ADVERTISEMENT

ವಿದ್ಯುತ್‌ ಸಮಸ್ಯೆ: ಮೆಸ್ಕಾಂ ಕಚೇರಿಗೆ ಮುತ್ತಿಗೆ ನಾಳೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 5:55 IST
Last Updated 14 ಮೇ 2017, 5:55 IST

ಮೂಡಿಗೆರೆ: ತಾಲ್ಲೂಕಿನ ಬಣಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕಟ್ಟೆ, ಹೆಗ್ಗುಡ್ಲು , ಮತ್ತಿತರ ಭಾಗಗಳಲ್ಲಿ ವಿದ್ಯುತ್‌ ಕೊರತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಮೇ 15 ರಂದು ಬಣಕಲ್‌ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಬಣಕಲ್‌ ಹೋಬಳಿಯಲ್ಲಿ ಲೋಡ್‌ಶೆಡ್ಡಿಂಗ್‌ ಜಾರಿಯಲ್ಲಿದ್ದು, ತಿಂಗಳಲ್ಲಿ ಹದಿನೈದು ದಿನಗಳ ಕಾಲ ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಹದಿನೈದು ದಿನಗಳ ಕಾಲ ಮಧ್ಯಾಹ್ನ 12 ರಿಂದ ಸಂಜೆ 6 ವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿ ಸಲಾಗುತ್ತಿದೆ.

ಉಳಿದ ಅವಧಿಯಲ್ಲೂ ಬೇಕಾಬಿಟ್ಟಿ ವಿದ್ಯುತ್‌  ಸ್ಥಗಿತಗೊಳಿಸುತ್ತಿರುವುದರಿಂದ ಕಳೆದ ಒಂದೂವರೆ ತಿಂಗಳಿನಿಂದ ಈ ಗ್ರಾಮಗಳಿಗೆ ವಿದ್ಯುತ್‌ ಇಲ್ಲದೆ, ಕುಡಿಯುವ ನೀರಿನ ಪೂರೈಕೆ ಕುಂಠಿತವಾಗಿದೆ.

ADVERTISEMENT

ಸಮಸ್ಯೆಯನ್ನು ಬಗೆಹರಿಸುವಂತೆ ಹಲವು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ಒತ್ತಾಯಿಸಿದ್ದರೂ ಬಣಕಲ್‌ ಉಪ ವಿದ್ಯುತ್‌ ವಿತರಣಾ ಘಟಕದಲ್ಲಿರುವ ಅಧಿಕಾರಿಗಳು ಉಡಾಫೆಯಾಗಿ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಬಣಕಲ್‌ ಗ್ರಾಮ ಪಂಚಾಯಿತಿ ಸದಸ್ಯ ಹೆಗ್ಗುಡ್ಲು ಸತೀಶ್‌ ಪ್ರಜಾವಾಣಿಯೊಂದಿಗೆ ಮಾತನಾಡಿ, ‘ಬಣಕಲ್‌ ಹೋಬಳಿಯ ಚಕ್ಕಮಕ್ಕಿ, ಬಗ್ಗಸಗೋಡು, ಕೊಟ್ಟಿಗೆಹಾರ, ಗುಡ್ಡಟ್ಟಿ, ಹೆಗ್ಗುಡ್ಲು, ತರುವೆ, ದೊಡ್ಡನಂದಿ ಮುಂತಾದ ಭಾಗಗಳಲ್ಲಿ ವಿದ್ಯುತ್‌ ಸಮಸ್ಯೆಯಿದೆ. ಹೋಬಳಿಯಲ್ಲಿ ಸಣ್ಣದಾಗಿ ಮಳೆಯಾದರೂ ಎರಡು, ಮೂರು ದಿನಗಳ ಕಾಲ ವಿದ್ಯುತ್‌ ಸ್ಥಗಿತಗೊಳಿಸಲಾಗುತ್ತದೆ.

ಪ್ರಶ್ನಿಸಿದರೆ ಗ್ರಾಮಸ್ಥರೆಲ್ಲಾ ಸೇರಿ ಜಂಗಲ್‌ ಬಿಡಿಸಿ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಇಲ್ಲಿ ಕಾರ್ಯನಿರ್ವಹಿಸುವ ಮೆಸ್ಕಾಂ ಅಧಿಕಾರಿಗಳು ದೂರವಾಣಿ ಕರೆಯನ್ನು ಸ್ವೀಕರಿಸುವುದೇ ಇಲ್ಲ. ಹಲವು ಬಾರಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರೂ ಕ್ರಮಕ್ಕೆ ಮುಂದಾಗಿಲ್ಲ.

ಇದರಿಂದ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನಿರಿನ ಪೂರೈಕೆ ಮಾಡಲು ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಮೆಸ್ಕಾಂ ಕಚೇರಿಗೆ ಮುತ್ತಿಗೆಹಾಕಿ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟಿಸಲಾ ಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.