ADVERTISEMENT

ಉಳ್ಳವರಿಗೆ ಮನೆ ಹಂಚಿಕೆ ಮಾಡಿದ್ದರೆ ಶಿಸ್ತು ಕ್ರಮ

ಜಾಗೃತಿ ಸಮಿತಿ ಸಭೆಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 9:03 IST
Last Updated 16 ಸೆಪ್ಟೆಂಬರ್ 2014, 9:03 IST
ಚಿತ್ರದುರ್ಗದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯ್ತಿಯ ಪ್ರಸಕ್ತ ಸಾಲಿನ ವಸತಿ ಯೋಜನೆಗಳ ಕುರಿತ ಜಾಗೃತಿ ಸಮಿತಿ ಸಭೆಯಲ್ಲಿ ಪಿಡಿಒಗಳು, ಗ್ರಾಮಸ್ಥರು ಹಾಗೂ ಫಲಾನುಭವಿಗಳು ಹಾಜರಿದ್ದರು
ಚಿತ್ರದುರ್ಗದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯ್ತಿಯ ಪ್ರಸಕ್ತ ಸಾಲಿನ ವಸತಿ ಯೋಜನೆಗಳ ಕುರಿತ ಜಾಗೃತಿ ಸಮಿತಿ ಸಭೆಯಲ್ಲಿ ಪಿಡಿಒಗಳು, ಗ್ರಾಮಸ್ಥರು ಹಾಗೂ ಫಲಾನುಭವಿಗಳು ಹಾಜರಿದ್ದರು   

ಚಿತ್ರದುರ್ಗ: ಇಂದಿರಾ ಆವಾಸ್ ಹಾಗೂ ಬಸವ ವಸತಿ ಯೋಜನೆಯಡಿ ನಿಜವಾದ ಫಲಾನುಭವಿಗಳನ್ನು ಬಿಟ್ಟು ಉಳ್ಳವರಿಗೆ ಮನೆ ಹಂಚಿಕೆ ಮಾಡಿರುವುದು ಗೊತ್ತಾದರೆ, ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಎಚ್ಚರಿಸಿದರು.

ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಚಿತ್ರದುರ್ಗ ತಾಲ್ಲೂಕು ಪಂಚಾಯ್ತಿಯ ಪ್ರಸಕ್ತ ಸಾಲಿನ ವಸತಿ ಯೋಜನೆಗಳ ಕುರಿತ ಜಾಗೃತಿ ಸಮಿತಿ ಸಭೆಯಲ್ಲಿ ಕಿಕ್ಕಿರಿದು ತುಂಬಿದ್ದ ಫಲಾನುಭವಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರ್ಕಾರಗಳು ವಿವಿಧ ಹೆಸರಿನಡಿ ನೀಡುವಂತಹ ಸೌಲಭ್ಯಗಳಲ್ಲೊಂದಾದ ಮನೆಗಳ ಹಂಚಿಕೆ ಯೋಜನೆ ಸಂಪೂರ್ಣ ಫಲಶೃತಿಯಾಗಲು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ನಿಜವಾದ ಫಲಾನುಭವಿಗಳನ್ನು ಗುರುತಿಸಿದ ನಂತರವೇ ನೀಡಬೇಕು.

ಗ್ರಾಮಸಭೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ಕುರಿತು ಖುದ್ದು ಸ್ಥಳ ಪರಿಶೀಲನೆ ಮಾಡಿ ಗುರುತಿಸುವ ಕಾರ್ಯವಾಗಬೇಕು. ಯಾವ ಕಾರಣಕ್ಕೂ ಫಲಾನುಭವಿಗಳಿಗೆ ಅನ್ಯಾಯವಾಗಬಾರದು ಎಂದರು.

ಪಂಚಾಯ್ತಿ ವ್ಯಾಪ್ತಿಯಲ್ಲಿ ಏನಾದರೂ ಅನ್ಯಾಯವಾಗಿದ್ದರೆ, ತಕ್ಷಣ ತಿಳಿಸಿ ಅದನ್ನು ಸರಿಪಡಿಸಲಾಗುವುದು. ಅಲ್ಲದೇ, ಜಿಪಿಎಸ್ ಅನುಮೋದನೆ ಆಗಬೇಕಾದರೆ, ಖಾಲಿ ನಿವೇಶನ ಇರಬೇಕು. ಮನೆ ಇರುವವರು ಹೆಸರುಗಳನ್ನು ಬರೆಯಿಸಿ ನಂತರ ಜಿಪಿಎಸ್ ನಡೆಸುವಾಗ ವಾಪಾಸ್‌ ಹೋಗುವಂತೆ ಆಗಬಾರದು ಎಂದು ಸಲಹೆ ನೀಡಿದರು.

ಇಂದಿರಾ ಆವಾಸ್ ಯೋಜನೆಯಡಿ ೨೦೧೪-–೧೫ನೇ ಸಾಲಿನಲ್ಲಿ ೬೩೨ ಮನೆಗಳು ಮಂಜೂರಾಗಿದ್ದು, ವಿಧಾನಸಭೆ ಕ್ಷೇತ್ರದ ೨೨ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಅವರು ಮನೆ ಕಟ್ಟಿಕೊಳ್ಳಲು ಪ್ರತಿ ಫಲಾನುಭವಿಗೆ ₨ ೧.೨ ಲಕ್ಷ ಹಾಗೂ ನಿರ್ಮಲ್‌ ಭಾರತ್ ಯೋಜನೆಯಡಿ ₨ ೪,೫೦೦ ಶೌಚಾಲಯ ನಿರ್ಮಿಸಿಕೊಳ್ಳಲು ಅನುದಾನ ನೀಡಲಾಗುತ್ತದೆ. ಈ ಹಂತದಲ್ಲಿ ಮನೆ ಸಿಗದೇ ಇರುವವರಿಗೆ ಮುಂದಿನ ಹಂತದಲ್ಲಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

5 ವರ್ಷದಲ್ಲಿ ಇದೇ ಮೊದಲ ಬಾರಿಗೆ ಚಿತ್ರದುರ್ಗ ವಿಧಾನಸಭೆ ಕ್ಷೇತ್ರಕ್ಕೆ ಹೆಚ್ಚಿನ ಮನೆಗಳು ಮಂಜೂರಾಗಿವೆ. ಕಳೆದ ವರ್ಷ ಸುಮಾರು ೩.೧೮ ಲಕ್ಷ ಮನೆಗಳು ರದ್ದುಗೊಂಡಿವೆ. ಈ ಬಗ್ಗೆ ಸರ್ಕಾರದ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗಿರಿ ಎಂ.ಜಾನಕಲ್, ಸದಸ್ಯರಾದ ಡಿ.ರಮೇಶ್, ಕೆಂಚಮ್ಮ, ಸುಜಾತಾ, ತಾ.ಪಂ. ಅಧ್ಯಕ್ಷ ಎನ್.ಟಿ.ರಾಜ್‌ಕುಮಾರ್, ಉಪಾಧ್ಯಕ್ಷೆ ರಂಗಮ್ಮ, ಸದಸ್ಯರಾದ ಆನಂದ್, ಪ್ರತಿಭಾ, ಆಶಾ, ಮಹಾಲಿಂಗಪ್ಪ, ಪರಮೇಶ್ವರ್ ಇತರರು ಇದ್ದರು.

‘ಪಿಡಿಒ ಅಮಾನತು ಮಾಡಿ’
ಸಭೆಗೆ ಹಾಜರಾಗದ ಅನ್ನೇಹಾಳ್ ಪಿಡಿಒ ಅವರನ್ನು ಇಒ ಗಮನಕ್ಕೆ ತಂದು ಕರ್ತವ್ಯ ಲೋಪದ ಆರೋಪದ ಮೇಲೆ ಅವರನ್ನು ಅಮಾನತು ಮಾಡಿ.

ಗ್ರಾಮ ಪಂಚಾಯ್ತಿ ಸದಸ್ಯರು ಈ ಯೋಜನೆಗಳಡಿ ಮನೆ ಪಡೆಯುವಂತಿಲ್ಲ. ಒಂದೊಮ್ಮೆ ಮನೆ ಪಡೆದರೆ, ಅಂಥವರ ಸದಸ್ಯತ್ವ ರದ್ದಾಗಲಿದೆ. ಮನೆ ಪಡೆದುಕೊಳ್ಳಲು ಫಲಾನುಭವಿಗಳು ಯಾರಿಗಾದರೂ ಹಣ ನೀಡಿರುವುದು ಗೊತ್ತಾದರೆ, ಅಂಥವರ ಹೆಸರನ್ನು ಪಟ್ಟಿಯಿಂದ ರದ್ದು ಮಾಡಲಾಗುವುದು.
ಜಿ.ಎಚ್‌.ತಿಪ್ಪಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT