ADVERTISEMENT

ಅಂಗವೈಕಲ್ಯ ಮೆಟ್ಟಿನಿಂತ ರೇವಣ್ಣ

ಸಾಧನೆಗೆ ನೆರವಾದ ಅಡಿಕೆಹಾಳೆ ತಟ್ಟೆ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 9:14 IST
Last Updated 2 ಜೂನ್ 2018, 9:14 IST
ಚಿತ್ರದುರ್ಗದ ಬಾರ್‌ಲೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯ ಘಟಕದಲ್ಲಿ ಅಡಿಕೆಹಾಳೆ ತಟ್ಟೆ ತಯಾರಿಸುತ್ತಿರುವ ರೇವಣ್ಣ (ಬಲದಿಂದ ಮೊದಲನೆಯವರು)
ಚಿತ್ರದುರ್ಗದ ಬಾರ್‌ಲೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯ ಘಟಕದಲ್ಲಿ ಅಡಿಕೆಹಾಳೆ ತಟ್ಟೆ ತಯಾರಿಸುತ್ತಿರುವ ರೇವಣ್ಣ (ಬಲದಿಂದ ಮೊದಲನೆಯವರು)   

ಚಿತ್ರದುರ್ಗ: ಅಂಗವಿಕಲತೆ ಇದ್ದರೇನಂತೆ ಬದುಕುವ ಛಲ ಮತ್ತು ಸ್ವಾವಲಂಬಿ ಬದುಕಿನ ದೃಢ ಸಂಕಲ್ಪವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಗರದ ಬಾರ್‌ಲೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಅಡಿಕೆಹಾಳೆ ತಟ್ಟೆ ತಯಾರಿಸುವ ಉಪ್ಪನಾಯಕನಹಳ್ಳಿಯ ರೇವಣ್ಣ ನಿದರ್ಶನ.

2013ರಲ್ಲಿ ಈ ಉದ್ಯಮ ಪ್ರಾರಂಭಿಸಿದಾಗ ಹಣ ಮತ್ತು ಕೆಲಸಗಾರರ ಅಭಾವ, ಅನುಭವದ ಕೊರತೆಯಿಂದ ಇದರಲ್ಲಿ ಯಶಸ್ಸು ಕಾಣಲಿಲ್ಲ. ಮೂರು ತಿಂಗಳ ಬಳಿಕ ಇದು ಸ್ಥಗಿತಗೊಂಡಿತು. ಶಿವಮೊಗ್ಗಕ್ಕೆ ತೆರಳಿ ಅಗತ್ಯ ಮಾಹಿತಿ ಪಡೆದು ಮತ್ತೆ 2017 ಡಿಸೆಂಬರ್‌ನಲ್ಲಿ ಮರು ಆರಂಭಿಸಿದ್ದಾರೆ.

ಮಳೆಗಾಲಕ್ಕೂ ಮುಂಚೆಯೇ ಸಂಗ್ರಹ: ‘ಮಳೆಗಾಲಕ್ಕೂ ಮುಂಚಿತವಾಗಿ ನಾವು ಅಡಿಕೆ ಹಾಳೆಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ಕಚ್ಚಾ ವಸ್ತುಗಳನ್ನು ಪರಿಚಯವಿರುವವರ ಬಳಿಯಿಂದ ಖರೀದಿಸುತ್ತಿದ್ದೇನೆ. ₹ 50 ರಿಂದ ₹ 70 ಸಾವಿರವರೆಗೂ ಕಚ್ಚಾ ವಸ್ತುಗಳನ್ನು ಸಂಗ್ರಹಿಸುತ್ತೇನೆ. ದಿನಕ್ಕೆ ₹ 1,500 ರಿಂದ ₹ 2,000 ಖರ್ಚು ಬರುತ್ತದೆ. ಸಹಾಯಕರಾಗಿ ನಾಲ್ಕು ಜನ ಇದ್ದಾರೆ’ ಎನ್ನುತ್ತಾರೆ ರೇವಣ್ಣ.

ADVERTISEMENT

‘ಉನ್ನತ ಯಂತ್ರೋಪಕರಣ ಖರೀದಿಗಾಗಿ ಸುಮಾರು ₹ 2 ರಿಂದ– 4 ಲಕ್ಷ ಹಣ ಖರ್ಚಾಗುತ್ತದೆ. ಆರು ತಟ್ಟೆಗಳನ್ನು ಒಂದೇ ಬಾರಿ ತಯಾರು ಮಾಡುವ ಯಂತ್ರವಿದೆ. ಒಂದು ಗಂಟೆಗೆ 120 ರಿಂದ 150 ತಟ್ಟೆಗಳನ್ನು ತಯಾರು ಮಾಡಬಹುದು. ಈಗಿರುವ ಯಂತ್ರಗಳಿಗೆ ಮೂರು ಜನ ಬೇಕಾಗುತ್ತಾರೆ. ಆದರೆ ಉನ್ನತ ಯಂತ್ರೋಪಕರಣದಿಂದ ಒಬ್ಬರೇ ಕಾರ್ಯನಿರ್ವಹಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ವೇಗವಾಗಿ ತಟ್ಟೆಗಳನ್ನು ಸಿದ್ಧಪಡಿಸಬಹುದು. ಆಗ ಬೇಡಿಕೆಗೆ ಅನುಗುಣವಾಗಿ ಪೂರೈಸಬಹುದು’ ಎನ್ನುತ್ತಾರೆ ಅವರು.

‘ಒಂದು ತಟ್ಟೆಗೆ ₹ 1.80– ₹ 2.80 ರವರೆಗೆ ಬೆಲೆ ಇದೆ. ಖರ್ಚನ್ನು ಕಳೆದು 50 ಪೈಸೆ ಸಿಗುತ್ತದೆ. ಕಾರ್ಮಿಕರ ಖರ್ಚನ್ನು ಕಳೆದು ತಿಂಗಳಿಗೆ ₹ 25 ರಿಂದ 30 ಸಾವಿರ ಆದಾಯ ಗಳಿಸಬಹುದು. ಉದ್ಯಮ ದೊಡ್ಡದು ಮಾಡಿ ಹಲವು ಜನರಿಗೆ ಉದ್ಯೋಗ ದೊರಕಿಸಬೇಕು ಎನ್ನುವ ಆಸೆ ಇದೆ. ಆದರೆ, ನಮಗೆ ಸಹಕಾರ ಸಿಗಬೇಕು’ ಎಂದು ವಿವರಿಸಿದರು.

10 ರಿಂದ 12 ಇಂಚಿನ ಊಟದ ತಟ್ಟೆಗಳು ವೃತ್ತಾಕಾರದಲ್ಲಿ ಇರುತ್ತವೆ. ಉಳಿದ ಹಾಳೆಯಲ್ಲಿ 4, 6, 8 ಇಂಚಿನ ಚೌಕಾಕಾರದ ತಟ್ಟೆಗಳನ್ನು ತಯಾರು ಮಾಡಲಾಗುತ್ತದೆ. ಇದರಲ್ಲಿ ಉಳಿದ ಕಚ್ಚಾ ವಸ್ತುವನ್ನು ಹೊಲಗಳಿಗೆ ಗೊಬ್ಬರವಾಗಿ ಬಳಸಲಾಗುತ್ತಿದೆ.

‘ಬೇಡಿಕೆ ಹೆಚ್ಚಿದೆ’

ಜಾತ್ರೆ, ಹಬ್ಬದ ದಿನಗಳಲ್ಲಿ ಮಾತ್ರವಲ್ಲದೆ ಎಲ್ಲ ಸಮಯದಲ್ಲೂ ಅಡಿಕೆ ತಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸ್ಥಳೀಯ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇದೆ. ನಾವಿರುವಲ್ಲಿಗೆ ಬಂದು ತೆಗೆದುಕೊಂಡು ಹೋಗುತ್ತಾರೆ. ಸ್ಥಳೀಯವಾಗಿ ಹಾಗೂ ಮುಂಗಡವಾಗಿ ಕೊಡುವ ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತಿದ್ದೇವೆ. ಯಂತ್ರೋಪಕರಣಗಳ ಕೊರತೆ ಇರುವುದರಿಂದ ಹೊರಗಿನ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿಲ್ಲ ಎನ್ನುತ್ತಾರೆ ರೇವಣ್ಣ.

ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.