ADVERTISEMENT

‘ವಸತಿ ಶಾಲೆಗೆ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಅನುದಾನ ಬಳಕೆಯಾಗಿಲ್ಲ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 8:50 IST
Last Updated 31 ಡಿಸೆಂಬರ್ 2017, 8:50 IST

ಚಿಕ್ಕಮಗಳೂರು: ‘ವಸತಿ ಶಾಲೆಗಳಿಗೆ ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣವನ್ನು ಸಮಾಜ ಕಲ್ಯಾಣ ಇಲಾಖೆಯವರು ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಬಡ್ಡಿ ತಿನ್ನುತ್ತಿದ್ದಾರೆ. ಶಾಲೆಗಳಿಗೆ ಕಟ್ಟಡ ಕಟ್ಟಲು ಮುಂದಾಗುತ್ತಿಲ್ಲ’ ಎಂದು ಸಂಸದೆ ಶೋಭಾ ಕರಂದ್ಲಾಜೆ ದೂಷಿಸಿದರು.

ನಗರದ ಡಿಎಸಿಜಿ ಪಾಲಿಟೆಕ್ನಿಕ್‌ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಉತ್ತರ ನೀಡಬೇಕಿದೆ' ಎಂದರು.

ಅನ್ನಭಾಗ್ಯ ಯೋಜನೆಯನ್ನು ತನ್ನ ಯೋಜನೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರವು ಕೆ.ಜಿಗೆ ₹ 32 ದರದಲ್ಲಿ ಅಕ್ಕಿ ಖರೀದಿಸಿ ಕೆ.ಜಿಗೆ ₹ 3 ದರದಲ್ಲಿ, ಕೆ.ಜಿಗೆ ₹ 22 ದರದಲ್ಲಿ ಗೋಧಿ ಖರೀದಿಸಿ ಕೆ.ಜಿಗೆ ₹ 2 ದರದಲ್ಲಿ ಕರ್ನಾಟಕಕ್ಕೆ ಪೂರೈಸುತ್ತಿದೆ. ಕರ್ನಾಟಕದ ಪಡಿತರಕ್ಕಾಗಿ ಪ್ರತಿ ತಿಂಗಳು ಕೇಂದ್ರ ಸರ್ಕಾರವು ₹ 440 ಕೋಟಿ ವೆಚ್ಚ ಮಾಡುತ್ತಿದೆ. ಈ ಅಕ್ಕಿ, ಗೋಧಿಯನ್ನು ಕಾಂಗ್ರೆಸ್‌ನ ಪುಡಾರಿಗಳು ರಿಪಾಲಿಶ್‌ ಮಾಡಿ ಪಕ್ಕದ ರಾಜ್ಯಗಳಿಗೆ ಮಾರಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ, ಮಹಿಳಾ ಸ್ವಸಹಾಯ ಸಂಘಗಳವರಿಗೆ ಶೂನ್ಯ ಬಡ್ಡಿದರದಲ್ಲಿ ₹ 3 ಲಕ್ಷದವರೆಗೆ ಸಾಲ ಒದಗಿಸಲು ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ಕೇಂದ್ರ ಸರ್ಕಾರದ ಅನುದಾನ ವಿನಿಯೋಗಿಸಲು, ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಗಮನಹರಿಸುತ್ತಿಲ್ಲ. ‘ ಘೋಷಣೆ. ಭಾಷಣದಿಂದ ಅಭಿವೃದ್ಧಿ ಆಗುವುದಿಲ್ಲ. ಅದಕ್ಕೆ ಇಚ್ಛಾಶಕ್ತಿ ಬೇಕು. ಅದಕ್ಕಾಗಿ ನೀವೆಲ್ಲರೂ ಬಿಜೆಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ವಿವಿಧ ಊರುಗಳ ಸಹಸ್ರಾರು ಜನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಗರದಲ್ಲಿ ಫ್ಲಕ್ಸ್‌ಗಳು, ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು. ಮೋದಿ, ಅಮಿತ್‌ಷಾ, ಯಡಿಯೂರಪ್ಪ ಭಾವಚಿತ್ರಗಳಿದ್ದ ಪರಿವರ್ತನಾ ಯಾತ್ರೆ ಟಿ–ಶರ್ಟ್‌ಗಳನ್ನು ಯವಕರು ತೊಟ್ಟಿದ್ದರು.

ಉಂಡೇದಾಸರಹಳ್ಳಿಯ ಪರ್ವಿಜ್‌ ಮತ್ತು ಸ್ನೇಹಿತರು ಕಾಂಗ್ರೆಸ್‌ ತೊರೆದು, ಎಂ.ಸಿ.ಅಶೋಕ್‌ ಮತ್ತು ಎಚ್‌.ಎನ್‌.ಮಂಜಯ್ಯ ಜೆಡಿಎಸ್‌ ತೊರೆದು ಬಿಜೆಪಿ ಸೇರಿದರು.

ಬಿಜೆಪಿ ಮುಖಂಡರಾದ ಎಂ.ಪಿ.ರೇಣುಕಾಚಾರ್ಯ, ಆಯನೂರು ಮಂಜುನಾಥ್‌, ಡಿ.ಎನ್‌.ಜೀವರಾಜ್‌, ಬಿ.ಎಸ್‌.ಚೈತ್ರಶ್ರೀ, ರಾಮಸ್ವಾಮಿ ಶೆಟ್ಟಿಗದ್ದೆ, ರಾಜಶೇಖರ್‌, ಶಿಲ್ಪಾರಾಜಶೇಖರ್‌, ರವೀಂದ್ರ ಬೆಳವಾಡಿ, ಎಚ್‌.ಡಿ.ತಮ್ಮಯ್ಯ, ಎಂ.ಪಿ.ಕುಮಾರಸ್ವಾಮಿ, ಈ.ಆರ್.ಮಹೇಶ್‌, ಬಿ.ಜಿ.ಸೋಮಶೇಖರಪ್ಪ, ಸಿ.ಎಚ್‌.ಲೋಕೇಶ್‌, ಕೋಟೆ ರಂಗನಾಥ್‌, ಕವಿತಾ ಲಿಂಗರಾಜು, ಜಸಂತಾ ಅನಿಲ್‌ಕುಮಾರ್‌, ಕಲ್ಮರುಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.