ADVERTISEMENT

ಕಾಯಕಲ್ಪಕ್ಕೆ ಕಾದಿದೆ ಅಂಗನವಾಡಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 6:54 IST
Last Updated 22 ಜನವರಿ 2018, 6:54 IST

ಕೊಪ್ಪ: ವಿದ್ಯಾರ್ಥಿಗಳ ಕಿರಿದಾದ ಶೌಚಾಲಯ, ಹಳೆಯ ಕಟ್ಟಡ, ಚರಂಡಿ ನೀರಿನ ದುರ್ವಾಸನೆ, ನೀರಿಗಾಗಿ ಸಾರ್ವಜನಿಕ ನಲ್ಲಿಯ ಅವಲಂಬನೆ... ಇದು ಸಮೀಪದ ಗೊಲ್ಲರದೊಡ್ಡಿ ಗ್ರಾಮದ ಅಂಗನವಾಡಿ ಕೇಂದ್ರದ ದುಸ್ಥಿತಿ.

ಗೊಲ್ಲರದೊಡ್ಡಿ ಗ್ರಾಮದ ಅಂಗನವಾಡಿ ಕೆಂದ್ರದಲ್ಲಿ 11 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಂಗನವಾಡಿಯ ಸುತ್ತಮುತ್ತ ಕೊಳಚೆ ನೀರು ನಿಂತು ಸೊಳ್ಳೆಗಳ ಉಗಮ ಸ್ಥಾನವಾಗಿ ಮಾರ್ಪಟ್ಟಿದೆ. ಚರಂಡಿ ನೀರು ಅಂಗನವಾಡಿ ಬಳಿ ಹರಿದು ದುರ್ವಾಸನೆ ಬೀರುತ್ತಿದೆ. ಅಂಗನವಾಡಿ ಕೇಂದ್ರಕ್ಕೆ ಸ್ವಂತ ನಲ್ಲಿ ಇಲ್ಲದಿರುವುದರಿಂದ ಸಾರ್ವಜನಿಕ ನಲ್ಲಿಯ ನೀರನ್ನೆ ಅವಲಂಬಿಸಬೇಕಾಗಿದೆ. ಹೆಂಚುಗಳು ಅಲ್ಲಲ್ಲಿ ಒಡೆದು ಸೂರ್ಯನ ಕಿರಣಗಳು ಅಂಗನವಾಡಿ ಕೊಠಡಿಯನ್ನು ಪ್ರವೇಶಿಸುತ್ತಿವೆ. ಈ ಅವ್ಯವಸ್ಥೆಯಿಂದ ಹಲವು ಗರ್ಭಿಣಿ– ಬಾಣಂತಿಯರು ಮಾತೃಪೂರ್ಣ ಯೋಜನೆಯ ಉಪಯೋಗ ಪಡೆಯಲು ಹಿಂದೆಟು ಹಾಕುತ್ತಿದ್ದಾರೆ.

‘ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆತಂಕದಲ್ಲಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿದ್ದೇವೆ. ನಮ್ಮ ಗ್ರಾಮದ ಸರ್ವೆ ನಂಬರ್‌ 235ರಲ್ಲಿ ಸಾಕಷ್ಟು ಸರ್ಕಾರಿ ಭೂಮಿ ಇದೆ ಅದರಲ್ಲಿ ನೂತನ ಅಂಗನವಾಡಿ ಕಟ್ಟಡ ಕಟ್ಟಿ ಎಂದು ಸಂಬಂಧಿಸಿದವರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಕಂಡರೂ ಕಾಣದಂತೆ ಕುರುಡಾಗಿದೆ’ ಎನ್ನುತ್ತಾರೆ ಗ್ರಾಮದ ಮುಖಂಡರಾದ ಗೊಲ್ಲರದೊಡ್ಡಿ ಅಶೋಕ್, ನಾಗರಾಜು, ಉಮೇಶ, ಪ್ರಕಾಶ, ರಮೇಶ್‌ ಬಾಬು ಇತರರು.

ADVERTISEMENT

‘ಅಂಗನವಾಡಿ ಮೂಲ ಸೌಲಭ್ಯಗಳ ಕೊರತೆಯ ಬಗ್ಗೆ ನನಗೆ ಯಾವುದೇ ದೂರು ಬಂದಿಲ್ಲ. ಅಂಗನವಾಡಿ ಮೇಲ್ವಿಚಾರಕರಿಂದ ಮಾಹಿತಿ ಪಡೆದು ಅಗತ್ಯ ಕ್ರಮಕೈಗೊಳ್ಳುತ್ತೇನೆ’ ಎನ್ನುತ್ತಾರೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಚೇತನ್‌ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.