ADVERTISEMENT

‘ಕನ್ನಡದ ಉಳಿವಿಗೆ ಡಬ್ಬಿಂಗ್ ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 7:04 IST
Last Updated 23 ಏಪ್ರಿಲ್ 2017, 7:04 IST

ಚಿತ್ರದುರ್ಗ: ‘ರಾಜ್ಯದಲ್ಲಿ ಡಬ್ಬಿಂಗ್ ಸಿನಿಮಾಗಳ ಪ್ರದರ್ಶನಕ್ಕೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ನಿರ್ಧರಿಸಿದೆ. ಇದನ್ನು ವಿರೋಧಿಸುವವರಿದ್ದರೆ ಅವರೊಂದಿಗೆ ನೇರವಾಗಿ ಚರ್ಚೆ ಮಾಡಲು ಸಿದ್ಧರಿದ್ದೇವೆ’ಎಂದು ಮಂಡಳದ ರಾಜ್ಯಘಟಕದ ಅಧ್ಯಕ್ಷ  ಓದುಗೌಡರ್ ತಿಳಿಸಿದರು.

ನಗರದ ಐಶ್ವರ್ಯ ಫೋರ್ಟ್‌ ಸಭಾಂಗಣದಲ್ಲಿ ಶನಿವಾರ ರಾಜ್ಯದ ಚಿತ್ರ ಮಂದಿರದ ಮಾಲೀಕರ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಾಗಿದೆ. ಪರಿಣಾಮವಾಗಿ ಕನ್ನಡ ಸಿನಿಮಾ ನೋಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕನ್ನಡ ಭಾಷೆಯೂ ಸಂಕಷ್ಟಕ್ಕೆ ಸಿಲುಕುತ್ತಿದೆ. ಇದನ್ನು ಅರಿತುಕೊಂಡು ನಮ್ಮ ಭಾಷೆ ಉಳಿವಿಗಾಗಿ ಶ್ರಮಿಸುತ್ತಿದ್ದೇವೆ. ಈ ಬಗ್ಗೆ ಯಾರು ಎಲ್ಲಿಗೆ ಕರೆದರೂ ಬಂದು ಮಾತನಾಡಲು ಸಿದ್ಧ’ ಎಂದರು.

‘ಡಬ್ಬಿಂಗ್ ಚಿತ್ರಗಳನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಆದರೆ, ಸರ್ಕಾರ ಚಿತ್ರಮಂದಿರಗಳಿಗೆ ರಕ್ಷಣೆ ನೀಡಬೇಕು. ನಮ್ಮ ಸಂಘಟನೆ ಹೆಚ್ಚು ಕನ್ನಡ ಸಿನಿಮಾ ಬಿಡುಗಡೆಯಾಗಬೇಕೆಂದು ಬಯಸುತ್ತದೆ. ಹೆಚ್ಚು ಸಿನಿಮಾ ಬಿಡುಗಡೆಯಾದರೆ ಮಾತ್ರ ಪ್ರದರ್ಶಕರು ಉಳಿಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
‘ಉತ್ತರ ಕರ್ನಾಟಕದಲ್ಲಿ ತಮಿಳು, ತೆಲುಗು, ಹಿಂದಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆ. ಅಂಥ ಕಡೆ ಡಬ್ಬಿಂಗ್ ಸಿನಿಮಾ ಹೆಚ್ಚು ಓಡುತ್ತವೆ. ಬಾಹುಬಲಿ ಕನ್ನಡಕ್ಕೆ ಡಬ್ಆದರೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರದರ್ಶನ ಕಾಣಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ ಎಂದು ಹೇಳುತ್ತಾರೆ. ಇದು ಚಿತ್ರರಂಗದವರು ಸೃಷ್ಟಿಸುವ ಕೃತಕ ಅಭಾವ. ಹೊಸ ಚಿತ್ರಕ್ಕೆ ಚಿತ್ರಮಂದಿರ ಸಿಗದಿದ್ದರೆ ನಮ್ಮನ್ನು ಕೇಳಿ. ನಾವೇ ಚಿತ್ರಮಂದಿರ ಕೊಡಿಸುತ್ತೇವೆ’ ಎಂದರು.‘ಇಂಗ್ಲಿಷ್ ಜಾಹೀರಾತುಗಳು ಕನ್ನಡಕ್ಕೆ ಡಬ್ ಮಾಡಿದಾಗ ನೋಡುವ ಜನ, ಡಬ್ಬಿಂಗ್ ಸಿನಿಮಾ ಏಕೆ ವಿರೋಧಿಸುತ್ತೀರಿ’ ಎಂದು ಪ್ರಶ್ನಿಸಿದ ಅವರು, ‘ಬೇರೆ ಭಾಷೆಯ ಚಿತ್ರಗಳನ್ನು ತಂದು ತೋರಿಸಿ, ನಮ್ಮ ಮಕ್ಕಳು ಹಾಗೂ ಈ ಪೀಳಿಗೆ ಕನ್ನಡವನ್ನೇ ಮರೆಯುತ್ತಿದ್ದಾರೆ.

ಬೇರೆ ಭಾಷೆ ಸಿನಿಮಾ ಅರ್ಥ ಮಾಡಿಕೊಳ್ಳುವುದಕ್ಕಾಗಿ ಕನ್ನಡ ಮರೆತು, ಆ ಭಾಷೆ ಕಲಿಯಲು ಹೊರಟಿದ್ದಾರೆ. ಡಬ್ಬಿಂಗ್ ಮೂಲಕವಾದರೂ ನಮ್ಮ ಭಾಷೆ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.‘ಈಗಿರುವ ಸಿನಿಮಾ ಮಂದಿರಗಳ ಬಗ್ಗೆ ವೀಕ್ಷಕರಿಂದ ಆಕ್ಷೇಪಣೆಗಳಿವೆ. ಅದು ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ  ಚಿತ್ರಮಂದಿರದ ಮಾಲೀಕ
ರೊಂದಿಗೆ ಮಾತನಾಡಿದ್ದೇವೆ. ಕಾಲಕ್ಕೆ ತಕ್ಕಂತೆ ಚಿತ್ರಮಂದಿರಗಳನ್ನು ಉನ್ನತೀಕರಣಗೊಳಿಸಲಾಗುತ್ತದೆ. ಚಿತ್ರ ಪ್ರದರ್ಶನ ಮತ್ತು ಚಿತ್ರಮಂದಿರಗಳ ಕುರಿತು
ಜನರ ಅಪೇಕ್ಷೆಗಳು ಏನೇ ಇದ್ದರೂ  ಮಾಹಿತಿ ನೀಡಿ’ ಎಂದು ಮನವಿ ಮಾಡಿದರು.ಮಹಾಮಂಡಳದ ಉಪಾಧ್ಯಕ್ಷ ಎಂ.ಡಿ.ಜೋಷಿ, ಚಿತ್ರಮಂದಿರ ಮಾಲೀಕರಾದ ಶ್ಯಾಂಪ್ರಸಾದ್, ಕುಮಾರ್, ಗುಪ್ತಾ, ರಾಮ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.