ADVERTISEMENT

ರಸ್ತೆ ವಿಸ್ತರಣೆ ಶೀಘ್ರ ಪೂರ್ಣಗೊಳಿಸಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 9:31 IST
Last Updated 13 ಡಿಸೆಂಬರ್ 2017, 9:31 IST
ಚಾಮರಾಜನಗರದಲ್ಲಿ ಮಂಗಳವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಉಸ್ತುವಾರಿ ಸಭೆಯಲ್ಲಿ ಸಂಸದ ಆರ್. ಧ್ರುವನಾರಾಯಣ ಮಾತನಾಡಿದರು
ಚಾಮರಾಜನಗರದಲ್ಲಿ ಮಂಗಳವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಉಸ್ತುವಾರಿ ಸಭೆಯಲ್ಲಿ ಸಂಸದ ಆರ್. ಧ್ರುವನಾರಾಯಣ ಮಾತನಾಡಿದರು   

ಚಾಮರಾಜನಗರ: ನಗರ ಮತ್ತು ಪಟ್ಟಣ ಪ್ರದೇಶ ವ್ಯಾಪ್ತಿಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಸಂಸದ ಆರ್. ಧ್ರುವನಾರಾಯಣ ಸೂಚಿಸಿದರು. ನಗರದಲ್ಲಿ ಮಂಗಳವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ನ. 4ರ ಒಳಗೆ ಪೂರ್ಣಗೊಳಿಸುವು ದಾಗಿ ಹೇಳಿದ್ದ ಕಾಮಗಾರಿ ಶೇ 50ರಷ್ಟು ಸಹ ಪೂರ್ಣಗೊಂಡಿಲ್ಲ. ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ರಸ್ತೆಯ ಇನ್ನೊಂದು ಬದಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ಸಮರ್ಪಕ ವ್ಯವಸ್ಥೆ ಮಾಡಬೇಕು. ಆದರೆ, ಹಳ್ಳದಿಣ್ಣೆಗಳಿಂದ ಕೂಡಿರುವ ರಸ್ತೆಯಲ್ಲಿ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಹನೂರು ಶಾಸಕ ಆರ್. ನರೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ದಿನಕ್ಕೆ 100 ಮೀಟರ್‌ ಕಾಂಕ್ರೀಟ್ ರಸ್ತೆ ನಿರ್ಮಿಸಲು ಸಾಧ್ಯ. ಸಿಮೆಂಟ್‌ ಕೊರತೆಯಿಂದ 50 ಮೀಟರ್‌ ಕೂಡ ಸಾಧ್ಯವಾಗುತ್ತಿಲ್ಲ. ನ್ಯಾಯಾಲಯದಲ್ಲಿ ವಿವಾದ ಇದ್ದಿದ್ದರಿಂದ ವಿಳಂಬವಾಯಿತು ಎಂದು ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಎಂಜಿನಿಯರ್‌ ಕಾಂತರಾಜು ವಿವರಣೆ ನೀಡಿದರು.

ADVERTISEMENT

ಜನರ ಓಡಾಟಕ್ಕೆ ಅಡ್ಡಿಯಾಗದಂತೆ ಕೆಲಸ ನಡೆಸಬೇಕು. ಗುತ್ತಿಗೆದಾರರ ಬಾಕಿ ಬಿಲ್‌ಅನ್ನು ಬಿಡುಗಡೆ ಮಾಡಬೇಕು. ರಾತ್ರಿ ವಾಹನ ಸಂಚಾರ ಕಡಿಮೆ ಇರುವುದರಿಂದ ಆ ವೇಳೆ ಕಾಮಗಾರಿ ನಡೆಸಿ. ಫೆಬ್ರುವರಿ ಮೊದಲ ವಾರದೊಳಗೆ ಪೂರ್ಣಗೊಳ್ಳಬೇಕು ಎಂದು ಸಂಸದ ಧ್ರುವನಾರಾಯಣ ಸೂಚಿಸಿದರು.

ನಗರದಲ್ಲಿನ ಅವ್ಯವಸ್ಥೆ: ಚಾಮರಾಜ ನಗರದಲ್ಲಿ ಎಲ್ಲೆಡೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ವ್ಯವಸ್ಥೆ ಸರಿಯಿಲ್ಲದೆ ಪರದಾಡುವಂತಾಗಿದೆ. ದಿನಕ್ಕೊಂದು ರಸ್ತೆಯ ಸಂಪರ್ಕ ಕಡಿತಗೊಳಿಸುತ್ತಾರೆ. ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂತು.

ಇನ್ನೂ ವಿದ್ಯುತ್‌ ಇಲ್ಲ: ಜಿಲ್ಲೆ ಅನೇಕ ಗ್ರಾಮಗಳು ಇಂದಿಗೂ ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿರುವುದಕ್ಕೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ದೀನ್‌ ದಯಾಳ್‌ ಗ್ರಾಮ ಜ್ಯೋತಿ ಯೋಜನೆಯಡಿ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಸಮರ್ಪ ಕವಾಗಿ ನಡೆಯುತ್ತಿಲ್ಲ. ಪುರಾಣಿಪೋಡು, ಪಾಲಾರ್, ತುಳಸಿಕೆರೆ, ಇಂಡಿಗನತ್ತ ಮುಂತಾದೆಡೆ ಮನೆಗಳಿಗೆ ವಿದ್ಯುತ್ ಲಭ್ಯವಾಗಿಲ್ಲ. ಜಿಲ್ಲೆಯಲ್ಲಿ ಯಾವ ಗ್ರಾಮವೂ ವಿದ್ಯುತ್‌ ಸೌಕರ್ಯದಿಂದ ವಂಚಿತವಾಗಬಾರದು ಎಂದರು.

ಆಸ್ಪತ್ರೆ ನಿರ್ಮಾಣ: ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಆದರೆ, ಅಲ್ಲಿ ಆಸ್ಪತ್ರೆ ವ್ಯವಸ್ಥೆ ಸರಿಯಾಗಿಲ್ಲ. ವೆಂಟಿಲೇಟರ್‌ ಸೌಲಭ್ಯವಿಲ್ಲ. ಮಹಿಳಾ ವೈದ್ಯರು ಕೂಡ ಇಲ್ಲ ಎಂದು ಮಲೆಮಹದೇಶ್ವರ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಕಾವೇರಿ ದೂರಿದರು.

ವೆಂಟಿಲೇಟರ್‌ ಕೊರತೆಯಿಂದ ಜಿಲ್ಲೆಯಿಂದ ಮೈಸೂರಿಗೆ ಕರೆದೊಯ್ಯುವ ಮಾರ್ಗದಲ್ಲಿಯೇ ರೋಗಿಗಳು ಸಾಯುವ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ವೆಂಟಿಲೇಟರ್‌ ಸೌಲಭ್ಯವುಳ್ಳ ಆ್ಯಂಬುಲೆನ್ಸ್‌ಗಳನ್ನು ಒದಗಿಸಬೇಕು. ಮಹದೇಶ್ವರ ಬೆಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

‘ನೀವು ಸ್ಟ್ರಿಕ್ಟ್‌ ಆಗಬೇಕು’: ‘ವಿವಿಧ ಯೋಜನೆಗಳಡಿ ಸಾಲ ನೀಡಲು ನಿರಾಕರಿಸುವ ಬ್ಯಾಂಕ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ನೀವು ಸ್ಟ್ರಿಕ್ಟ್‌ ಆಗಬೇಕು’ ಎಂದು ಧ್ರುವನಾರಾಯಣ್‌ ಅವರು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಿ ಸುನಂದಾ ಅವರಿಗೆ ಸಲಹೆ ನೀಡಿದರು.

‘ವಿವಿಧ ಯೋಜನೆಗಳಡಿ ಎಷ್ಟು ಮಂದಿಗೆ ಸಾಲ ನೀಡಲಾಗಿದೆ’ ಎಂಬ ಪ್ರಶ್ನೆಗೆ ಉತ್ತರ ನೀಡಲು ತಡಬಡಾಯಿಸಿದ ಅವರನ್ನು, ‘ಎಲ್ಲ ವಿವರಗಳು ನಿಮ್ಮ ಬಾಯಲ್ಲಿಯೇ ಇರಬೇಕು. ಮಾಹಿತಿ ತರದಿದ್ದರೆ ಸಭೆಗೆ ಏಕೆ ಬರುತ್ತೀರಿ?’ ಎಂದು ತರಾಟೆಗೆ ತೆಗೆದುಕೊಂಡರು.

ಬಡಹೆಣ್ಣುಮಗಳೊಬ್ಬಳಿಗೆ ಶೈಕ್ಷಣಿಕ ಸಾಲ ನೀಡದೆ ಸತಾಯಿಸುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ. ಚಂದ್ರು ಆರೋಪಿಸಿದರು. ಪ್ರಮುಖ ಬ್ಯಾಂಕ್‌ಗಳಲ್ಲಿ ಉತ್ತರ ಭಾರತದಿಂದ ಬಂದವರೇ ಹೆಚ್ಚಿದ್ದಾರೆ. ಅವರು ಕನ್ನಡ ಕಲಿಯುತ್ತಿಲ್ಲ. ಕಡ್ಡಾಯವಾಗಿ ಕನ್ನಡ ಕಲಿಯುವಂತೆ ಮತ್ತು ಜನರಿಗೆ ಸರಿಯಾಗಿ ಸ್ಪಂದಿಸುವಂತೆ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ನಿರ್ದೇಶಿಸಲಾಯಿತು.

ನರೇಗಾ ಅನುಷ್ಠಾನ ಮತ್ತು ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯಗಳ ನಿರ್ಮಾಣ ಕಾರ್ಯಗಳ ಪ್ರಗತಿಯಲ್ಲಿ ಜಿಲ್ಲೆ ಹಿಂದುಳಿದಿರುವ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಶಾಸಕ ಎಸ್‌. ಜಯಣ್ಣ, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಉಪಾಧ್ಯಕ್ಷ ಜೆ. ಯೋಗೇಶ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಹರೀಶ್‌ಕುಮಾರ್‌ ಇದ್ದರು.

ಟವರ್‌ಗೆ ಜಾಗವಿಲ್ಲ

ಜಿಲ್ಲೆಯಲ್ಲಿ 49 ಬಿಎಸ್‌ಎನ್‌ಎಲ್‌ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿದೆ. ಇನ್ನೂ 42 ಟವರ್‌ಗಳ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹೊನ್ನಹಳ್ಳಿ, ಯಣಗುಂಬ ಮತ್ತು ಡೊಳ್ಳೀಪುರಗಳಲ್ಲಿ ಟವರ್‌ ಸ್ಥಾಪನೆ ಲಾಭಕರ ಎನಿಸದ ಕಾರಣ ಅನುಮತಿ ದೊರೆತಿಲ್ಲ. ಯರಗನಹಳ್ಳಿ, ಚಿಕ್ಕಾಟಿ, ಶಿವಪುರ, ಮೇಲುಕಾಮನಹಳ್ಳಿ, ಮಂಗಲ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಕುರಹಟ್ಟಿ ಹೊಸೂರು ಮುಂತಾದೆಡೆ ಟವರ್ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಕೆಲವೆಡೆ ಗ್ರಾಮ ಪಂಚಾಯಿತಿಯಿಂದ ಜಾಗ ದೊರೆಯುತ್ತಿಲ್ಲ ಎಂದು ಬಿಎಸ್‌ಎನ್‌ಎಲ್‌ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.