ADVERTISEMENT

ಕಾಲೇಜು ವಿದ್ಯಾರ್ಥಿಗಳ ಪರದಾಟ

ಚಳ್ಳಕೆರೆ: ರಸ್ತೆಯಲ್ಲಿ ಹರಡಿಕೊಂಡ ತ್ಯಾಜ್ಯ; ಬಾಗಿಲು ತೆರೆಯದ ಶೌಚಾಲಯ

ರಾಜಾ ಪರಶುರಾಮ ನಾಯಕ
Published 1 ಫೆಬ್ರುವರಿ 2017, 5:14 IST
Last Updated 1 ಫೆಬ್ರುವರಿ 2017, 5:14 IST
ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದ ಶ್ರೀರೇಣುಕಾದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣ ಗೋಡೆ ಪಕ್ಕದಲ್ಲಿ ಬಿದ್ದಿರುವ ತ್ಯಾಜ್ಯ.
ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದ ಶ್ರೀರೇಣುಕಾದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣ ಗೋಡೆ ಪಕ್ಕದಲ್ಲಿ ಬಿದ್ದಿರುವ ತ್ಯಾಜ್ಯ.   
ಚಳ್ಳಕೆರೆ: ಕಾಲೇಜಿನ ರಸ್ತೆಯ ತುಂಬಾ ಹರಡಿರುವ ತ್ಯಾಜ್ಯ, ಆವರಣ ಗೋಡೆಗೆ ಕಟ್ಟುವ ಜಾನುವಾರುಗಳು, ವಿದ್ಯಾರ್ಥಿಗಳು ಓಡಾಡುವ ದಾರಿಯಲ್ಲಿ ಸಗಣಿ, ಗಂಜಲದ ತಿಪ್ಪೆ; ಸದಾ ಮೂಗು ಮುಚ್ಚಿಕೊಂಡೇ ಓಡಾಡುವ ವಿದ್ಯಾರ್ಥಿಗಳು...
 
ತಾಲ್ಲೂಕಿನ ಹಿಂದುಳಿದ ಗಡಿ ಗ್ರಾಮ ರೇಣುಕಾಪುರದ ಶ್ರೀ ರೇಣುಕಾದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎದುರಿನ ರಸ್ತೆಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡದೇ  ಇರುವುದರಿಂದ ವಿದ್ಯಾರ್ಥಿಗಳು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. 
 
ಈ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯು ವಿಭಾಗದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 
 
‘ಸುತ್ತಲಿನ ಗ್ರಾಮಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ರಸ್ತೆಯ ತುಂಬ ಬಿದ್ದಿರುವ ತ್ಯಾಜ್ಯಗಳ ನಡುವೆ ಓಡಾಡಬೇಕಾಗಿದೆ. ಕಾಲೇಜಿಗೆ ತೆರಳುವ ರಸ್ತೆಯೂ ಅತ್ಯಂತ ಕಿರಿದಾಗಿದೆ. ಈ ರಸ್ತೆ ಮೇಲೆಯೇ ಕಸ ಎಸೆಯಲಾಗುತ್ತಿದೆ. ತ್ಯಾಜ್ಯ ಮೆಟ್ಟಿಕೊಂಡೇ ಕಾಲೇಜಿಗೆ ಹೋಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದಾಗಿದೆ’ ಎಂದು ಹೇಳುತ್ತಾರೆ ಗ್ರಾಮದ ಮಂಜುನಾಥ್‌.
 
ಕಾಲೇಜಿನಲ್ಲಿ ವ್ಯಾಸಂಗ ಮಾಡುವ ನೂರಾರು ವಿದ್ಯಾರ್ಥಿಗಳ ಅನು ಕೂಲಕ್ಕಾಗಿ ಶೌಚಾಲಯ ನಿರ್ಮಿಸ ಲಾಗಿದೆ. ಆದರೆ, ಇದರ ಪಕ್ಕದಲ್ಲಿಯೇ ಕಸ, ತ್ಯಾಜ್ಯ ಮತ್ತು ಸಗಣಿ ಹಾಕುತ್ತಿರುವುದರಿಂದ ಶೌಚಾಲಯದ ಬಾಗಿಲನ್ನೂ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯಕ್ಕೂ ತೆರಳಲಾಗದೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಅಳಲು ತೋಡಿಕೊಳ್ಳುತ್ತಾರೆ. 
 
ಕಾಲೇಜಿನ ಆವರಣ ಗೋಡೆಯ ಪಕ್ಕದಲ್ಲಿಯೇ ಜಾನುವಾರುಗಳನ್ನು ಸ್ಥಳೀಯರು ಕಟ್ಟುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿ ಕಟ್ಟುವ ಜಾನುವಾರುಗಳಿಗೆ ನೀಡುವ ಮೇವು ರಸ್ತೆಯ ಮೇಲೆ ಹರಡಿಕೊಂಡಿರುತ್ತದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ. ದನ–ಕರುಗಳ ಸಗಣಿ ಮತ್ತು ಗಂಜಲ ರಸ್ತೆಯಲ್ಲಿ ಹರಡಿಕೊಂಡಿರುವುದರಿಂದ ಕಾಲೇಜಿನ ವಾತಾವರಣ ಅಸಹ್ಯ ಹುಟ್ಟಿಸುವಂತಿದೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದರೂ ಯಾವುದೇ ಉಪಯೋಗ ವಾಗಿಲ್ಲ ಎಂದುಅಸಮಾಧಾನ ವ್ಯಕ್ತಪಡಿಸುತ್ತಾರೆ. 
 
 ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 
 
**
ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಅಗತ್ಯ ಕ್ರಮ ಕೈಗೊಂಡು, ಸಮಸ್ಯೆ ನಿವಾರಿಸಲಾಗುವುದು.
– ತಿಪ್ಪೇಸ್ವಾಮಿ
ಗ್ರಾಮ ಪಂಚಾಯ್ತಿ ಸದಸ್ಯ, ರೇಣುಕಾಪುರ 
 
**
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಸಮಸ್ಯೆ ಬಗ್ಗೆ ಗ್ರಾಮ ಪಂಚಾಯ್ತಿಗೆ ತಿಳಿಸಲಾಗಿದೆ. ಅಧಿಕಾ ರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
– ನಾಗಲಿಂಗಪ್ಪ, ಪ್ರಾಂಶುಪಾಲರು,
ರೇಣುಕಾದೇವಿ ಪದವಿ ಪೂರ್ವ ಕಾಲೇಜು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.