ADVERTISEMENT

ಸ್ಕೂಟಿ ಏರಿದ ನಾಗರಹಾವು!

​ಪ್ರಜಾವಾಣಿ ವಾರ್ತೆ
Published 25 ಮೇ 2018, 8:00 IST
Last Updated 25 ಮೇ 2018, 8:00 IST
ಬಾಳೆಹೊನ್ನೂರು ನರಸಿಂಹರಾಜಪುರ ರಸ್ತೆಯ ಆಲ್ ಬುರ್ಜಾ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಸೇರಿಕೊಂಡ ನಾಗರಹಾವು ಹೊರಹೋಗುತ್ತಿರುವುದು.
ಬಾಳೆಹೊನ್ನೂರು ನರಸಿಂಹರಾಜಪುರ ರಸ್ತೆಯ ಆಲ್ ಬುರ್ಜಾ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಸೇರಿಕೊಂಡ ನಾಗರಹಾವು ಹೊರಹೋಗುತ್ತಿರುವುದು.   

ಬಾಳೆಹೊನ್ನೂರು: ಪಟ್ಟಣದ ನರಸಿಂಹರಾಜಪುರ ರಸ್ತೆಯಲ್ಲಿರುವ ಅಲ್ ಬುರ್ಜ ಕಾಂಪ್ಲೆಕ್ಸ್ ಎದುರು ಗ್ರಾಹಕರೊಬ್ಬರು ನಿಲ್ಲಿಸಿದ್ದ ಸ್ಕೂಟಿಯಲ್ಲಿ ನಾಗರ ಹಾವೊಂದು ಸೇರಿಕೊಂಡು ಕೆಲ ಕ್ಷಣಗಳ ಕಾಲ ಸ್ಥಳೀಯರಲ್ಲಿ ಆತಂಕ ಮೂಡಿಸಿತು.

ಪಟ್ಟಣಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮ ಸ್ಕೂಟರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದರು. ಆ ವೇಳೆ ಆಲ್ ಬುರ್ಜ ಕಾಂಪ್ಲೆಕ್ಸ್ ಕಡೆಯಿಂದ ಗೋಧಿ ಬಣ್ಣದ ನಾಗರ ಹಾವೊಂದು ರಸ್ತೆ ದಾಟಿಲು ಯತ್ನಿಸಿದೆ. ಅದನ್ನು ಕಂಡ ಸ್ಥಳೀಯರು ತಕ್ಷಣ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ನಿಲ್ಲಿಸಿ ಹಾವನ್ನು ರಸ್ತೆ ದಾಟಲು ಸಹಕರಿಸಿದರು. ವಾಹನಗಳ ಸದ್ದಿನಿಂದ ಗಾಬರಿಗೊಂಡ ಹಾವು ರಸ್ತೆ ದಾಟುವ ವೇಳೆ ಎದುರುಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟಿಯಲ್ಲಿ ಸೇರಿತು.

ತಕ್ಷಣ ಸ್ಥಳದಲ್ಲಿ ಹತ್ತಾರು ಜನ ಸೇರಿ ಹಾವನ್ನು ಸ್ಕೂಟಿಯ ಒಳಗಿನಿಂದ ಹೊರಗೆ ಓಡಿಸಲು ಯತ್ನಿಸಿದರು. ಆದರೆ, ಹಾವು ಹೊರ ಬರದೆ ಸ್ಕೂಟಿಯ ಒಳಭಾಗದಲ್ಲಿ ಅಡ್ಡಾಡ ತೊಡಗಿತು. ಆ ವೇಳೆಗೆ ಅಲ್ಲಿ ಸೇರಿದ್ದ ಯುವಕನೊಬ್ಬ ಸ್ಕೂಟಿಯನ್ನು ಅಲ್ಲಾಡಿಸುವ ಮೂಲಕ ಹಾವನ್ನು ಹೊರತರಲು ಯತ್ನಿಸಿದ. ಆದರೆ ಹಾವು ಮಾತ್ರ ಯಾರ ಕಣ್ಣಿಗೂ ಕಾಣದೆ ಒಳಗೆ ಸೇರಿಕೊಂಡಿತ್ತು.

ADVERTISEMENT

ಅಷ್ಟರಲ್ಲಿ ಸ್ಕೂಟಿಯ ಮಾಲೀಕ ಸ್ಥಳಕ್ಕೆ ಬಂದಾಗ ಅವರಿಂದ ಸ್ಕೂಟಿಯ ಕೀ ಪಡೆದು ಅದನ್ನು ಸ್ಟಾರ್ಟ್ ಮಾಡುವ ಮೂಲಕ ಹಾವನ್ನು ಓಡಿಸಲು ಯುವಕರು ಮುಂದಾದರು. ಸ್ಕೂಟಿಯನ್ನು ಸ್ಟಾರ್ಟ್‌ ಮಾಡಿ ಎಕ್ಸ್‌ಲೇಟರ್ ಜಾಸ್ತಿ ಮಾಡಿದಾಗ ಹೆದರಿದ ನಾಗರಹಾವು ನಿಧಾನವಾಗಿ ಸ್ಕೂಟಿಯ ಹ್ಯಾಂಡಲ್ ಬಳಿಯಿಂದ ಇಳಿದು ಪುಟ್ ಪಾತ್ ಮೂಲಕ ಗಿಡದ ಮರೆಗೆ ತೆರಳಿ ಕಣ್ಮರೆಯಾಯಿತು. ಹಾವು ಹೊರಹೋಗುತ್ತಲೇ ಸ್ಕೂಟಿಯ ಮಾಲೀಕ ನಿಟ್ಟುಸಿರು ಬಿಟ್ಟರು.

ಮಕ್ಕಳಿಗಾಗಿ ಸಾಹಿತ್ಯ ರಚನೆ, ರಂಗ ಕಮ್ಮಟ

ಶೃಂಗೇರಿ: ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮತ್ತು ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಕುಪ್ಪಳ್ಳಿಯಲ್ಲಿ ಕಲೆ ಹಾಗೂ ಸಾಹಿತ್ಯ ರಚನಾ ಕಮ್ಮಟ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಉದ್ಘಾಟನೆಯನ್ನು ಆದಿಚುಂಚನ ಗಿರಿಯ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ನೆರವೇರಿಸಲಿದ್ದು, ಶಿಬಿರದಲ್ಲಿ ರಾಜ್ಯದ ಪ್ರತಿಷ್ಠಿತ ಸಾಹಿತಿಗಳು ಮತ್ತು ರಂಗಕರ್ಮಿಗಳು ತರಬೇತಿಯನ್ನು ನೀಡಲಿದ್ದಾರೆ. ಆಸಕ್ತ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಶೃಂಗೇರಿ ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಕೆ.ಸಿ ನಾಗೇಶ್ ತಿಳಿಸಿದ್ದಾರೆ. ಮಾಹಿತಿಗೆ ಸಂರ್ಪಕಿಸಿ– 94485 55458, 94481 01708.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.