ADVERTISEMENT

ಸಂಘಟನೆಗಳಿಂದ ಜ್ಞಾನ ಸಂಪಾದನೆ: ರಾಧಾ

ಚಿಕ್ಕಮಗಳೂರು ತಾಲ್ಲೂಕು ಮಟ್ಟದ ಜ್ಞಾನವಿಕಾಸ ಸಾಧನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:07 IST
Last Updated 30 ಜನವರಿ 2017, 7:07 IST
ಚಿಕ್ಕಮಗಳೂರು ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಟೌನ್‌ಮಹಿಳಾ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಜ್ಞಾನವಿಕಾಸ ಸಾಧನಾ ಸಮಾವೇಶ ಹಾಗೂ ಮಹಿಳಾ ಸಮಾವೇಶವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರಾಧಾ ಸುಂದರೇಶ್‌ ಉದ್ಘಾಟಿಸಿದರು.
ಚಿಕ್ಕಮಗಳೂರು ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಟೌನ್‌ಮಹಿಳಾ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಜ್ಞಾನವಿಕಾಸ ಸಾಧನಾ ಸಮಾವೇಶ ಹಾಗೂ ಮಹಿಳಾ ಸಮಾವೇಶವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರಾಧಾ ಸುಂದರೇಶ್‌ ಉದ್ಘಾಟಿಸಿದರು.   

ಚಿಕ್ಕಮಗಳೂರು: ‘ಜ್ಞಾನವೆಂದರೆ ಬೆಳಕು. ನಮ್ಮ ಬದುಕು, ಹಿತಾಸಕ್ತಿ ಕಾಪಾಡಿ ಕೊಳ್ಳಲು ಜ್ಞಾನ ಪೂರಕ. ಜ್ಞಾನವನ್ನು ಸಂಘಟನೆಗಳಿಂದ ಸಂಪಾದಿಸಬಹುದು. ಮಹಿಳೆಯರಲ್ಲಿ ಜ್ಞಾನದ ಅರಿವು ಮೂಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ರಾಧಾ ಸುಂದರೇಶ್‌ ಅಭಿಪ್ರಾಯಪಟ್ಟರು.

ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಟೌನ್‌ಮಹಿಳಾ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಜ್ಞಾನವಿಕಾಸ, ತಾಲ್ಲೂಕು ಮಟ್ಟದ ಜ್ಞಾನವಿಕಾಸ ಸಾಧನಾ ಸಮಾವೇಶ ಹಾಗೂ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಶ್ರಮಿಸುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೃಷಿಯಲ್ಲೂ ಯುವಕರಿಗೂ ಆಸರೆಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರು, ರೈತರು, ಕೂಲಿ ಕಾರ್ಮಿ ಕರನ್ನು ಒಳಗೊಂಡಂತೆ ಅವರ ಸಾಮಾ ಜಿಕ, ಆರ್ಥಿಕ ಅಭಿವೃಧ್ಧಿಗೆ ಶ್ರಮಿಸುತ್ತಿದೆ ಎಂದರು.

ತಿಳಿವಳಿಕೆ ಮತ್ತು ಅರಿವಳಿಕೆಗಳಿಗೆ ವ್ಯತ್ಯಾಸವಿದೆ. ನಮ್ಮ ಚಿಂತನೆಗಳು ಪ್ರಭುದ್ಧವಾಗಲು ಅಪಾರ ಜ್ಞಾನ ಅಗತ್ಯ. ಸಮಯ, ಸಂದರ್ಭಕ್ಕೆ ಸಮರ್ಪಕವಾಗಿ ಬಳಸಬೇಕು. ಇಲ್ಲದಿದ್ದರೆ ನಾವು ಗಳಿಸಿದ ಪದವಿ ವ್ಯರ್ಥ. ನಮ್ಮಲ್ಲಿ ವ್ಯವಹಾರ ಪ್ರಜ್ಞೆ, ಆರ್ಥಿಕ ಅರಿವಿನ ಜ್ಞಾನದ ಬಳಕೆ ಕುರಿತು ಮಹಿಳೆಯರಿಗೆ ಅರಿವು ಮೂಡಿಸುತ್ತಿದೆ ಎಂದು ತಿಳಿಸಿದರು.
ಅಗತ್ಯ ದಾಖಲೆ ನೀಡಿದರು ಬ್ಯಾಂಕ್‌ ಗಳಲ್ಲಿ ತಕ್ಷಣಕ್ಕೆ ಸಾಲ ನೀಡುವುದಿಲ್ಲ. ಬಗರ್‌ ಹುಕುಂ ಸಾಗುವಳಿಯಡಿ ಅರ್ಜಿ ಸಲ್ಲಿಸಿರುವ ಜಿಲ್ಲೆಯ ಸಾವಿರಾರು ರೈತರಿಗೆ ಸರ್ಕಾರ ಇನ್ನೂ ಸಾಗುವಳಿ ಪತ್ರಗಳನ್ನು ನೀಡಿಲ್ಲ. ಆದರೆ, ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಗ್ರಾಮೀಣ ಪ್ರದೇಶದ ರೈತರಿಗೆ ಅಗತ್ಯ ಸಾಲ ನೀಡುತ್ತಾ ಸ್ಥಳೀಯ ಖಾಸಗಿ ಬ್ಯಾಂಕ್‌ಗಳಂತೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಸರ್ಕಾರ ನಮ್ಮ ಹಕ್ಕುಗಳನ್ನು ಕಸಿದು ಕೊಳ್ಳಬಹುದೆ ವಿನಃ ಕನಸುಗಳನಲ್ಲ. ಸಮಾಜದ ಒಳಿತು, ಕಡುಕುಗಳೆರಡನ್ನು ಧೈರ್ಯವಾಗಿ ಎದುರಿಸಬೇಕು. ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌ ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆ. ರಾಜಕೀಯ, ಆರ್ಥಿಕ, ಸಾಮಾ ಜಿಕ ಸೇರಿದಂತೆ  ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಇಂದು ಪುರುಷರಿಗೆ ಸಮಾನ ಸ್ಪರ್ಧೆಯಲ್ಲಿದ್ದಾರೆ. ಸಂಘದ ಸದಸ್ಯರು ಇಂತಹ ಕಾರ್ಯಾಗಾರಗಳ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸ್ಚಚ್ಛ ಭಾರತ ಕಲ್ಪನೆಗೆ ಎಲ್ಲ ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ಸ್ವಚ್ಛ ನಗರದ ಪಟ್ಟಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಸೇರಲು ಪ್ರಯತ್ನಿಸಬೇಕು. ಕಸ ನೀಡುವಾಗ ಹಸಿ ಹಾಗೂ ಒಣಕಸವನ್ನು ವಿಂಗಡಿಸಬೇಕು. ಇಂದಾವರ ತ್ಯಾಜ್ಯ ಘಟಕದಲ್ಲಿ ವೈಜ್ಞಾನಿಕ ರೀತಿ ಕಸ ವಿಲೇವಾರಿಗೆ ಕ್ರಮ ತೆಗೆದುಕೊಳ್ಳ ಲಾಗುವುದು. ನಗರಸಭೆ ಆವರಣದಲ್ಲಿ ಸುರಿದಿರುವ ಕಸ ತೆರವುಗೊಳಿಸ ಲಾಗುತ್ತಿದೆ ಎಂದರು. 

ಸ್ಪರ್ಶ ಚಿಕಿತ್ಸಾಲಯದ ವೈದ್ಯ ಡಾ. ಚಂದ್ರಶೇಖರ್‌ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಂದು ದೂರದೃಷ್ಟಿ ಯೋಜನೆ.  ಕಳೆದ 3 ತಿಂಗಳಿಂದ ‘ಆರೋಗ್ಯ ಭಾಗ್ಯ’ಯೋಜನೆಯಡಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾ ಗುತ್ತಿದೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿದೆ ಎಂದರು.
 
ತರಳಬಾಳು ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಜೆ.ಕೆ.ಭಾರತಿ ಅವರು ‘ಕುಟುಂಬದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ’ ವಿಷಯ ಕುರಿತು ಉಪಾನ್ಯಾಸ ಮತ್ತು ಜ್ಞಾನವಿಕಾಸ ಕೇಂದ್ರದ ಸದಸ್ಯೆರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ  ನಡೆದವು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಗೀತಾ, ಸಂಘದ ಯೋಜನಾ ನಿರ್ದೇಶಕಿ ಬೇಬಿ ಇತರರು ಇದ್ದರು.

***

ಇಂದಿನ ಪುರುಷ ಪ್ರಧಾನ ಕುಟುಂಬದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿವೆ. ಸಮಾಜದಲ್ಲಿ ಸ್ತ್ರೀ, ಪುರುಷರಿಬ್ಬರೂ ಸಮಾನತೆಯಿಂದ ಬದುಕಬೇಕು
- ರಾಧಾ ಸುಂದರೇಶ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.