ADVERTISEMENT

5 ಸ್ಥಳಗಳಲ್ಲಿ ಮಾಂಸ ಖಾದ್ಯ ಮಳಿಗೆ ಆರಂಭ

ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಸಂಘಗಳ ನಿರ್ದೇಶಕಿ ಆರ್. ಚಿತ್ರಾ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:40 IST
Last Updated 8 ಫೆಬ್ರುವರಿ 2017, 6:40 IST

ಚಿಕ್ಕಮಗಳೂರು: ಗ್ರಾಹಕರಿಗೆ ಗುಣ ಮಟ್ಟದ ಹಾಗೂ ಶುಚಿ, ರುಚಿಯಾದ ಕುರಿ ಮಾಂಸದ ಖಾದ್ಯ ಒದಗಿಸಲು ರಾಜ್ಯದ 5 ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಖಾದ್ಯ ಮಳಿಗೆಗಳನ್ನು ಆರಂಭಿಸ ಲಾಗುತ್ತಿದೆ ಎಂದು ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಸಂಘ ಗಳ ಮಹಾ ಮಂಡಳದ ನಿರ್ದೇಶಕಿ ಆರ್. ಚಿತ್ರಾ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೆಡಿ ಟು ಈಟ್’ ಮತ್ತು ‘ರೆಡಿ ಟು ಕುಕ್’ ಮಾದರಿಯಲ್ಲಿ ಖಾದ್ಯ ಮಳಿಗೆ ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಆರ್ಥಿಕ ಲಾಭನಷ್ಟ ಮತ್ತು ಗ್ರಾಹಕರ ಪ್ರತಿಕ್ರಿಯೆ ನೋಡಿ ಕೊಂಡು ನಂತರದ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕುರಿಗಾಹಿಗಳು ಮತ್ತು ಅವರ ಕುಟುಂಬದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಲಾಗಿದೆ. ಕುರಿಗಾಹಿಗಳಿಗೆ ಜೀವವಿಮೆ ಮಾಡಿಸ ಲಾಗುತ್ತಿದೆ. ದಲ್ಲಾಳಿಗಳಿಂದ ಆಗುತ್ತಿರುವ ವಂಚನೆ ತಪ್ಪಿಸಿ ಕುರಿ ಸಾಕಾಣಿಕೆದಾರರಿಗೆ ನ್ಯಾಯಯುತ ಬೆಲೆ ದೊರಕಿಸಲು ಎಪಿಎಂಸಿಗಳಲ್ಲಿ ಕುರಿಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜೀವಂತ ಕುರಿಗಳನ್ನು ತೂಕ ಮಾಡಿ ಹಣ ನೀಡಲು ಆದ್ಯತೆ ನೀಡಲಾಗಿದೆ. ಕುರಿ ವಧಾಗೃಹಗಳಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಆರೋಗ್ಯವಂತ ಕುರಿಗಳ ಮಾಂಸ ದೊರಕಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಹಲಾಲ್ ಕಟ್ ಮಾಡುವುದು ವೈಜ್ಞಾನಿಕ ಕ್ರಮವಾಗಿದೆ. ಕುರಿಯ ರಕ್ತ ಮಾಂಸಕ್ಕೆ ಸೇರದಂತೆ ವೈಜ್ಞಾನಿಕವಾಗಿ ಕತ್ತರಿಸಿ, ಮಾಂಸ ಮಾಡಿ ಕೆಡದಂತೆ ಪೊಟ್ಟಣ ಕಟ್ಟಿ ಮಾರಾಟ ಮಾಡುವ ಯೋಜನೆಯೂ ಇದೆ ಎಂದು ತಿಳಿಸಿದರು.

ಕುರಿಗಾಹಿಗಳು ಮೂಲತಃ ವಲಸೆ ಪ್ರವೃತ್ತಿಯವರು. ಅಸಂಘಟಿತ ವಲಯಕ್ಕೆ ಸೇರಿದವರು. ಊರೂರು ಅಲೆಯುತ್ತಾ ಬಯಲಿನಲ್ಲಿ ಜೀವನ ಕಳೆಯುತ್ತಾರೆ. ಇವರಿಗೆ ರಕ್ಷಣೆಯೂ ಇಲ್ಲ. ಕುರಿಗಳ ಕಳವು, ಕುರಿಗಾಹಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣ ಗಳು ನಮ್ಮ ಗಮನದಲ್ಲಿವೆ. ಕುರಿಗಾ ಹಿಗಳಿಗೆ ಸೂಕ್ತ ರಕ್ಷಣೆ ಕೊಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪಶುಪಾಲನೆ ಮತ್ತು ಪಶುವೈ ದ್ಯಕೀಯ ಸೇವಾ ಇಲಾಖೆ, ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಲದ ಸಹಯೋ ಗದಲ್ಲಿ ಇದೇ 11ರಂದು ಮಧ್ಯಾಹ್ನ 12ಕ್ಕೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕುರಿಸಾಕಣೆ ದಾರರ ಸಮಾವೇಶ ಹಮ್ಮಿಕೊಳ್ಳಲಾ ಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶ ಉದ್ಘಾಟಿಸುವರು ಎಂದರು.

ಪಶುಸಂಗೋಪನಾ ಸಚಿವ ಎ. ಮಂಜು ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಸಚಿವರಾದ ಸಚಿವ ರೋಷನ್‌ಬೇಗ್‌, ಕೆ.ಜೆ.ಜಾರ್ಜ್, ಕಾಗೋಡು ತಿಮ್ಮಪ್ಪ, ಎಚ್.ಕೆ. ಪಾಟೀಲ್, ಟಿ.ಬಿ.ಜಯಚಂದ್ರ, ರಾಮ ಲಿಂಗಾರೆಡ್ಡಿ, ರಮಾನಾಥ ರೈ, ಎಚ್.ಆಂಜನೇಯ, ಕೃಷ್ಣಬೈರೇಗೌಡ, ಎಂ.ಕೃಷ್ಣಪ್ಪ, ಎಸ್.ಎಸ್.ಮಲ್ಲಿಕಾ ರ್ಜುನ್, ಈಶ್ವರ ಖಂಡ್ರೆ, ರುದ್ರಪ್ಪ ಲಮಾಣಿ, ವಿಧಾನ ಪರಿಷತ್‌ ಸದಸ್ಯ ಎಚ್.ಎಂ.ರೇವಣ್ಣ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ ಪಾಲ್ಗೊಳ್ಳುವರು ಎಂದು ತಿಳಿಸಿದರು.

*
ಕುರುಬರು ಮಾತ್ರ ಕುರಿ ಸಾಕಣೆ ಮಾಡುತ್ತಿಲ್ಲ. ಗೊಲ್ಲರು, ವೀರಶೈವರು, ಒಕ್ಕಲಿಗರು ಸೇರಿದಂತೆ ಎಲ್ಲರೂ ಕುರಿ ಸಾಕುತ್ತಿದ್ದಾರೆ.  ಇವರ ಅಭಿವೃದ್ಧಿಗೆ ಮಹಾಮಂಡಲ ಶ್ರಮಿಸಲಿದೆ.
-ಆರ್. ಚಿತ್ರಾ,
ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಣೆದಾರರ ಸಂಘಗಳ ಮಹಾ ಮಂಡಳದ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT