ADVERTISEMENT

‘ವ್ಯಸನದ ಬದುಕು ಹಸನಾಗಲು ಯೋಗ’

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:39 IST
Last Updated 22 ಮೇ 2017, 5:39 IST

ಬೀರೂರು: ಮಂದಹಾಸ ಕಳೆದು ಕೊಂಡು ಮಾರಣಾಂತಕವಾಗುತ್ತಿರುವ ಮನುಷ್ಯನ ಬದುಕು ವ್ಯಸನ ಮುಕ್ತವಾಗಿ ಹಸನಾಗಲು ಯೋಗದ ಅಗತ್ಯವಿದೆ ಎಂದು ರಂಭಾಪುರಿ ಶಾಖಾಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

ಬೀರೂರಿನ ಎಸ್‌ಜೆಎಂ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಆರೋಗ್ಯಧಾಮ ಯೋಗಕೇಂದ್ರ ಮತ್ತು ಶಿವಮೊಗ್ಗದ ಯೋಗವಿಸ್ಮಯ ಕೇಂದ್ರಗಳ ಆಶ್ರಯದಲ್ಲಿ ಆರಂಭವಾದ ಯೋಗಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಆರೋಗ್ಯಪೂರ್ಣ ಜೀವನ ಕಳೆದಕೊಂಡು ಚಟುವಟಿಕೆ ರಹಿತ ಸೋಮಾರಿ ಬದುಕು ಸಾಗಿಸುತ್ತಿರುವ ಮನುಷ್ಯನಿಗೆ ನಾನೇಕೆ ಹುಟ್ಟಿದ್ದೇನೆ? ನನ್ನ ಅಸ್ತಿತ್ವಕ್ಕೆ ಏನು ಅರ್ಥವಿದೆ? ಎನ್ನುವ ಪ್ರಶ್ನೆಗಳು ಕಾಡುತ್ತವೆ. ಕ್ರಮೇಣ ನಾಗರಿಕ ಪ್ರಜ್ಞೆಯೇ ನಾಶವಾಗಿ ಅರ್ಥಹೀನ ಬದುಕು ಸಾಗಿಸುವ ಬದಲು ಪರಂಪ ರಾನುಗತವಾಗಿ ಬಂದಿರುವ ಯೋಗ, ಧ್ಯಾನ, ಕೃಷಿ ಮೊದಲಾದ ಚಟುವಟಿ ಕೆಗಳಲ್ಲಿ ತೊಡಗಿಕೊಂಡು ದೈಹಿಕ ಮತ್ತು ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಬೇಕು’ ಎಂದರು.

‘ಆರೋಗ್ಯ ಕೊಡುವ ಗಿಡ ಬಿಟ್ಟು ದುಡ್ಡುಕೊಡುವ ಗಿಡ ಹಾಕಿ ದುರಾಸೆಯಿಂದ ಪ್ರಕೃತಿಗೆ ಮೋಸ ಮಾಡುತ್ತಿರುವ ಮನುಕುಲಕ್ಕೆ ಇಂತಹ ಸ್ಥಿತಿ ಸಹಜ. ಇಂತಹ ಸನ್ನಿವೇಶದಲ್ಲಿ  ಯೋಗ ಶಿಬಿರಗಳ ಮೂಲಕ ಸತ್ತಿರುವ ಒಳಿತು ಮಾಡುವ ಕಲ್ಪನೆಯ ಜಾಗೃತ ಗೊಳಿಸಿ ಸಮಸ್ಯೆಯನ್ನು ಮೂಲದಲ್ಲಿಯೇ ಕಿತ್ತೊಗೆಯುವ ಆತ್ಮಬಲ ರೂಢಿಸಿಕೊ ಳ್ಳಿರಿ’ ಎಂದು ಸಲಹೆ ನೀಡಿದರು.

ಯೋಗಗುರು ಅನಂತ್‌ಜೀ ಮಾತ ನಾಡಿ, ‘ಬೆಂಗಳೂರಿನ ಕಾರ್ಪೊರೇಟ್‌ ಬದುಕಿನಿಂದ ಇಲ್ಲಿಗೆ ಯೋಗ ನನ್ನನ್ನು ಕರೆದುಕೊಂಡು ಬಂದಿದೆ. ಇದಕ್ಕೆ ಪ್ರತಿಫಲವಾಗಿ ಬೀರೂರು ಪಟ್ಟಣ ಮತ್ತು ಸುತ್ತಮುತ್ತಲ ಹಳ್ಳಿಗಳನ್ನು ಮಾದರಿ ಯಾಗಿಸುವುದು ನನ್ನ ಗುರಿ.

ಈಗಿನ ಕಾರ್ಯಕ್ಷೇತ್ರ ಶಿವಮೊಗ್ಗವನ್ನು ಮಾದರಿ ನಗರ ಮಾಡುವ ಉದ್ದೇಶದಿಂದ ಹಮ್ಮಿಕೊಂಡ ‘ರೋಗಮುಕ್ತ, ಸ್ವಸ್ಥ ಮತ್ತು ಸಾಮರಸ್ಯ’ದ ಬದುಕು ಕಟ್ಟಿಕೊಡುವ ಯೋಜನೆಗಳಿಗೆ ಉತ್ತಮ ಪ್ರತಿಸ್ಪಂದನೆ ದೊರೆತಿದೆ. ಅಲ್ಲಿ 10ಸಾವಿರ ಹಣ್ಣಿನ ಗಿಡ ನೆಡುವ, ಪ್ಲಾಸ್ಟಿಕ್‌ ಮುಕ್ತ ಮಾಡುವ ಆಶಯಕ್ಕೆ ಪೂರಕವಾಗಿ ಅಲ್ಲಿನ ನ್ಯಾಯಾಲಯ ಮತ್ತು ಸಾವಿರಾರು ಮನೆಗಳು ಪ್ಲಾಸ್ಟಿಕ್‌ ಮುಕ್ತವಾಗಿವೆ. ನಿಮ್ಮೆಲ್ಲರ ಸಹಕಾರ ವಿದ್ದರೆ ಇಲ್ಲಿಯೂ ಅಂತಹ ಯಶಸ್ಸು ಸಾಧ್ಯ’ ಎಂದು ತಿಳಿಸಿದರು.

ಎಸ್‌ಜೆಎಂ ಪ್ರೌಢಶಾಲಾ ಕಾರ್ಯ ದರ್ಶಿ ಕೆ.ಎಸ್‌.ವೀರೇಶಬಾಬು ಅಧ್ಯಕ್ಷತೆ ವಹಿಸಿದ್ದರು. ಹೋಬಳಿ ಸಾಹಿತ್ಯ ಪರಿಷತ್‌ ಉಪಾಧ್ಯಕ್ಷ ಎನ್‌.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಂ.ಮಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾಸವಿ ವಿದ್ಯಾಪೀಠದ ಗೋಪಾಲ ಕೃಷ್ಣ ಗುಪ್ತ, ಎಚ್‌.ಎಸ್‌.ಗೋಪೀನಾಥ್‌, ಸಂಪತ್‌ಕುಮಾರ್‌, ಸಿತಾರಾ, ಸಿ.ಸಿ. ಕುಮಾರ್‌  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.