ADVERTISEMENT

ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 7:41 IST
Last Updated 24 ಮೇ 2017, 7:41 IST

ನರಸಿಂಹರಾಜಪುರ: ಪಟ್ಟಣದ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಅದ್ಧೂರಿ ಚಾಲನೆ ನೀಡಲಾಯಿತು. ಜಾತ್ರೆಯ ಅಂಗವಾಗಿ ಬೆಳಿಗ್ಗೆ  ಪ್ರವಾಸಿ ಮಂದಿರದ ಬಳಿಯಿರುವ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಮೇದರ ಬೀದಿ ಅಂತರಘಟ್ಟಮ್ಮ, ಹಳೇಪೇಟೆ ಗುತ್ತ್ಯಮ್ಮ , ಅಂಬೇಡ್ಕರ್ ನಗರದ ಮುತ್ತಿನಮ್ಮ ಉತ್ಸವ ಮೂರ್ತಿಗಳೊಂದಿಗೆ  ಮಾರಿಕಾಂಬ ದೇವಿಯ ವಿಗ್ರಹ ಕೆತ್ತನೆ ಮಾಡಿರುವ ಸುಂಕದಕಟ್ಟೆಯಲ್ಲಿರುವ ಗದ್ದುಗೆಯವರೆಗೆ ಕಳಸದ ಮೆರವಣಿಗೆ ನಡೆಸಲಾಯಿತು. ಗದ್ದುಗೆಯಲ್ಲಿ  ಮಾರಿ ವಿಗ್ರಹಕ್ಕೆ ದೃಷ್ಟಿ ಬೊಟ್ಟು ಇಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೃಷ್ಟಿ ಬೊಟ್ಟು ಇಡುವ ಸಮಯದಲ್ಲಿ ಪ್ರಜ್ವಲಿಸುವ ಜ್ವಾಲೆಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಕೆತ್ತನೆ ಮಾಡಿದ ಶಿಲ್ಪಿಗಳು ದೇವಿಯ ವಿಗ್ರಹದ ಅಣತಿ ದೂರದಲ್ಲಿಟ್ಟ ಹುಲ್ಲಿನ ಬಣವೆಗೆ ಜ್ವಾಲೆ ಪ್ರಜ್ವಲಿಸುತ್ತಿದ್ದಂತೆ ನೆರೆದಿದ್ದ ಸಾರ್ವಜನಿಕರು ಚಪ್ಪಾಳೆ ಹೊಡೆದು ಕುಣಿದು ಕುಪ್ಪಳಿಸಿದರು. ಶಿಲ್ಪಿಗಳಿಗೆ ತಾಂಬೂಲ, ಗೌರವ ಸಮರ್ಪಣೆ ಮಾಡಲಾಯಿತು.

ADVERTISEMENT

ಪೂಜಾ ವಿಧಿ ವಿಧಾನಗಳು ಮುಗಿದ ನಂತರ ದೇವಿಯನ್ನು ಅಗ್ರಹಾರದವರೆಗೆ ವಾದ್ಯ ಘೋಷಗಳೊಂದಿಗೆ ದೇವಿಯ ಮೆರವಣಿಗೆ ಮೂಲಕ ತಂದು ಅಗ್ರ ಹಾರದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸ ಲಾಯಿತು. ಇಲ್ಲಿ ಪುಣ್ಯಹವಾಚನ, ಪ್ರಾಣ ಪ್ರತಿಷ್ಠೆ, ಷೋಡಶೋಪಾಚಾರ ಪೂಜೆ, ಮಡಿಲು ಸೇವೆ, ಮುಡಿತುಂಬುವ ಕಾರ್ಯಕ್ರಮ ನಡೆಯಿತು.

ಸಾರ್ವಜನಿಕ ರಿಗೆ ಪ್ರಸಾದ ವಿನಿಯೋಗ ಮಾಡ ಲಾಯಿತು. ಸಂಜೆ ದೇವಿಯ ದರ್ಶನಕ್ಕೆ  ಸಾವಿರಾರೂ ಸಂಖ್ಯೆಯಲ್ಲಿ ಅದರಲ್ಲೂ ಹೆಚ್ಚಾಗಿ ಮಹಿಳೆಯರು ಭಾಗವಹಿಸಿ ದ್ದರು. ರಾತ್ರಿ 10ರ ನಂತರ ವಿದ್ಯುದೀಪ ಅಲಂಕಾರ ಮಂಟಪದಲ್ಲಿ ಅಗ್ರಹಾರದ ಗದ್ದುಗೆಯಿಂದ ಮೆರವಣಿಗೆಯೊಂದಿಗೆ ಪ್ರವಾಸಿ ಮಂದಿರ ಬಳಿಯಿರುವ ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.