ADVERTISEMENT

30ರಂದು ಪಟ್ಟಣಕ್ಕೆ ಮುಖ್ಯಮಂತ್ರಿ ಭೇಟಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 9:42 IST
Last Updated 17 ನವೆಂಬರ್ 2017, 9:42 IST
ನರಸಿಂಹರಾಜಪುರದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧದಲ್ಲಿ ಗುರುವಾರ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ
ನರಸಿಂಹರಾಜಪುರದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧದಲ್ಲಿ ಗುರುವಾರ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ   

ನರಸಿಂಹರಾಜಪುರ: ಇದೇ 30ರಂದು ಎನ್.ಆರ್.ಪುರ ಮತ್ತು ಕೊಪ್ಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿದ್ದು, ಎಲ್ಲ ಇಲಾಖೆಯವರು ಸಾಮೂಹಿಕ ಹೊಣೆಗಾರಿಕೆ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಪ್ರಯುಕ್ತ ಗುರುವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕ್ಷೇತ್ರ ಮಟ್ಟದಲ್ಲಿ ಯಾವುದೇ ಇಲಾಖೆಯ ದೊಡ್ಡ ಮಟ್ಟದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಕಟ್ಟಡಗಳ ಉದ್ಘಾಟನೆ ಇದ್ದರೆ ಮುಂಚಿತವಾಗಿ ಗಮನಕ್ಕೆ ತರಬೇಕು. ಎಲ್ಲ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ಒಂದೇ ಸ್ಥಳದಲ್ಲಿ ಮಾಡಲಾಗುವುದು. ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗುವುದು. ಯಾವುದೇ ಇಲಾಖೆಯವರು ಪ್ರತ್ಯೇಕವಾಗಿ ಆಹ್ವಾನ ಪತ್ರಿಕೆ ಮುದ್ರಿಸುವ ಮೊದಲು ಹೆಚ್ಚುವರಿ ಜಿಲ್ಲಾಧಿಕಾರಿಯ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ ಎಂದರು.

ADVERTISEMENT

ಎನ್.ಆರ್.ಪುರ ಮತ್ತು ಕೊಪ್ಪದಲ್ಲಿ ಎರಡು ಕಡೆ ಸಭಾ ಕಾರ್ಯಕ್ರಮವಿರುವುದರಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಲಿಫ್ಯಾಡ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೊಪ್ಪಕ್ಕೆ ರಸ್ತೆ ಮಾರ್ಗದ ಮೂಲಕ ಹೋಗುವುದರಿಂದ ಪ್ರಮುಖ ರಸ್ತೆಯನ್ನು ಸಂಪೂರ್ಣ ದುರಸ್ತಿಪಡಿಸಬೇಕು. ಪಟ್ಟಣದ ವ್ಯಾಪ್ತಿಯಲ್ಲೂ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಸೂಚಿಸಿದ್ದು, ಅಲ್ಲಿ ನೂತನ ಡಯಾಲಿಸಿಸ್ ಕೇಂದ್ರದ ಉದ್ಘಾಟನೆಗೆ ವ್ಯವಸ್ಥೆ ಮಾಡಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ 5 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲ್ಯಾಪ್ ಟ್ಯಾಪ್ ವಿತರಣೆ, ಕೃಷಿ ಭಾಗ್ಯ ಯೋಜನೆಯ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ, ಸಿಡಿಪಿಒ ಇಲಾಖೆಯಿಂದ ಸ್ತ್ರೀಶಕ್ತಿ ಸಂಘಗಳಿಗೆ ₹2 ಲಕ್ಷ ಮೊತ್ತದ ಚೆಕ್ ವಿತರಿಸುವ, ರೈತ ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಪರಿಹಾರ ವಿತರಿಸುವ, ಹಕ್ಕುಪತ್ರ ನೀಡುವ, ಶಾದಿ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಕಾರ್ಯಕ್ರಮ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿಗಳ ಕಾರ್ಯಕ್ರಮದ ದಿನ ನಿರಂತರ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಎಂಜಿನಿಯರ್ ಗೆ ಸೂಚಿಸಿ ದರು. ಪ್ರಮುಖ ಸಮಸ್ಯೆಗಳಿದ್ದರೆ ಅದರ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ಹೊಂದಿರುವಂತೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ತರೀಕೆರೆ ಉಪವಿಭಾಗಾಧಿಕಾರಿ ಸರೋಜಮ್ಮ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಸಂಗಪ್ಪ, ಕೊಪ್ಪ ಡಿವೈಎಸ್‌ ಪಿ ರವೀಂದ್ರಜಾಗೀದಾರ್, ತಹಶೀಲ್ದಾರ್ ಟಿ,ಗೋಪಿನಾಥ್ ಪಾಲ್ಗೊಂಡಿದ್ದರು.

ಮರಳು ಸಮಸ್ಯೆಗೆ ಶೀಘ್ರ ಪರಿಹಾರ: ಡಿಸಿ
ನರಸಿಂಹರಾಜಪುರ: ಮರಳು ಸಮಸ್ಯೆಗೆ ಶೀಘ್ರದಲ್ಲಿ ಸೂಕ್ತ ಪರಿಹಾರ ಕಂಡು ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು. ಪಟ್ಟಣಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ‘ದಕ್ಷಿಣ ಕನ್ನಡ ಜಿಲ್ಲೆಯಿಂದ ಮರಳು ತರಲು ಕೆರೆಕಟ್ಟೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಮಾತ್ರ ಲಾರಿಗಳ ಓಡಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮರಳಿಗೆ ಎರಡು ಪಟ್ಟು ಬೆಲೆ ನಿಗದಿಯಾಗುತ್ತಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ’ ಎಂದು ಗಮನ ಸೆಳೆದಾಗ ಈ ಬಗ್ಗೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆರ್‌ಟಿಓ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದ್ದು, ಶೀಘ್ರವೇ ಈ ಸಮಸ್ಯೆ ಬಗೆಹರಿಯಲಿದೆ ಎಂದರು.

ತಾಲ್ಲೂಕು ಕಚೇರಿಯಲ್ಲಿ ಜಮೀನು ಮಂಜೂರಾಗಿರುವ ಮೂಲ ದಾಖಲೆಗಳು ನಾಪತ್ತೆಯಾಗಿರುವ ಬಗ್ಗೆ ಪ್ರಶ್ನಿಸಿದಾಗ, ‘ಇದು ರಾಜ್ಯದಾದ್ಯಂತ ಇರುವ ಸಮಸ್ಯೆ. ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಹೊಸದಾಗಿ ದಾಖಲೆಯನ್ನು ನಿರ್ಮಿಸಿ ಕೊಡಬಹುದು. ಇದರ ಬಗ್ಗೆಯೂ ಗಮನಹರಿಸಲಾಗುವುದು’ ಎಂದರು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಇಸಿಜಿ ಹಾಳಾಗಿದ್ದು ರೋಗಿಗಳಿಗೆ ಸಮಸ್ಯೆಯಾಗಿದೆ ಎಂದಾಗ, ಮುಖ್ಯಮಂತ್ರಿಗಳು ಭೇಟಿ ನೀಡುತ್ತಿರುವುದರಿಂದ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದರು.

* * 

ಮುಖ್ಯಮಂತ್ರಿಗಳು ಆಗಮಿಸುವ ದಿನ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಯಾವುದೇ ಕಾರಣಕ್ಕೂ ರಜೆ ಹಾಕುವಂತಿಲ್ಲ
ಎಂ.ಕೆ.ಶ್ರೀರಂಗಯ್ಯ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.