ADVERTISEMENT

3 ಕಡೆ ಗೋಶಾಲೆ ತೆರೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:07 IST
Last Updated 15 ಜುಲೈ 2017, 6:07 IST

ಕಡೂರು: ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಮುಂದುವರಿಯುವ ಲಕ್ಷಣಗಳಿದ್ದು, ತುರ್ತಾಗಿ ಕನಿಷ್ಠ ಮೂರು ಕಡೆ ಗೋಶಾಲೆಯನ್ನು ತೆರೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಮಹೇಶ್ ಒಡೆಯರ್ ಒತ್ತಾಯಿಸಿದರು. ಶುಕ್ರವಾರ ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಂಚನಹಳ್ಳಿಯಲ್ಲಿ ಗೋಶಾಲೆ ತೆರೆದಿದ್ದರಿಂದ ಇಂದು 6 ಸಾವಿರಕ್ಕೂ ಹೆಚ್ಚು ಗೋವುಗಳು ಅಲ್ಲಿ ಆಶ್ರಯ ಪಡೆದಿವೆ.

ಕಡೂರು ಮಾತ್ರವಲ್ಲದೆ, ಪಕ್ಕದ ತಾಲ್ಲೂಕುಗಳ ರಾಸುಗಳೂ ಅಲ್ಲಿವೆ. ಇದೀಗ ಮುಂಗಾರು ಬಹುತೇಕ ವಿಫಲವಾಗಿದ್ದು, ಜಾನುವಾರುಗಳ ರಕ್ಷಣೆಯ ನಿಟ್ಟಿನಲ್ಲಿ ಕಡೂರು ತಾಲ್ಲೂಕಿನ ಬಾಸೂರು ಅಮೃತ್ ಮಹಲ್ ಕಾವಲಿನಲ್ಲಿ ಗೋಶಾಲೆ ಆರಂಭಿಸಿದರೆ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ  ಉಪಯೋಗವಾಗಲಿದೆ. ಜತೆಯಲ್ಲಿ ಇತರ ಎರಡು ಕಡೆ ಗೋಶಾಲೆ ಪ್ರಾರಂಭಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದರು.

ಬೆಳೆವಿಮೆ ಯೋಜನೆಯಲ್ಲಿ ಕಂದಾಯ ಇಲಾಖೆ ಮತ್ತು ಬ್ಯಾಂಕುಗಳ ನಡುವೆ ಸಮನ್ವಯತೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬೆಳೆವಿಮೆ ಮಾಡಿಸಲೂ ರೈತನ ಬಳಿ ಹಣವಿಲ್ಲದಂತಾಗಿದೆ. ಆದ್ದರಿಂದ ರೈತರ ಬೆಳೆವಿಮಾ ಕಂತುಗಳನ್ನು ಸರ್ಕಾರವೇ ಪಾವತಿಸಬೇಕು ಎಂದರು.

ADVERTISEMENT

ತಾಲ್ಲೂಕಿನಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದ ತೆಂಗು ಸಂಪೂರ್ಣವಾಗಿ ನಾಶವಾಗಿದೆ. ಶೇ 33 ರಷ್ಟು ಬೆಳೆ ನಷ್ಟದ ಕೆಟ್ಟ ಪರಿಸ್ಥಿತಿಗೆ ರೈತ ತಲುಪಿದ್ದಾನೆ.
ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಮೂಲಕ ತಾಲ್ಲೂಕಿನ 32 ಕೆರೆಗಳಿಗೆ ನೀರು ಹರಿಸುವ ಯೋಜನೆಯೊಂದೇ ರೈತರ ಆಶಾಕಿರಣವಾಗಿದೆ ಎಂದು ಹೇಳಿದರು.

‘ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಲಿ’
ಬೀರೂರು: ಪ್ರಸಕ್ತ ಸಾಲಿನಲ್ಲಿಯೂ ಮುಂಗಾರು ವೈಫಲ್ಯದ ಪ್ರಯುಕ್ತ ಕಡೂರು ತಾಲ್ಲೂಕನ್ನು ಬರ ಪೀಡಿತ ಎಂದು ಘೋಷಿಸುವ, ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಹಾಗೂ ರೈತರಿಗೆ ವಿಮೆ, ಬರಪರಿಹಾರ ಒದಗಿಸುವ ಸಲುವಾಗಿ ಸರ್ಕಾರಕ್ಕೆ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲು ಜಿಲ್ಲಾಡಳಿತ ಈಗಲೇ ಸಜ್ಜಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್‌.ಮಹೇಶ್‌ ಒಡೆಯರ್‌ ಒತ್ತಾಯಿಸಿದರು.

ಪಟ್ಟಣದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಕಳೆದ ಸಾಲಿನಲ್ಲಿಯೂ ಸರ್ಕಾರ ಕಡೂರು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿತ್ತು, ಆದರೆ, ಅಂಕಿ– ಅಂಶಗಳ ಪ್ರಕಾರ ಈವರೆಗೂ ಶೇ 60ರಷ್ಟು ರೈತರಿಗೆ ಮಾತ್ರ ಪರಿಹಾರ ದೊರೆತಿದೆ. ಇನ್ನುಳಿದವರ ಪಾಡೇನು? ಬ್ಯಾಂಕ್‌ಗಳು ಮತ್ತು ಸರ್ಕಾರಿ ಅಧಿಕಾರಿಗಳ ಬಿಗಿ ನಿಲುವಿನಿಂದಾಗಿ ಸರ್ಕಾರದ ಅನೇಕ ಸೌಲಭ್ಯಗಳನ್ನು ರೈತರಿಗೆ ಸೂಕ್ತವಾಗಿ ತಲುಪಿಸುವಲ್ಲಿ ಹಲವು ನ್ಯೂನತೆಗಳು ಎದುರಾಗಿವೆ ಎಂದು ಅವರು ಆರೋಪಿಸಿದರು.

ಕಂದಾಯ ಇಲಾಖೆಯ ಬೆಳೆ ದೃಢೀಕರಣ ಪತ್ರವಿಲ್ಲದೆ ಬ್ಯಾಂಕ್‌ಗಳು ರೈತರ ವಿಮೆ ಕಂತು ಕಟ್ಟಿಸಿಕೊಳ್ಳುತ್ತಿಲ್ಲ. ತಾಲ್ಲೂಕು ಕಚೇರಿಯಲ್ಲಿ ಕೇಳಿದರೆ ಸಂಬಂಧಪಟ್ಟವರು ನಾವು ಕೈಬರಹದಲ್ಲಿ ಬೆಳೆ ದೃಢೀಕರಣ ಪತ್ರ ನೀಡಲು ಬರುವುದಿಲ್ಲ ಎನ್ನುತ್ತಾರೆ. ದಾರಿ ಯಾವುದು? ಎಂದರೆ ಕಂಪ್ಯೂಟರ್‌ ಕಡೆ ಬೆರಳು ಮಾಡುತ್ತಾರೆ.

ತಹಶೀಲ್ದಾರ್‌ ಹೇಳುವಂತೆ ಎರಡೂವರೆ ತಿಂಗಳಿನಿಂದ ಕಂಪ್ಯೂಟರ್‌ಗಳು ಕೆಟ್ಟಿವೆ. ಹೀಗಾದರೆ ರೈತರಿಗೆ ಒಳಿತು ಮಾಡಲು ಸಾಧ್ಯವೇ? ಇಂತಹ ಬೇಜವಾಬ್ದಾರಿ ನಡವಳಿಕೆಗಳ ಬದಲು ಜಿಲ್ಲಾಡಳಿತ ಮತ್ತು ಸರ್ಕಾರ ಈ ಹಿಂದೆ ರೈತರು ವಿಮೆ ಕಂತು ಪಾವತಿಸಿದ ಸಂದರ್ಭದಲ್ಲಿ ನೀಡಿದ್ದ ದಾಖಲೆಗಳನ್ನೇ ಪರಿಶೀಲಿಸಿ ಹಣ ಕಟ್ಟಿಸಿಕೊಳ್ಳುವಂತೆ ಬ್ಯಾಂಕ್‌ಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ನಾಲ್ಕು ವರ್ಷಗಳಿಂದ ನಿರಂತರ ಬರಸ್ಥಿತಿ ಅನುಭವಿಸುತ್ತಿದೆ. ರೈತಾಪಿ ವರ್ಗ ಕಂಗಾಲಾಗಿದೆ, ಕೆಲವೇ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಬರಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವೇ ರೈತರ ಬೆಳೆವಿಮೆ ಕಂತು ಭರಿಸಲಿ ಮತ್ತು ಬರ ನಿರ್ವಹಣೆಗೆ ಸಜ್ಜಾಗಲಿ. ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಕಡೂರು ಸೇರಿದಂತೆ ರಾಜ್ಯದ ಎಲ್ಲ ಹಿಂದುಳಿದ ತಾಲ್ಲೂಕುಗಳನ್ನು ಬರಪೀಡಿತ ಎಂದು ಈಗಲೇ ಘೋಷಿಸಲು ಮುಂದಾಗಲಿ.

ಇನ್ನು ಜಾನುವಾರು ಸಂರಕ್ಷಣೆ ವಿಷಯದಲ್ಲಿ ಬೀರೂರು ಅಮೃತಮಹಲ್‌ ಕಾವಲಿನಲ್ಲಿ ಈಗಲೇ ಗೋಶಾಲೆ ಆರಂಭಿಸಿದರೆ ಕಡೂರು, ಬೀರೂರು, ಹಿರೇನಲ್ಲೂರು, ಅಮೃತಾಪುರ, ಎಮ್ಮೆದೊಡ್ಡಿ ಭಾಗದ ರೈತರಿಗೂ ಅನುಕೂಲವಾಗಲಿದೆ. ರೈತರ ಸಮಸ್ಯೆಗಳಿಗೆ ಸುಲಭ ಪರಿಹಾರ ದೊರಕಿಸಿಕೊಡುವಲ್ಲಿ ಸರ್ಕಾರ ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.

* * 

ಬೆಳೆವಿಮೆ ಸಂಬಂಧಪಟ್ಟಂತೆ ಕಾಯ್ದೆಗಳು ಸುಧಾರಣೆಯಾಗಬೇಕು. ವಿಮೆ ಕೊಟ್ಟು ಕಿತ್ತುಕೊಳ್ಳುವಂತಹ ರೀತಿ ಬದಲಾಗಬೇಕು.
ಕೆ.ಆರ್.ಮಹೇಶ್ ಒಡೆಯರ್
ಜಿಲ್ಲಾ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.