ADVERTISEMENT

ಆರು ಬಾರಿ ವಿಜೇತರಾದ ಆತಿಥೇಯರು!

ರಾಷ್ಟ್ರೀಯ ಜೂನಿಯರ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ತಂಡಗಳ ನಡುವೆ ಪ್ರಶಸ್ತಿಗಾಗಿ ಏರ್ಪಟಿದ್ದ ಪೈಪೋಟಿ

ಗಾಣಧಾಳು ಶ್ರೀಕಂಠ
Published 21 ಜನವರಿ 2017, 5:46 IST
Last Updated 21 ಜನವರಿ 2017, 5:46 IST
ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವಿನ ಹಣಾಹಣಿ
ಕರ್ನಾಟಕ ಮತ್ತು ತಮಿಳುನಾಡು ತಂಡಗಳ ನಡುವಿನ ಹಣಾಹಣಿ   

ಚಿತ್ರದುರ್ಗ: ಕಳೆದ ಒಂದು ವಾರದ ಅವಧಿಯಲ್ಲಿ ಸತತವಾಗಿ ಅಮೋಘ ಪ್ರದರ್ಶನದ ನೀಡಿದ ಕರ್ನಾಟಕ ತಂಡ ರಾಷ್ಟ್ರೀಯ ಜೂನಿಯರ್‌ ವಾಲಿಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ವಿಜಯಿಯಾ ಗಿದೆ. ಆತಿಥ್ಯ ವಹಿಸಿದ್ದ ಸಂದರ್ಭದಲ್ಲಿ ಹಿಂದೆಲ್ಲ ಕರ್ನಾಟಕ ಉತ್ತಮ ಸಾಧನೆ ತೋರಿದ್ದು, ಆ ಪರಂಪರೆ ಕೋಟೆ ನಾಡಿನಲ್ಲೂ  ಮುಂದುವರಿಯಿತು.

ಇದು 43ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಗಿದ್ದು, ಕರ್ನಾಟಕ ಬಾಲಕರಿಗೆ ಆರನೇ ಪ್ರಶಸ್ತಿ. ಈ ಆರು ಪ್ರಶಸ್ತಿಗಳಲ್ಲಿ ನಾಲ್ಕು ಬಂದಿರುವುದು ಕರ್ನಾಟಕದಲ್ಲಿ ಪಂದ್ಯಾವಳಿ ನಡೆದಿರುವಾಗ ಎಂಬುದು ವಿಶೇಷ. ಒಟ್ಟು ಏಳು ಬಾರಿ ರಾಜ್ಯ ಈ ಚಾಂಪಿಯನ್‌ಷಿಪ್‌ಗೆ ಆತಿಥ್ಯ ವಹಿಸಿದೆ. ನಾಲ್ಕು ಬಾರಿ ಚಾಂಪಿಯನ್‌ ಕಿರೀಟ. ಎರಡು ಬಾರಿ ರನ್ನರ್‌ ಅಪ್‌, ಒಮ್ಮೆ ಮೂರನೇ ಸ್ಥಾನ ಪಡೆದಿರುವುದು ಕಡಿಮೆಯೇನಲ್ಲ. 

1987ರಲ್ಲಿ ಮೊದಲ ಬಾರಿ ಕರ್ನಾಟಕ ಈ ಕೂಟದ ಆತಿಥ್ಯ ವಹಿಸಿದ್ದಾಗ ಬಾಲಕರ, ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ (2006),  ಮಂಡ್ಯ ಜಿಲ್ಲೆಯ  ಚಿನಕುರಳಿ ಯಲ್ಲಿ ಕೂಡ ವಿಜೇತ ಪಟ್ಟ ಪಡೆದಿತ್ತು. ವಿಜಯಪುರ (1994) ಮತ್ತು ನಿಪ್ಪಾಣಿ (1996) ಯಲ್ಲಿ  ಕರ್ನಾಟಕ ಬಾಲಕರ ತಂಡ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು!

ಮೊದಲ ಬಾರಿ ಕರ್ನಾಟಕ ಆತಿಥ್ಯ ವಹಿಸಿದ್ದು 1987ರಲ್ಲಿ. ಆ ವರ್ಷ ಕರ್ನಾಟಕ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ ಆಗಿತ್ತು. ಇದರ ಜೊತೆಗೆ ನೆರೆಯ ರಾಜ್ಯ ಆಂಧ್ರಪ್ರದೇಶದ ತೆನಾಲಿ (1989) ಮತ್ತು ವಾರಂಗಲ್‌ (1998) ನಲ್ಲಿ ಈ ಚಾಂಪಿಯನ್‌ಷಿಪ್‌ ನಡೆದಾಗ ರಾಜ್ಯ ಚಾಂಪಿಯನ್‌ ಆಗಿತ್ತು. ಬಾಲಕಿಯರ ತಂಡ ಎರಡು ಬಾರಿ ಪ್ರಶಸ್ತಿ, ಒಮ್ಮೆ ರನ್ನರ್‌ ಅಪ್‌, ಎರಡು ಬಾರಿ ಮೂರನೇ ಸ್ಥಾನ ಪಡೆದಿದೆ.

ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿ ಯನ್‌ಷಿಪ್‌ಗೆ ನಾಲ್ಕು ದಶಕಗಳ ಇತಿಹಾಸವಿದೆ. 1975ರಲ್ಲಿ ಭಿಲಾಯಿಯಲ್ಲಿ ಮೊದಲ ಬಾರಿ ಈ ಚಾಂಪಿಯನ್‌ಷಿಪ್‌ ನಡೆದಿತ್ತು.

ಪ್ರಬಲ ತಂಡಗಳು: ಉತ್ತರ ಭಾರತದಲ್ಲಿ ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್, ದಕ್ಷಿಣದಲ್ಲಿ ತಮಿಳುನಾಡು ಮತ್ತು ಕರ್ನಾಟಕ ತಂಡಗಳು ಪ್ರತಿ ಬಾರಿ ಉತ್ತಮ ಪ್ರದರ್ಶನ ನೀಡುವ ತಂಡಗಳು ಎಂದು ಹೇಳಲಾಗುತ್ತಿದೆ. ಪ್ರತಿ ಬಾರಿ ಪಂದ್ಯ ನಡೆದಾಗ, ಈ ರಾಜ್ಯಗಳ ತಂಡಗಳು ಒಂದಲ್ಲ ಒಂದು ಬಹುಮಾನ ಪಡೆದಿವೆ. ಉಳಿದಂತೆ ಪಂಜಾಬ್, ಚಂಡಿಗಡ, ಪಶ್ಚಿಮ ಬಂಗಾಳ ಮತ್ತು  ಕೇರಳ, ತಮಿಳುನಾಡು ತಂಡಗಳೂ ಪೈಪೋಟಿ ನೀಡಿ ಅಪರೂಪಕ್ಕೆ ವಿಜೇತರಾದ ದಾಖಲೆ ಹೊಂದಿವೆ.

ಎರಡು ವರ್ಷಗಳ ಹಿಂದೆ ಚಂಡೀಗಡ, ಕಳೆದ ವರ್ಷ ಬಿಹಾರದ ಛಪ್ರಾಕ್ಕೆ ಅವಕಾಶ ಒದಗಿತು. ನಂತರದ ಪ್ರಯತ್ನದಲ್ಲಿ ಉತ್ತರಾಖಂಡ್‌ಗೆ ಅವಕಾಶ ದೊರೆತಿತ್ತು. ಹಲವು ಪ್ರಯತ್ನ ಗಳ ನಡುವೆ ಕರ್ನಾಟಕಕ್ಕೆ ಆತಿಥ್ಯ ಒದಗಿತು ಎಂದು  ರಾಷ್ಟ್ರೀಯ ವಾಲಿಬಾಲ್ ಫೆಡರೇಷನ್ ಅಧ್ಯಕ್ಷ ಬೆಟ್ಟೇಗೌಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.