ADVERTISEMENT

ಬೈಕ್‌ ರ‍್ಯಾಲಿ ಅಬಾಧಿತ: ರವಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 7:08 IST
Last Updated 6 ಸೆಪ್ಟೆಂಬರ್ 2017, 7:08 IST

ಚಿಕ್ಕಮಗಳೂರು: ‘ಮಂಗಳೂರು ಚಲೋ ಬೈಕ್‌ ರ‍್ಯಾಲಿ ತಡೆಯುವುದು ಸಂವಿಧಾನ ವಿರೋಧಿ ನಡೆ. ಯಾವುದೇ ಅಡೆತಡೆ ಒಡ್ಡಿದರೂ ರ‍್ಯಾಲಿ ಕೈಬಿಡುವುದಿಲ್ಲ’ ಎಂದು ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರ‍್ಯಾಲಿಗೆ ವಿಧಿಸಿರುವ ನಿರ್ಬಂಧವನ್ನು ಧಿಕ್ಕರಿಸಿ, ಹೋರಾಟವನ್ನು ಮುಂದವರಿಸುತ್ತೇವೆ. ಮಂಗಳೂರನ್ನು ತಲುಪುತ್ತೇವೆ’ ಎಂದರು.

‘ನಮ್ಮದು ಭಯೋತ್ಪಾದಕ ಸಂಘಟನೆ ಅಲ್ಲ, ಬಾಂಬ್‌ ಇಟ್ಟುಕೊಂಡು ರ‍್ಯಾಲಿಗೆ ತೆರಳುತ್ತಿಲ್ಲ. ‘ರ‍್ಯಾಲಿ ಕುರಿತು ಬಿಜೆಪಿ ಸರಿಯಾದ ಮಾಹಿತಿ ನೀಡಿಲ್ಲ, ಹೀಗಾಗಿ ಅನುಮತಿ ಕೊಟ್ಟಿಲ್ಲ’ ಎಂದು ಗೃಹ ಸಚಿವರು ಹೇಳಿರುವುದು ಅವರ ಯೋಗ್ಯತೆಯನ್ನು ಸ್ಪಷ್ಟಪಡಿಸುತ್ತದೆ. ರ‍್ಯಾಲಿಗೆ ಅನುಮತಿ ಕೋರಿ 15 ದಿನಗಳ ಹಿಂದೆಯೇ ಮನವಿ ಸಲ್ಲಿಸಲಾಗಿದೆ’ ಎಂದು ಉತ್ತರಿಸಿದರು.

ADVERTISEMENT

‘ಕೋಮುಗಲಭೆ ಅಪಾಯ ನಿರೀಕ್ಷೆಯಿಂದಾಗಿ ನಿಷೇಧಾಜ್ಞೆ ಹೊರಡಿಸಿರುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಟಿಪ್ಪು ಸುಲ್ತಾನ್‌ ಜಯಂತಿಯಿಂದಾಗಿ ಕೊಡಗಿನಲ್ಲಿ ಕುಟ್ಟಪ್ಪ ಹತ್ಯೆಯಾಗಿತ್ತು. ಆ ಸಂದರ್ಭದಲ್ಲಿ ಕೋಮುಗಲಭೆ ಸಾಧ್ಯತೆ ಮುನ್ಸೂಚನೆ ವರದಿಯನ್ನು ಗುಪ್ತಚರ ದಳ ನೀಡಿತ್ತು. ಎಲ್ಲ ಗೊತ್ತಿದ್ದರೂ ರಾಜ್ಯ ಸರ್ಕಾರ ಈ ಜಯಂತ್ಯುತ್ಸವಕ್ಕೆ ಅನುಮತಿ ನೀಡಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.