ADVERTISEMENT

‘ಸಣ್ಣ ಸಮುದಾಯಕ್ಕೂ ಒಳಮೀಸಲಾತಿ ಸಿಗಲಿ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 7:43 IST
Last Updated 24 ಮೇ 2017, 7:43 IST

ಬೀರೂರು: ‘ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿಯಲ್ಲಿ ಕುರುಬ, ದೇವಾಂಗ, ಈಡಿಗ ಮೊದಲಾದ ಬಲಿಷ್ಠ ಸಮು ದಾಯಗಳ ಜತೆ ಸೆಣಸಬೇಕಿರುವ ಸವಿತಾ ಸಮಾಜದಂತಹ ಸಣ್ಣ ಸಮುದಾಯ ಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎನ್ನುವುದು ಜೆಡಿಎಸ್‌ ಪಕ್ಷದ ಹೋರಾ ಟವಾಗಿದ್ದು, ಈ ವಿಷಯವನ್ನು ಈ ಬಾರಿಯ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ’ ಎಂದು ಶಾಸಕ ವೈ.ಎಸ್‌.ವಿ.ದತ್ತ ತಿಳಿಸಿದರು.

ಬೀರೂರಿನ ಸವಿತಾ ಸಮಾಜದ ಶ್ರೀರಾಮಮಂದಿರದಲ್ಲಿ ಸವಿತಾ ಸಮಾಜ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಸಣ್ಣ ಪುಟ್ಟ ಸಮುದಾಯಗಳು ಗಟ್ಟಿ ದನಿಯಲ್ಲಿ ಕೂಗಲಾರವು. ಸವಿತಾ ಸಮಾಜ, ತೆಲುಗುಗೌಡ, ಮಡಿವಾಳ, ಕುಂಬಾರ ಮೊದಲಾದ ಪ್ರವರ್ಗ ‘2 ಎ’ ನಲ್ಲಿ ಬರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎನ್ನು ವುದು ದೇವೇಗೌಡರ ಆಶಯವೂ ಆಗಿದೆ.

ಆದರೆ, ಸರ್ಕಾರಗಳು ಇತ್ತ ಗಮನ ಹರಿಸಲು ಮುಂದಾಗಿಲ್ಲ ಎನ್ನು ವುದು ನೋವಿನ ಸಂಗತಿ. ಸಾಮುದಾ ಯಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠ ವರ್ಗಗಳ ಜತೆ ಇಂತಹ ಸಮುದಾಯಗಳು ಹೋರಾಟ ಮಾಡಿ ಸ್ಥಾನ ಗಿಟ್ಟಿಸುವ ಬದಲು ಇರುವ ಮೀಸ ಲಾತಿಯಲ್ಲಿ ಶೇ 15ರಷ್ಟು ಒಳ ಮೀಸ ಲಾತಿ ಕಲ್ಪಿಸಬೇಕು ಎನ್ನುವ ಒತ್ತಾಯ ಮುಂದಿನ ದಿನಗಳಲ್ಲಿ ಈಡೇರಿದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ADVERTISEMENT

ಗಾಂಧಿ ವಸತಿ ನಿಗಮದಿಂದ ನೆರವು ಕೊಡಿಸುವ ಭರವಸೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸವಿತಾ ಸಮಾಜದ ಅಧ್ಯಕ್ಷ ಟಿ.ಎಂ. ಗಣೇಶ್‌, ‘ಹಲವು ಹಿರಿಯರ ಶ್ರಮದಿಂದ ಯಾರ ಸಹಾಯ ನಿರೀಕ್ಷಿಸದೆ ಸಮು ದಾಯ ಭವನ ಕಟ್ಟಿದ್ದೇವೆ. ಸಮಾಜಕ್ಕಾಗಿ ಶ್ರಮಿಸಿದರೂ ನಮ್ಮನ್ನು ಸಮಾಜ ಗುರುತಿಸಿದ್ದು ಕಡಿಮೆ. ಆರ್ಥಿಕವಾಗಿ ಸಬಲರಲ್ಲದ ಸಣ್ಣ ಸಮುದಾಯದ ಅಭಿವೃದ್ಧಿಗೆ ಶಾಸಕರು ಕೈಜೋಡಿಸ ಬೇಕು’ ಎಂದು ಮನವಿ ಮಾಡಿದರು.

ಸವಿತಾ ಸಮಾಜದ ಹಿರಿಯ ಬಿ.ಎಲ್‌.ಶ್ರೀನಿವಾಸ್‌ ಮಾತನಾಡಿ, ದತ್ತ ಅವರು ಶಾಸಕರಾಗಿದ್ದರಿಂದ ತಾಲ್ಲೂಕಿನಲ್ಲಿ ಸಣ್ಣ ಸಮುದಾಯಗಳಿಗೆ ದನಿ ಬಂದಿದೆ ಎಂದರು.
ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ನಾಗರಾಜ್‌, ‘ಎಲ್ಲ ಸಣ್ಣ ಸಮುದಾಯಗಳು ಒಂದುಗೂಡಿದರೆ ಅದೇ ಅಹಿಂದ. ಜಾತಿ–ಮತದ ಹೆಸರಿನಲ್ಲಿ ಹಾಳಾಗಿರುವ ರಾಜಕಾರಣ ಸರಿಯಾಗಲು ಸಣ್ಣ ಸಮುದಾಯಗಳು ಒಗ್ಗಟ್ಟಿನ ಮಂತ್ರ ಜಪಿಸಬೇಕು’ ಎಂದರು.

ಸವಿತಾ ಸಮಾಜದ ಗೌರವಾಧ್ಯಕ್ಷ ಟಿ.ಎನ್‌.ಸುಬ್ರಹ್ಮಣ್ಯ, ಕಡೂರು ಜೆಡಿಎಸ್‌ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಕಾಂತ ರಾಜು, ಸದಸ್ಯೆ ವಸಂತಾ ರಮೇಶ್‌, ಸವಿತಾ ಸಮಾಜದ ಕಾರ್ಯದರ್ಶಿ ದೇವ ರಾಜ್‌, ಟಿ.ಸಿ.ಮಂಜುನಾಥ್‌, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರವಿ, ಕಡೂರು ವೆಂಕಟೇಶ್‌, ಪ್ರಶಾಂತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.