ADVERTISEMENT

ಸಮಸ್ಯೆಗೆ ಸ್ಪಂದಿಸುವಲ್ಲಿ ಬದುಕಿನ ಸಾರ್ಥಕತೆ

ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ 

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:55 IST
Last Updated 19 ಏಪ್ರಿಲ್ 2017, 5:55 IST
ಕೊಪ್ಪ: ‘ಜೀವನವು ಸಿಹಿ-ಕಹಿ ಘಟನೆಗಳ ಸರಮಾಲೆಯಾಗಿದ್ದು, ಅವುಗಳಿಗೆ ಸ್ಪಂದಿಸುವ ರೀತಿಯಲ್ಲಿ ಬದುಕಿನ ಸಾರ್ಥಕ ಅಡಗಿದೆ’ ಎಂದು ಹರಿಹರ ಪುರ ಮಠಾಧೀಶ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ  ಸ್ವಾಮೀಜಿ ಅಭಿಪ್ರಾಯಪಟ್ಟರು. 
 
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳ ವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಎಚ್.ಎಂ. ರವಿಕಾಂತ್ ವಿರಚಿತ ‘ವೀರಭದ್ರ ಸ್ವಾಮಿ’ ಭಕ್ತಿಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು. 
 
‘ಬದುಕಿನಲ್ಲಿ ಎದುರಾಗುವ ಸಣ್ಣ ಘಟನೆಯೂ ಮನಸ್ಸಿನಲ್ಲಿ ಅಚ್ಚೊತ್ತಿ ಅಗಾಧ ಪರಿಣಾಮ ಬೀರಬಹುದು. ಜೀವನದುದ್ದಕ್ಕೂ ನೆನಪಾಗಿ ಕಾಡಬ ಹುದು. ಅದಕ್ಕೆ ನಮ್ಮ ಸ್ಪಂದನೆ ಸಕಾರಾ ತ್ಮಕವಾಗಿದ್ದರೆ ಆನಂದ, ನಕಾರಾತ್ಮಕವಾಗಿದ್ದರೆ ದುಃಖ, ಸಮ ಚಿತ್ತದಿಂದ ಇದ್ದರೆ ನಿರ್ಲಿಪ್ತತೆ ಉಂಟಾಗಲಿದೆ’ ಎಂದರು. 
‘ಕೊಪ್ಪಕ್ಕೂ ಹರಿಹರಪುರಕ್ಕೂ ಪುರಾಣ ಕಾಲದಿಂದಲೂ ವಿಶಿಷ್ಟ ನಂಟಿದೆ.
 
ಸ್ಕಂದ ಪುರಾಣದ ಸಹ್ಯಾದ್ರಿ ಕಾಂಡದ ತುಂಗಭದ್ರ ಉಪಕಾಂಡದಲ್ಲಿ ಕೊಪ್ಪದ ಪ್ರಸ್ತಾಪವಿದೆ. ಹರಿಹರಪುರದ ದಕ್ಷಹರ ಸೋಮೇಶ್ವರ ದೇವಸ್ಥಾನ ಪ್ರದೇಶದಲ್ಲಿ ನಡೆದಿದ್ದ ದಕ್ಷಯಜ್ಞದ ವೇಳೆ ಶಿವನಿಗೆ ಅವಮಾನಿಸಿದ್ದನ್ನು ಪ್ರತಿಭಟಿಸಿ ದಕ್ಷಸುತೆ ದಾಕ್ಷಾಯಿಣಿ ಯಜ್ಷಕುಂಡಕ್ಕೆ ಹಾರಿ ಆತ್ಮಾಹುತಿಗೈದ ಘಟನೆ, ಪ್ರಳಯರುದ್ರ ಶಿವನಿಂದ ಶಕ್ತಿಸಂಚಯಗೊಂಡು ವೀರಭದ್ರನು ಆವಿರ್ಭವಿಸಲು, ದಕ್ಷನ ಗರ್ವಭಂಗ ವೆಸಗಲು ಕಾರಣವಾಯಿತು’ ಎಂದರು. 
 
‘ಕೋಪಾವಿಷ್ಠನಾಗಿದ್ದ ವೀರಭದ್ರ ಕೊಪ್ಪಕ್ಕೆ ಬಂದು ನೆಲೆಸಿದ್ದರಿಂದ ಈ ಊರು ಕೊಪ್ಪವಾಗಿದ್ದು, ಕೋಪದ ವೀರಭದ್ರ ತನ್ನ ಶಕ್ತಿಯನ್ನು ಜಗತ್ತಿನ ನಾಶಕ್ಕೆ ಬಳಸದೆ, ಶಾಂತನಾಗಿ ಭಕ್ತರನ್ನು ಪೊರೆಯುತ್ತಿರುವುದು ನಮ್ಮ ಭಾಗ್ಯ.
 
ವೀರಭದ್ರನ ಮಹಿಮೆಯನ್ನು ಉತ್ತಮ ಸಾಹಿತ್ಯದ ಹಾಡುಗಳ ಮೂಲಕ ಭಕ್ತರ ಮನಮುಟ್ಟುವಂತೆ ನಿರೂಪಿಸಿರುವ ರವಿಕಾಂತ್ ಅವರ ಪ್ರಯತ್ನ ಶ್ಲಾಘ ನೀಯ.  ಈ ಧ್ವನಿಮುದ್ರಿಕೆ ಭಕ್ತರ ಮನೆ, ಮನ ತಲುಪುವಂತಾಗಿ ಧರ್ಮ ಜಾಗೃ ತಿಗೆ ಕಾರಣವಾಗಲಿ’ ಎಂದರು.
 
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ. ಮೋಹನ್ ಬಿ.ಎಸ್. ಶೆಟ್ಟಿ, ಹಾಲ್ಗಾರು ಶ್ರೀನಿವಾಸರಾವ್, ಜಾಸ್ಮಿನ್ ದಯಾಕರ್, ಎಂ.ಟಿ. ಶಂಕರಪ್ಪ, ಧ್ವನಿಮುದ್ರಿಕೆಯ ಗೀತೆ ರಚನೆಕಾರ ರವಿಕಾಂತ್, ಸಂಗೀತ ಸಂಯೋಜಕ ಶ್ರೀನಿಧಿ, ನಿರ್ಮಾಪಕ ಶ್ರೀನಿವಾಸ್ ಶೆಟ್ಟಿ, ಆದರ್ಶಗೌಡ ಅವರನ್ನು ಸನ್ಮಾನಿಸಲಾಯಿತು. 
 
ಶಾಸಕ ಡಿ.ಎನ್. ಜೀವರಾಜ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್.ಎನ್. ರಾಮಸ್ವಾಮಿ, ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ಜೆಡಿಎಸ್ ಮುಖಂಡ ಎಚ್.ಜಿ.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಣಿ ಸತೀಶ್, ಜಾನಪದ ಪರಿಷತ್ ಅಧ್ಯಕ್ಷ ಎಚ್.ಎಸ್. ಕಳಸಪ್ಪ, ಸಹಕಾರ ಸಾರಿಗೆ ಅಧ್ಯಕ್ಷ ಈ.ಎಸ್. ಧರ್ಮಪ್ಪ ಮುಂತಾದವರಿದ್ದರು. ಅದ್ದಡ ಸತೀಶ್ ಸ್ವಾಗತಿಸಿದರು. ಸಾಹಿತಿ ಎಸ್.ಎನ್. ಚಂದ್ರಕಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.