ADVERTISEMENT

ಕಳಂಕಿತ ಸಚಿವರು, ಮುಖ್ಯಮಂತ್ರಿ ವಜಾಕ್ಕೆ ಆಗ್ರಹ

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 6:37 IST
Last Updated 7 ಜುಲೈ 2015, 6:37 IST

ಚಿತ್ರದುರ್ಗ:  ‘ಗಂಭೀರ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೂಡಲೇ ಅಧಿಕಾರದಿಂದ ಕೆಳಗಿಳಿಸಬೇಕು’ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈ ಸೇಷನ್ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ  ಸೇರಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಗರಣಗಳಲ್ಲಿ ಭಾಗಿಯಾದ ಭ್ರಷ್ಟ ಸಚಿವರನ್ನು ಸಂಪುಟದಿಂದ ಬಿಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎಐಡಿವೈಒ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ, ಬಹುಕೋಟಿ ಐಪಿಎಲ್‌ ಹಗರಣದ ರೂವಾರಿ ಲಲಿತ್‌ ಮೋದಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿ, ವಿದೇಶದಲ್ಲಿ ತಲೆಮರೆಸಿ ಕೊಂಡಿದ್ದಾರೆ. ಅವರಿಗೆ ವೀಸಾ ಪಡೆಯಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದಾರೆ.

ಅದೇ ಪ್ರಕರಣದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡ ಭಾಗಿಯಾಗಿದ್ದಾರೆ. ಮತ್ತೊಂದೆಡೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸುಳ್ಳು ಪ್ರಮಾಣ ಪತ್ರದ ಮೂಲಕ ಪದವಿ ಪಡೆದಿದ್ದಾರೆ. ಆದರೆ, ಈ ಕುರಿತು ಪ್ರಧಾನಿ ಮೋದಿ ಅವರು ಈ ಹಗರಣಗಳ ಬಗ್ಗೆ ಮೌನವಾಗಿರುವುದಕ್ಕೆ ಕಾರಣ ಏನೆಂಬುದನ್ನು ದೇಶದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿದೆ. ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟ ₹ 1.75 ಲಕ್ಷ ಕೋಟಿ ಹಣ ಕಡಿತಗೊಳಿಸಿ ಬಂಡವಾಳಗಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಅವುಗಳ ವಿರುದ್ಧ ಯುವಸಮೂಹ ಹೋರಾಟಕ್ಕೆ ಮುಂದಾಗಬೇಕು ಎಂದರು.

ಎಐಡಿವೈಒ ಜಿಲ್ಲಾ  ಘಟಕದ ಕಾರ್ಯದರ್ಶಿಗಳಾದ ವಿನಯ್, ಸುಜಾತಾ, ತ್ರಿವೇಣಿ, ಕಾವ್ಯಾ, ನಾಗರಾಜ್, ಗಿರೀಶ್, ಪೂವಮ್ಮ, ತಬ್ರೀನ್, ಶೋಯೆಬ್, ನಿಖಿಲ್, ವೆಂಕಟೇಶ್, ಮುಜಾಹಿದ್ದೀನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.