ADVERTISEMENT

ಸ್ಥಿರೀಕರಣಗೊಂಡ ಜಮೀನಿಗೆ 15ರೊಳಗೆ ಹಕ್ಕು ಪತ್ರ

ಶಾಸಕ ಡಿ.ಎನ್.ಜೀವರಾಜ್ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 9:32 IST
Last Updated 14 ಡಿಸೆಂಬರ್ 2017, 9:32 IST

ನರಸಿಂಹರಾಜಪುರ: ಗೋಮಾಳ ಜಮೀನಿಗೆ ಹಕ್ಕು ಪತ್ರ ನೀಡುವುದಕ್ಕೆ ಹೈಕೋರ್ಟ್ ನಲ್ಲಿದ್ದ ತಡೆಯಾಜ್ಞೆ ತೆರವು ಆಗಿರುವು ದರಿಂದ ಕ್ಷೇತ್ರದ ಬಗರ್ ಹುಕುಂ ಸಮಿತಿಯಲ್ಲಿ ಸ್ಥಿರೀಕರಣಗೊಂಡ ಎಲ್ಲಾ ಜಮೀನಿಗೂ ತಹಶೀಲ್ದಾರರು ಇದೇ ಹಕ್ಕು ಪತ್ರ ನೀಡಬೇಕೆಂದು ಶಾಸಕ ಡಿ.ಎನ್.ಜೀವರಾಜ್ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶೃಂಗೇರಿ ಕ್ಷೇತ್ರದ ಬಗರ್ ಹುಕುಂ ಸಮಿತಿಯಲ್ಲಿ ಫಾರಂ ನಂ 50,53 ಯಡಿ ಸಾವಿರಾರು ರೈತರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 3 ತಾಲ್ಲೂಕಿನ 1,900ಕ್ಕಿಂತ ಹೆಚ್ಚು ಕಡತಗಳು ಶಾಸಕರ ಅಧ್ಯಕ್ಷತೆಯ ಬಗರ್ ಹುಕುಂ ಸಮಿತಿಗೆ ಬಂದಿದ್ದು ಸಮಿತಿಯು ಮೂರು ಸಭೆಗಳನ್ನು ನಡೆಸಿ ಮಂಜೂರು ಮಾಡಬಹುದಾದ ಕಡತಗಳನ್ನು ಸ್ಥಿರೀಕರಣ ಗೊಳಿಸಲಾಗಿದೆ’ ಎಂದರು.

‘ಈ ಕಡತದಲ್ಲಿರುವ ಅರ್ಜಿಗಳಿಗೆ ಯಾವಾಗ ಬೇಕಾದರೂ ಹಕ್ಕು ಪತ್ರ ನೀಡಬಹುದಿತ್ತು. ಕ್ಷೇತ್ರದ ಮೂರು ತಾಲ್ಲೂಕುಗಳಲ್ಲಿ 2016ರ ನವೆಂಬರ್ ಮುನ್ನಾ 800ಕ್ಕೂ ಹೆಚ್ಚು ಕಡತಗಳನ್ನು ಸ್ಥಿರೀಕರಿಸಲಾಗಿದ್ದರೂ ಇನ್ನೂ ಹಕ್ಕು ಪತ್ರ ನೀಡಿಲ್ಲ. ಏಪ್ರಿಲ್ 2017ರಲ್ಲಿ ಖಾಸಗಿ ವ್ಯಕ್ತಿಗಳು ಗೋಮಾಳ ಜಮೀನು ಮಂಜೂರು ಮಾಡಬಾರದೆಂದು ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಆದರೆ ನವೆಂಬರ್, 2016 ಕ್ಕೂ ಮುನ್ನಾ ಸ್ಥಿರೀಕರಣಗಿಂಡ ಜಮೀನುಗಳಿಗೆ ಮೂರು ತಾಲ್ಲೂಕುಗಳ ತಹಶೀಲ್ದಾರರು ಹಕ್ಕು ಪತ್ರ ನೀಡದೆ ನಿರ್ಲಕ್ಷ್ಯ ಮಾಡಿದ್ದರಿಂದ ರೈತರಿಗೆ ಅನ್ಯಾಯವಾಗಿತ್ತು’ ಎಂದು ದೂರಿದರು.

ADVERTISEMENT

‘ಗೋಮಾಳ ಜಮೀನಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದನ್ನು ತೆರವುಗೊಳಿಸಲು ನಾನು ಕೊಪ್ಪದಲ್ಲಿ ಬಗರ್ ಹುಕುಂ ರೈತರ ಸಭೆಯನ್ನು ಕರೆದು ರೈತರ ಪರವಾಗಿ ವಕೀಲರನ್ನು ನೇಮಕ ಮಾಡಿ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿತ್ತು. ಆಗ ಸರ್ಕಾರವು ಹೈಕೋರ್ಟ್ ನಲ್ಲಿ ಸರ್ಕಾರಿ ಅಡ್ವೋಕೇಟ್ ಜನರಲ್ ಮೂಲಕ ವಾದಮಂಡಿಸಿತ್ತು. ಇದರಿಂದ ಕಳೆದ 30ರಂದು ಗೋಮಾಳ ಜಮೀನಿಗೆ ಹಕ್ಕು ಪತ್ರ ನೀಡಲು ಇದ್ದ ತಡೆಯಾಜ್ಞೆ ತೆರವುಗೊಳಿಸಿತು. ತಡೆಯಾಜ್ಞೆ ತೆರವುಗೊಳಿಸು ವಲ್ಲಿ ತಮ್ಮ ಹಾಗೂ ಬಗರ್‌ ಹುಕುಂ ರೈತರ ಪಾತ್ರವೂ ಇದೆ ಎಂದರು.

30ರಂದು ಹೈಕೋರ್ಟ್ ನಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿರು ವುದರಿಂದ ಸರ್ಕಾರ ಕಳೆದ 8ರಂದು ಎಲ್ಲ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಹಕ್ಕು ಪತ್ರ ನೀಡಲು ಆದೇಶ ನೀಡಿದೆ. ಹಾಗಾಗಿ ಇದೇ 15ರ ಶುಕ್ರವಾರ ಬೆಳಿಗ್ಗೆ ಕೊಪ್ಪದಲ್ಲಿ, ಮಧ್ಯಾಹ್ನ 3ಗಂಟೆಗೆ ಎನ್.ಆರ್.ಪುರದಲ್ಲಿ ಬಗರ್ ಹುಕುಂ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸ್ಥಿರೀಕರಣಗೊಂಡ ಎಲ್ಲ ಬಗರ್ ಹುಕುಂ ರೈತರಿಗೆ ಕಡ್ಡಾಯವಾಗಿ ಹಕ್ಕು ಪತ್ರ ನೀಡಬೇಕು. ಕೊಪ್ಪದಲ್ಲಿ 99, ಶೃಂಗೇರಿಯಲ್ಲಿ 140 ಕಡತ ಸಿದ್ದವಾಗಿದೆ. ಸಭೆಗೆ ನಾನು ಬರದಿದ್ದರೂ ತಹಶೀಲ್ದಾರ್ ಹಕ್ಕು ಪತ್ರ ವಿತರಿಸಬೇಕು ಎಂದು ಅವರು ಹೇಳಿದರು.

*

ಇದೇ 15ರಂದು ಬಗರ್ ಹುಕುಂ ಸಭೆ ಕರೆಯಲಾಗಿದೆ.ಸ್ಥಿರೀಕರಣ ಗೊಂಡ ಎಲ್ಲಾ ರೈತರಿಗೆ ತಹಶೀಲ್ದಾರ್ ಕಡ್ಡಾಯವಾಗಿ ಹಕ್ಕು ಪತ್ರ ವಿತರಿಸ ಬೇಕು. ಇಲ್ಲವಾದಲ್ಲಿ ತಾಲ್ಲೂಕು ಕಚೇರಿ ಬಿಟ್ಟು ಕದಲುವುದಿಲ್ಲ
–ಡಿ.ಎನ್.ಜೀವರಾಜ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.