ADVERTISEMENT

ಹೈನುಗಾರಿಕೆಯಲ್ಲಿ ಆರ್ಥಿಕ ಸ್ವಾವಲಂಬನೆ

ಚಿಕ್ಕಮಗಳೂರು ತಾಲ್ಲೂಕಿನ ಕರಿಯನಹಳ್ಳಿ ಎಂಜಿನಿಯರಿಂಗ್‌ ಪದವೀಧರನ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:04 IST
Last Updated 30 ಜನವರಿ 2017, 7:04 IST
ಹೈನುಗಾರಿಕೆಯಲ್ಲಿ ಆರ್ಥಿಕ ಸ್ವಾವಲಂಬನೆ
ಹೈನುಗಾರಿಕೆಯಲ್ಲಿ ಆರ್ಥಿಕ ಸ್ವಾವಲಂಬನೆ   

ಚಿಕ್ಕಮಗಳೂರು: ಮಕ್ಕಳು ನಮ್ಮಂತೆ ವ್ಯವಸಾಯ ಅಥವಾ ಮೂಲ ವೃತ್ತಿ ಅವಲಂಬಿಸಬಾರದು. ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸರ್ಕಾರಿ ಅಥವಾ ಖಾಸಗಿ ಸಂಸ್ಥೆ ಯಲ್ಲಿ ಒಳ್ಳೆಯ ಕೆಲಸಕ್ಕೆ ಸೇರಿಸಬೇಕೆಂಬ ಬಯಕೆ ಪ್ರತಿ ಪೋಷಕರಿಗೆ ಇರುವುದು ಸಹಜ. ಶಿಕ್ಷಣ ಮುಗಿಸಿದ ನಂತರ ಮೂಲ ವೃತ್ತಿಯತ್ತ ತಿರುಗಿ ನೋಡದೆ ಮೂಗು ಮುರಿಯುವ ಕಾಲವಿದು. ಇದಕ್ಕೆ ವ್ಯತಿರಿಕ್ತವೆಂಬಂತೆ ಕಡೂರು ತಾಲ್ಲೂಕಿನ ಕರಿಯನಹಳ್ಳಿಯ ಎಂಜಿನಿಯರಿಂಗ್‌ ಪದವೀಧರ ಸುನಿಲ್‌ ಹೈನುಗಾರಿಕೆಯಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸುನಿಲ್‌ ತುಮಕೂರಿನ ಸಿದ್ದಾರ್ಥ ಎಂಜಿನಿಯರಿಂಗ್​ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಎಂಜಿನಿ ಯರಿಂಗ್‌ ಪದವಿ ಪಡೆದಿದ್ದಾರೆ. ಹೀಗಿ ದ್ದರೂ ವಿದ್ಯಾಭ್ಯಾಸದ ನಂತರ ಅವರು ಆಯ್ಕೆ ಮಾಡಿಕೊಂಡ ಕ್ಷೇತ್ರ ಹೈನು ಗಾರಿಕೆ. ಗ್ರಾಮದಲ್ಲೆ 10 ಹಸುಗಳನ್ನು ಕಟ್ಟಿಕೊಂಡಿದ್ದಾರೆ. ಪ್ರತಿ ದಿನ 160 ಲೀಟರ್​ ಹಾಲು ಉತ್ಪಾದಿಸಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿ ಸುತ್ತಿದ್ದಾರೆ. ಹಾಲಿನ ಪ್ರಮಾಣ ಹೆಚ್ಚಿಸಲು ಹಸುಗಳಿಗೆ ರಾಸಾಯನಿಕ ಅಂಶಗಳಿಂದ ಕೂಡಿದ ಹಿಂಡಿ, ಬೂಸ, ಫೀಡ್ಸ್‌ ಬಳಸುತ್ತಿಲ್ಲ. ನಾಲ್ಕೈದು ಸಿಮೆಂಟ್‌ ತೊಟ್ಟಿ ನಿರ್ಮಿಸಿ ಹುಲ್ಲು, ವಿವಿಧ ಜಾತಿಯ ಸೊಪ್ಪಿನಿಂದ ತಯಾ ರಿಸಿದ ಮೇವು ಹಸುಗಳಿಗೆ ನೀಡಿ ‘ಸಾವಯವ ಹಾಲು’ ಉತ್ಪಾದಿಸುತ್ತಿರುವುದು ವಿಶೇಷ. 

ಸುನಿಲ್‌ ತಂದೆ ಗಂಗಾಧರಯ್ಯ ನಿವೃತ್ತ ಶಿಕ್ಷಕರು. ನಿವೃತ್ತಿ ನಂತರ ಇದ್ದ ಅಲ್ಪಸ್ಪಲ್ಪ ಜಮೀನಿನಲ್ಲೆ 2 ಹಸುಗಳನ್ನು ಕಟ್ಟಿಕೊಂಡಿದ್ದರು. ಸುನಿಲ್‌ ಓದುತ್ತಿ ದ್ದಾಗಲೇ ರಜೆ ಇದ್ದಾಗ ಊರಿಗೆ ಬಂದು ತಂದೆಗೆ ಕೆಲಸದಲ್ಲಿ ನೆರವಾ ಗುತ್ತಿದ್ದರು. ಆಗಲೇ ಹೈನುಗಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ವಿದ್ಯಾಬ್ಯಾಸ ಪೂರ್ಣವಾದ ಮೇಲೆ ಉದ್ಯೋಗ ಅರಸುತ್ತಾ ರಾಜಧಾನಿಗೆ ತೆರಳದೆ, ಗ್ರಾಮದಲ್ಲೆ ಹೈನುಗಾರಿಕೆ ಪ್ರಾರಂಭಿಸಲು ಆಲೋಚಿಸಿದ್ದರು. ‘ಹೈನುಗಾರಿಕೆ ನಿರ್ಧಾರವನ್ನು ಪೋಷಕರು ಬಳಿ ತಿಳಿಸಿದಾಗ ಬೇಸರ ವ್ಯಕ್ತಪಡಿಸದೆ, ಸಂತಸದಿಂದ ಒಪ್ಪಿಕೊಂಡರು’ ಎನ್ನುತ್ತಾರೆ ಸುನಿಲ್‌.

ಮೇವಿನ ಕೊರತೆ ಇಲ್ಲ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆ ಎದುರಾಗಿದೆ. ಮೇವು ಪೂರೈಸಲಾಗದೆ ಕೊಟ್ಟಷ್ಟು ಹಣಕ್ಕೆ ಹಸುಗಳನ್ನು ಮಾರುತ್ತಿದ್ದಾರೆ. ಹೀಗಿದ್ದರು ಸುನಿಲ್‌ ನಡೆಸುತ್ತಿರುವ ಹೈನುಗಾರಿಕೆಗೆ ಮೇವು ಕೊರತೆ ಕಾಡಿಲ್ಲ. ಕೊಟ್ಟಿಗೆಯಲ್ಲಿ 50 ಅಡಿ ಉದ್ದ ಹಾಗೂ 12 ಅಡಿ ಅಗಲದ 4 ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ಪುಡಿ ಮಾಡಿದ ಮುಸುಕಿನ ಜೋಳ ಸಿಪ್ಪೆ, ಏಕದಳ ಧಾನ್ಯಗಳ ತೆನೆಯನ್ನು ಕಡಿಮೆ ನೀರು ಹಾಗೂ ಮಣ್ಣಿನ ಮಿಶ್ರಣದೊಂದಿಗೆ ಗಾಳಿಯಾಡದಂತೆ ಸಂಪೂರ್ಣವಾಗಿ ಮುಚ್ಚುವ ಮೂಲಕ ಸತ್ವಪೂರ್ಣ ಆಹಾರ ಬೆಳೆಯಲಾಗುತ್ತದೆ ಎಂಬ ಮಾಹಿತಿ  ನೀಡುತ್ತಾರೆ.

1 ತೊಟ್ಟಿಯಲ್ಲಿ ಸಂಗ್ರಹವಾಗಿರುವ ಮೇವು ಸುಮಾರು 2 ತಿಂಗಳಿಗೆ ಸಾಕಾಗುತ್ತೆ. ಈ ಮೇವು ಬಳಸುವುದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗುವುದಿಲ್ಲ. ಹೀಗಾಗಲೇ ಗ್ರಾಮದಲ್ಲಿ 6 ಕುಟುಂಬಗಳ ರೈತರು ಈ ವಿಧಾನ ಬಳಸುತ್ತಿದ್ದಾರೆ. ಜಿಲ್ಲೆಯಲ್ಲಿ ಬರಗಾಲದ ಹಿನ್ನೆಲೆಯಲ್ಲಿ ರೈತರು ಇಂತಹ ವಿಧಾನ ಅನುಸರಿಸುವುದು ಸೂಕ್ತ ಎಂದು ಸಲಹೆ ನೀಡುತ್ತಾರೆ ಅವರು.

ಶಿಕ್ಷಣ ಪಡೆದ ನಂತರ ಇನ್ನೊಬ್ಬರ ಅಧೀನದಲ್ಲಿ ದುಡಿಯುವುದಕ್ಕಿಂತ ಸ್ವಯಂ ಉದ್ಯೋಗ ಪ್ರಾರಂಭಿಸುವ ಮೂಲಕ ಇತರರಿಗೆ ಉದ್ಯೋಗ ನೀಡಿ, ದೇಶದ ಮೂಲ ಸಾವಯವ ಪರಿಕಲ್ಪನೆಯತ್ತ ಸಾಗೋಣವೆಂಬುದು ಅವರ ಮನದಾಳದ ಮಾತು.

***
ವಿದ್ಯಾಭ್ಯಾಸ ಮುಗಿದ ನಂತರ ಹಳ್ಳಿ ತೊರೆಯುವ ವಿದ್ಯಾ ವಂತರ ಮಧ್ಯೆ ಹಳ್ಳಿಯಲ್ಲೆ ಹೈನು ಗಾರಿಕೆಯಿಂದ ಕೈತುಂಬ ಹಣ ಸಂಪಾದಿ ಸಬಹುದೆಂದು ಸುನಿಲ್‌ ತೋರಿಸಿದ್ದಾರೆ

- ಗಿರೀಶ್​, ಗ್ರಾಮಸ್ಥ 

***
- ಕೆ.ಸಿ.ಮಣಿಕಂಠ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.