ADVERTISEMENT

ಉಪ್ಪಾರ ಅಭಿವೃದ್ಧಿ ನಿಗಮ ಜನವರಿಯಲ್ಲಿ ಲೋಕಾರ್ಪಣೆ: ಸಚಿವ ಆಂಜನೇಯ

ಪುರುಷೋತ್ತಮಾನಂದಪುರಿ ಶ್ರೀ ಜನ್ಮದಿನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 9:55 IST
Last Updated 30 ನವೆಂಬರ್ 2017, 9:55 IST
ಹೊಸದುರ್ಗದಲ್ಲಿ ಭಗೀರಥ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಬುಧವಾರ ಭೂಮಿ ಪೂಜೆ ಮಾಡಿದರು. ಪುರುಷೋತ್ತಮಾನಂದಪುರಿ ಸ್ವಾಮೀಜಿ ಚಿತ್ರದಲ್ಲಿದ್ದಾರೆ.
ಹೊಸದುರ್ಗದಲ್ಲಿ ಭಗೀರಥ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಬುಧವಾರ ಭೂಮಿ ಪೂಜೆ ಮಾಡಿದರು. ಪುರುಷೋತ್ತಮಾನಂದಪುರಿ ಸ್ವಾಮೀಜಿ ಚಿತ್ರದಲ್ಲಿದ್ದಾರೆ.   

ಹೊಸದುರ್ಗ: ಮುಂದಿನ ಜನವರಿಯಲ್ಲಿ ಉಪ್ಪಾರ ಆಭಿವೃದ್ಧಿ ನಿಗಮವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದರು.

ಬ್ರಹ್ಮವಿದ್ಯಾನಗರದ ಚಿನ್ಮೂಲಾದ್ರಿ ಶಿಲಾಪುರಿ ಮಹಾ ಸಂಸ್ಥಾನದ ಭಗೀರಥ ಗುರುಪೀಠದ ಆವರಣದಲ್ಲಿ ರಾಜ್ಯ ಮತ್ತು ತಾಲ್ಲೂಕು ಭಗೀರಥ ನೌಕರರ ಸಂಘ ಬುಧವಾರ ಹಮ್ಮಿಕೊಂಡಿದ್ದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ 49ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

‘ನಿಗಮದ ಬೆಳವಣಿಗೆಗೆ ಬೇಕಾಗುವಷ್ಟು ಅನುದಾನ ಮೀಸಲಿಡಲು ಹಾಗೂ ಭಗೀರಥ ಮಠದ ಸಾಗುವಳಿ ಜಮೀನಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು. ಭಗೀರಥ ಸಮುದಾಯ ಮತ್ತು ಜಾನಪದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಸಂಸದ ಬಿ.ಎನ್‌.ಚಂದ್ರಪ್ಪ ಮಾತನಾಡಿ, ಉಪ್ಪಾರ ಸಮಾಜದವರು ಶಿಸ್ತು ಹಾಗೂ ಮಠದ ಜತೆಗೆ ಹೆಚ್ಚು ಸಂಬಂಧ ಬೆಳೆಸಿಕೊಂಡಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ‘ಸುಮಾರು ₹ 4 ಕೋಟಿ ವೆಚ್ಚದಲ್ಲಿ ಹೊಸದುರ್ಗ ಪಟ್ಟಣದ ಸಮೀಪ ಭಗೀರಥ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು.ಹಿಂದಿನ ಸರ್ಕಾರ ₹ 1 ಕೋಟಿ ಅನುದಾನ ನೀಡಿತ್ತು. ಈ ಭವನ ನಿರ್ಮಾಣಕ್ಕೆ ಬೇಕಾದ ಇನ್ನುಳಿದ ಹಣ ಹಾಗೂ ಯುಗಧರ್ಮ ರಾಮಣ್ಣ ಅವರ ನೇತೃತ್ವದಲ್ಲಿ ನಿರ್ಮಾಣ ಆಗುತ್ತಿರುವ ಭಗೀರಥ ಸಾಂಸ್ಕೃತಿಕ ಜಾನಪದ ಭವನ ನಿರ್ಮಾಣಕ್ಕೆ ಈಗಿನ ಸರ್ಕಾರ ಶೀಘ್ರವೇ ಹಣ ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು.

ಲಿಂಗೈಕ್ಯ ಲೇಪಾಕ್ಷಿ ಸ್ವಾಮೀಜಿ ಐಕ್ಯ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಶುದ್ಧಗಂಗಾ ಕುಡಿಯುವ ನೀರಿನ ಘಟಕ ಉದ್ಘಾಟನೆ, ಭಗೀರಥ ಮಠದ 2018ರ ಕ್ಯಾಲೆಂಡರ್‌ ಬಿಡುಗಡೆ, ಭುವನೇಶ್ವರಿ ಕಲ್ಲಿನ ಮೂರ್ತಿ ಅನಾವರಣ, ರಾಜ್ಯ ಮಟ್ಟದ ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ತರಬೇತಿ ಶಿಬಿರ, ಗುರುವಂದನೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು.

ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷ ಸಿ.ಪುಟ್ಟರಂಗ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ವಿಶಾಲಾಕ್ಷಿ ನಟರಾಜು, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ, ಕೆಪಿಎಸ್‌ಸಿ ಸದಸ್ಯ ಶ್ರೀಕಾಂತರಾವ್‌, ಹುಬ್ಬಳ್ಳಿಯ ಶಿಕ್ಷಣತಜ್ಞ ಲಕ್ಷ್ಮಣ್‌ ಉಪ್ಪಾರ್‌, ರಾಜ್ಯ ಉಪ್ಪಾರ ಸಂಘದ ಹಿರಿಯ ಕಾರ್ಯದರ್ಶಿ ಎ.ವಿ.ಲೋಕೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ಕೊಂಡಾಪುರದ ಡಿ.ಮಂಜುನಾಥ್‌, ತಾಲ್ಲೂಕು ಭಗೀರಥ ನೌಕರರ ಸಂಘದ ಅಧ್ಯಕ್ಷ ಸಿ.ಮೌನೇಶ್‌, ಕಾರ್ಯಾಧ್ಯಕ್ಷ ಆರ್‌.ರಾಜಪ್ಪ, ಯುಗಧರ್ಮ ರಾಮಣ್ಣ ಅವರೂ ಇದ್ದರು.

₹10 ಕೋಟಿ ಅನುದಾನಕ್ಕೆ ಪ್ರಸ್ತಾವ
ಉಪ್ಪಾರ ಸಮಾಜದ ಅಭಿವೃದ್ಧಿಗೆ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಗೀರಥ ಮಠದ ಅಭಿವೃದ್ಧಿ ಕಾರ್ಯಗಳಿಗೆ ₹ 10 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಭಗೀರಥ ಸಮುದಾಯ ಭವನ ನಿರ್ಮಾಣಕ್ಕೆ ಹೊಸದುರ್ಗ ಪಟ್ಟಣದ ಸಮೀಪ ಕೋಟ್ಯಂತರ ಬೆಲೆ ಬಾಳುವಂತಹ 3 ಎಕರೆ 20 ಗುಂಟೆ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ.

ಮಠದ 600 ಎಕರೆ ಜಮೀನಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆ ನಿವಾರಿಸಲು ಆದಷ್ಟೂ ಬೇಗನೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ, ಸಚಿವ ಎಚ್‌.ಆಂಜನೇಯ ಅವರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.