಾಗಿ ಉಜಿರೆಯಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ವಿದ್ಯಾವತಿ ಕೂಡ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡುತ್ತಾರೆ.

ರಕ್ಷಿತ್‌ ಎಸ್ಸೆಸ್ಸೆಲ್ಸಿಯಲ್ಲಿ ಶೇ 96 ಅಂಕ ಗಳಿಸಿದರೂ ಬಡತನದಿಂದಾಗಿ ಪಿಯುಸಿ ಕಲಿಯಲು ಹಣವಿಲ್ಲದೇ ಶೈಕ್ಷಣಿಕ ಬದುಕಿಗೆ ಇತಾಶ್ರೀ ಹಾಡುವ ಮಟ್ಟಕ್ಕೆ ತಲುಪಿದ್ದಾನೆ. ಆದರೆ, ತಾಯಿಯ ದಿಟ್ಟ ನಿರ್ಧಾರದಿಂದ ಸಾಲ ಮಾಡಿ ಪಟ್ಟಣದ ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ದಾಖಲಿಸಿದ್ದು, ಮುಂದಿನ ವಿದ್ಯಾಭ್ಯಾಸಕ್ಕಾಗಿ ನೆರವಿನ ಹಸ್ತವನ್ನು ಕುಟುಂಬವು ಎದುರು ನೋಡುತ್ತಿದೆ.

‘ವೈದ್ಯನಾಗಿ ಹಳ್ಳಿಯಲ್ಲಿರುವ ಆಸ್ಪತ್ರೆಯಲ್ಲಿ ಗ್ರಾಮೀಣ ಜನರ ಸೇವೆ ಮಾಡಬೇಕು ಎಂಬ ಕನಸಿದೆ. ವೈದ್ಯರಾಗಲು ಉತ್ತಮ ಅಂಕ ಗಳಿಸಬೇಕು ಎಂದು ಶಿಕ್ಷಕರು ಹೇಳಿದ ಮಾತು ಯಾವಾಗಲೂ ಕಿವಿಯಲ್ಲಿ ಗುಂಯ್‌ ಗುಟ್ಟುತ್ತಿದ್ದರಿಂದ ರಜೆ ದಿನಗಳಲ್ಲಿ ಅಮ್ಮನೊಂದಿಗೆ ಕೂಲಿ ಕೆಲಸ ಮಾಡಿದರೂ, ಓದಿಗೆ ಅಡ್ಡಿಯಾಗದೇ ಉತ್ತಮ ಅಂಕ ಬಂದಿದೆ. ವಿಜ್ಞಾನದಲ್ಲಿ ಇನ್ನು ಕಡಿಮೆಯೆಂದರೂ 10 ಅಂಕ ಬರಬೇಕಿತ್ತು. ಇರಲಿ, ಪಿಯೂಸಿಯಲ್ಲಿ ಇದಕ್ಕಿಂತಲೂ ಹೆಚ್ಚು ಅಂಕ ಪಡೆಯುತ್ತೇನೆ’ ಎಂದು ಹೇಳುವ ರಕ್ಷಿತ್‌ನ ದೃಢ ನಿರ್ಧಾರ ಸರ್ಕಾರಿ ಶಾಲೆಯೆಂದು ಮೂಗು ಮುರಿಯುವವರನ್ನು ನಾಚಿಸುವಂತೆ ಮಾಡಿದೆ.

‘ರಕ್ಷಿತ್‌  ಓದಿನಲ್ಲಿ ಚೂಟಿಯಿದ್ದು, ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿದ್ದಾನೆ. ನಮ್ಮ ಶಾಲೆಯ ಇತಿಹಾಸದಲ್ಲಿ ಶೇ 96 ಅಂಕ ಗಳಿಸಿರುವುದು ಉತ್ತಮ ಸಾಧನೆಯಾಗಿದ್ದು, ಅವನ ಮನೋಭಿಲಾಷೆಯು ಸಮಾಜದ ಆಸ್ತಿಯಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ಶಾಲೆಯ ದೈಹಿಕ ಶಿಕ್ಷಕ ವೈ.ಎನ್‌. ಪರಮೇಶ್‌.

ರಕ್ಷಿತ್‌ನ ಮುಂದಿನ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ಕನಸು ನನಸಾಗಲು ಸಹೃದಯಿಗಳ ನೆರವಿನ ಅಗತ್ಯವಿದ್ದು, ನೆರವು ನೀಡುವವರು ವಿಜಯ ಬ್ಯಾಂಕ್‌ ಬಿಳಗುಳ ಶಾಖೆಯ ಐಎಫ್‌ಎಸ್‌ಸಿ ಸಂಖ್ಯೆ ವಿಐಜೆಬಿ0001512, ಎಸ್‌.ಕೆ. ರಕ್ಷಿತ್‌ ಖಾತೆ ಸಂಖ್ಯೆ 151201111000029ಗೆ ನೆರವಾಗಬಹುದು. ಎಸ್‌.ಕೆ. ರಕ್ಷಿತ್‌ ಅವರನ್ನು 9482741043 ಸಂಪರ್ಕಿಸಬಹುದು.

ವಾಸುದೇವ್‌, ಮೂಡಿಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.