ADVERTISEMENT

ಭೌತಿಕ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ಅವಶ್ಯ

ಡಾ.ಅಂಬೇಡ್ಕರ್ ಜಯಂತಿ: ಡಾ.ಕೆ.ಉಮೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 6:53 IST
Last Updated 15 ಏಪ್ರಿಲ್ 2018, 6:53 IST

ನರಸಿಂಹರಾಜಪುರ: ಭಾರತಕ್ಕೆ ಭೌತಿಕ ಸ್ವಾತಂತ್ರ್ಯ ದೊರೆಯುವುದಕ್ಕಿಂತಲೂ ಸಾಮಾಜಿಕ ಸ್ವಾತಂತ್ರ್ಯ ದೊರೆಯುವುದು ಅವಶ್ಯಕ ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ನಿಲುವಾಗಿತ್ತು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 127ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನ್ ರಾಂ ಅವರ 111ನೇ ಜಯಂತಿ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ದೇಶದಲ್ಲಿ ಮನುಷ್ಯರನ್ನು ಮನುಷ್ಯರನ್ನಾಗಿ ನೋಡದ ಸ್ಥಿತಿ, ಶ್ರಮಸಂಸ್ಕೃತಿಯಿಂದ ಬೇವರು ಹರಿಸಿ ಉತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದರು ಹಸಿವಿನಿಂದ ನರಳುತ್ತಿದ್ದ ಜನರ ಧ್ವನಿಯಾಗಿ ಅಂಬೇಡ್ಕರ್, ಜಗಜೀವರಾಂ ಇದ್ದರು. ಜಾತಿ ವ್ಯವಸ್ಥೆಯ ಬೇರು ವರ್ಣಾಶ್ರಮದಲ್ಲಿದೆ. ವರ್ಣಾಶ್ರಮದ ಬೇರು ಬ್ರಾಹ್ಮಣ್ಯದಲ್ಲಿದೆ. ಬ್ರಾಹ್ಮಣ್ಯದ ಬೇರುವೈದ್ಯಿಕದಲ್ಲಿದೆ. ಧರ್ಮದ ಬೇರು ನಿರಕುಂಶ ಅಧಿಕಾರದಲ್ಲಿದೆ. ನಿರಕುಂಶದ ಬೇರು ರಾಜಕೀಯದಲ್ಲಿದೆ ಎಂಬುದು ಇವರ ಚಿಂತನೆಯಾಗಿತ್ತು ಎಂದು ಅವರು ಹೇಳಿದರು.

ADVERTISEMENT

ದೇಶದಲ್ಲಿದಲ್ಲಿದ್ದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಅಸಮಾನತೆ ಹೋಗ ಲಾಡಿಸಲು ಸಾಮಾಜಿಕ ಚಳವಳಿ ಹುಟ್ಟು ಹಾಕಿದರು. ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಅಮೂಲಾಗ್ರ ಬದಲಾವಣೆ ತಂದು ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಮೂಲಕ ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು. ಜಾತ್ಯಾತೀತ ಮನಸ್ಸು ಮನೆಯಿಂದಲೇ ಬಂದಾಗ ಮಾತ್ರ ಜಾತಿ ವ್ಯವಸ್ಥೆಬದಲಾವಣೆ ಸಾಧ್ಯವಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್ ಪ್ರಾಸ್ತಾವಿಕ ಮಾತನಾಡಿ, ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವು, ಅಪಮಾನ,ಅವಮಾನಗಳನ್ನು ಮೆಟ್ಟಿನಿಂತು ದೇಶಕ್ಕೆ ಉತ್ತಮ ಸಂವಿಧಾನ ನೀಡಿದರು. ಅಂಬೇಡ್ಕರ್ ಇಲ್ಲದಿದ್ದರೆ ದಲಿತರಿಗೆ, ಹಿಂದುಳಿದವರಿಗೆ, ಕಾರ್ಮಿಕರಿಗೆ,ಮಹಿಳೆಯರಿಗೆ ನ್ಯಾಯ ಸಿಗುತ್ತಿರಲಿಲ್ಲ. ಅರ್ಥಶಾಸ್ತ್ರಜ್ಞರಾಗಿ, ರಾಜಕೀಯ ನಿಪುಣರಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು  ಎಂದರು.

ತಾಲ್ಲೂಕು ಪಂಚಾಯಿತಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕೆ.ಹೊಂಗಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರವಿಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ತಹಶೀಲ್ದಾರ್ ಟಿ.ಗೋಪಿನಾಥ್ ವಹಿಸಿ ಮಾತನಾಡಿದರು. ಸಹಾಯಕ ಪಶುವೈದ್ಯಾಧಿಕಾರಿ ಡಾ.ವಿಜಯ
ಕುಮಾರ್, ಸಹಾಯಕ ಕೃಷಿ ನಿರ್ದೇಶಕ ಪರಮೇಶ್ವರಪ್ಪ, ಇಸಿಓ ರಾಜಕುಮಾರ್, ಸಮಾಜ ಕಲ್ಯಾಣ ಇಲಾಖೆಯ ರಾಥೋಡ್ ಅಶ್ವಿನಿ, ಲೋಹಿತ್‌
ಕುಮಾರ್, ವಿಜಯಕುಮಾರ್ ಪಾಲ್ಗೊಂಡಿದ್ದರು.

**

ಅಂಬೇಡ್ಕರ್ ಅವರ ಜೀವನಶೈಲಿ,ತತ್ವ, ಆದರ್ಶಗಳನ್ನು ಅಳವಡಿಸಿಕೊಂಡಾಗ ಭವ್ಯ ಭಾರತ ಕಟ್ಟಲು ಸಾಧ್ಯವಾಗುತ್ತದೆ – ಡಾ.ಕೆ.ಉಮೇಶ್,ಸಮಾಜಕಾರ್ಯವಿಭಾಗದ ಮುಖ್ಯಸ್ಥ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.