ADVERTISEMENT

ಬ್ಲಾಕ್‌ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ನಗರಸಭೆ ಅಧ್ಯಕ್ಷರ ಮೇಲಿನ ಹಲ್ಲೆ ಪ್ರಕರಣ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 6:40 IST
Last Updated 28 ಮಾರ್ಚ್ 2017, 6:40 IST
ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಮೇಲೆ ನಡೆದಿರುವ ಹಲ್ಲೆ ಪ್ರಕರಣ ತನಿಖೆಯಾಗಬೇಕು ಎಂದು ಒತ್ತಾಯಿಸಿ ಬ್ಲಾಕ್  ಕಾಂಗ್ರೆಸ್ ಕಾರ್ಯ ಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
 
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ಕಾರ್ಯಕರ್ತರು, ಶಾಸಕ ಸಿ.ಟಿ.ರವಿ ಮತ್ತು ಬಿಜೆಪಿ  ವಿರುದ್ಧ ಘೋಷಣೆ ಕೂಗಿದರು.
ಪಕ್ಷದ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಪ್ರಥಮ ಪ್ರಜೆ ಮೇಲೆ ಹಲ್ಲೆ ನಡೆದಿರು ವುದು ನಗರದ ಜನತೆ ಮೇಲೆ ಹಲ್ಲೆಯಾದಂತೆ.

ಅಧ್ಯಕ್ಷರು ಏಕೆ ದೂರು ದಾಖಲಿ ಸಿಲ್ಲ. ಹಲ್ಲೆ ಮಾಡಿದ ಮಹಿಳೆಯೂ ಕೂಡ ಕಾರಣ ತಿಳಿಸದೆ  ಇರುವುದು ಏಕೆ? ಎನ್ನುವುದು ನಿಗೂಢವಾಗಿದೆ ಎಂದರು.
 
ಪ್ರಥಮ ಪ್ರಜೆ ಮೇಲೆ  ಏಕೆ ಹಲ್ಲೆಯಾಗಿದೆ ಎನ್ನುವುದನ್ನು ತಿಳಿಯುವುದು ಸಾರ್ವಜನಿಕರ ಹಕ್ಕು. ನೀತಿ, ಮೌಲ್ಯದ ಬಗ್ಗೆ  ಭಾಷಣ ಮಾಡುವ ಶಾಸಕ ಸಿ.ಟಿ.ರವಿ ಈ ಪ್ರಕರಣ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು. ಚುನಾಯಿತ ಪ್ರತಿನಿಧಿಗಳಿಗೆ ರಕ್ಷಣೆ ಇಲ್ಲ ಎಂದರೆ ನಗರದ ಜನತೆಗೆ ರಕ್ಷಣೆ ಇನ್ನೆಲ್ಲಿದೆ.

ಘಟನೆಯಿಂದ ಚಿಕ್ಕಮಗಳೂರು ಜನತೆ ತಲೆ ತಗ್ಗಿಸುವಂತಾಗಿದೆ. ಮಾಧ್ಯಮಗಳಲ್ಲಿ ಘಟನೆ ವರದಿ ಯಾದರೂ ಶಾಸಕರು ಮೌನ ವಹಿಸಿರು ವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
 
ಬಿಜೆಪಿ ಕಾರ್ಯಕರ್ತರು ಕ್ರಿಕೆಟ್‌ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದರೂ ಕೂಡ ಅವರ ಮೇಲೆ ಯಾವುದೇ ಕ್ರಮ ತೆಗದುಕೊಳ್ಳದಿರುವುದು ಬಿಜೆಪಿಯ ಭಂಡತನ ತೋರಿಸುತ್ತದೆ. ಜಯಪ್ರಕಾಶ್ ಹಗ್ಡೆಯವರಂತಹ ನಾಯಕರನ್ನು ಪಕ್ಷದಿಂದ  ಉಚ್ಚಾಟಿಸಿದ ಶಿಸ್ತು ಕಾಂಗ್ರೆಸ್ ಪಕ್ಷದಲ್ಲಿದೆ. 
 
ಜಿಲ್ಲಾ ಬಿಜೆಪಿ ಯುವ ಘಟಕದ ನಗರ ಅಧ್ಯಕ್ಷ  ಕಾಂಚನ್‌ಗೌಡ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು ಅಮಾನತು ಮಾಡದ ಪರಿಸ್ಥಿತಿ ಬಿಜೆಪಿಯಲ್ಲಿದೆ. ಇಂತವರು ನಗರಸಭೆಯಲ್ಲಿ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
 
ಸೋನಿಯಾ ಗಾಂಧಿ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದನ್ನು ಪ್ರಶ್ನಿಸುವ ಶಾಸಕರು, ನಗರಸಭೆ ಅಧ್ಯಕ್ಷರ ಮೇಲಿನ ಹಲ್ಲೆ ಪ್ರಕರಣ ಬಗ್ಗೆ ಚರ್ಚಿಸಲು ಮೊದಲು  ವೇದಿಕೆಗೆ ಬರಲಿ. ಆನಂತರ ಸೋನಿಯಾ ಗಾಂಧಿ ಅವರ ಬಗ್ಗೆ ಮಾತನಾಡಲು ಶಾಸಕರಿಗೆ ಅರ್ಹತೆ ಬರುತ್ತದೆ. ಜನಪ್ರತಿನಿಧಿ ಮೇಲೆ ನಡೆದಿರುವ ಹಲ್ಲೆಯನ್ನು ಪಕ್ಷಾತೀತವಾಗಿ ಖಂಡಿಸಲಾಗುತ್ತಿದೆ. ನ್ಯಾಯ ಕೇಳಬೇಕಾದ ಬಿಜೆಪಿ ಏಕೆ ದಿವ್ಯ ಮೌನ ವಹಿಸಿದೆ ಎಂದು ಪ್ರಶ್ನಿಸಿದರು.
 
ಪಕ್ಷದ ಜಿಲ್ಲಾ ಪ್ರಧಾನಕಾರ್ಯದರ್ಶಿ  ಬಿ.ಎಂ.ಸಂದೀಪ್ ಮಾತನಾಡಿ, ಶಾಸಕ ಸಿ.ಟಿ.ರವಿ ಕಡಿಬೇಕು, ರಕ್ತದೋಕುಳಿ ಹರಿಸಬೇಕು ಎಂದು ರಾಜ್ಯದಾದ್ಯಂತ ಪ್ರಚೋದನಾಕಾರಿ ಭಾಷಣ ಮಾಡುತ್ತಾರೆ. ಕವಿತಾ ಶೇಖರ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೌನ ವಹಿಸಿರುವುದನ್ನು  ಗಮನಿಸಿದರೆ, ಹಲ್ಲೆ ಪ್ರಕರಣದ ಹಿಂದೆ ದೊಡ್ಡ ವಿಚಾರವಿರುವ ಸಂಶಯ ಮೂಡುತ್ತಿದೆ. ಶಾಸಕರು ಬೆಟ್ಟಿಂಗ್ ದಂಧೆ ಸೇರಿದಂತೆ ಹಲವು ಪ್ರಕರಣಗಳ ನೇತೃತ್ವ ವಹಿಸುತ್ತಿದ್ದಾರೆಂದು ಜನರು ಬೀದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಎಚ್.ಪಿ.ಮಂಜೇಗೌಡ ಮಾತನಾಡಿ, ನಗರದ 1.25 ಲಕ್ಷ ಜನರ ಪ್ರತಿನಿಧಿಯಾಗಿರುವ ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಅವರಿಗೆ ಆಗಿರುವ ಅವಮಾನದಿಂದ ಇಡೀ ಚಿಕ್ಕಮಗಳೂರು ಜನತೆ ತಲೆ ತಗ್ಗಿಸುವಂತಾಗಿದೆ. ಹಲ್ಲೆ ಮಾಡಿದ ಮಹಿಳೆಗೂ ನಗರಸಭೆ ಅಧ್ಯಕ್ಷರಿಗೂ ಏನು ಸಂಬಂಧ ಎನ್ನುವುದನ್ನು ಶಾಸಕರೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
 
ನಗರಸಭೆ ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ, ರೂಬೆನ್ ಮೊಸೆಸ್, ಸಾಂಬಾರ ಮಂಡಳಿ ನಿರ್ದೇಶಕ ಪವನ್, ಹಿರೇಮಗಳೂರು ರಾಮಚಂದ್ರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.