ADVERTISEMENT

ಕೋಟೆ ಬಡಾವಣೆ ಮನೆಯೊಳಗೆ ನುಗ್ಗಿದ ಕೊಳಚೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 8:56 IST
Last Updated 10 ಸೆಪ್ಟೆಂಬರ್ 2017, 8:56 IST

ಹೊಸದುರ್ಗ: ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಕೋಟೆ ಬಡಾವಣೆಯ ಶ್ರೀರಾಮದೇವರ ಬೀದಿ ಹಾಗೂ ಬೇವಿನ ಮರದಕಟ್ಟೆ ಬೀದಿಯ ಮನೆಗಳ ಒಳಗೆ ಕೊಳಚೆ ನೀರು ನುಗ್ಗಿದೆ. ಈ ಹಿಂದೆ ಎಷ್ಟೇ ಮಳೆ ಬಂದರೂ ಮನೆಯೊಳಗೆ ನೀರು ಬರುತ್ತಿರಲಿಲ್ಲ. ಎರಡು ವರ್ಷದ ಹಿಂದೆ ಪುರಸಭೆಯವರು ಇಲ್ಲಿನ ಐತಿಹಾಸಿಕ ಭೈರಪ್ಪನ ಬೆಟ್ಟಕ್ಕೆ ಮೆಟ್ಟಿಲು ಹಾಕಿಸಲು ಜೆಸಿಬಿಯಿಂದ ಗುಡ್ಡ ಅಗೆದಿದ್ದಾರೆ.

ಗುಡ್ಡದಲ್ಲಿರುವ ಮಣ್ಣು ಸಡಿಲಗೊಂಡಿದ್ದು ಬಿರುಸಿನ ಮಳೆ ಬಂದ ತಕ್ಷಣ ಮಣ್ಣು ತಗ್ಗಿಗೆ ಹರಿದು ಬರುತ್ತದೆ. ಆಗ ಚರಂಡಿಗಳು ಕಟ್ಟಿಕೊಂಡು ಮಣ್ಣು ಸಮೇತ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ.

ಶುಕ್ರವಾರ ರಾತ್ರಿ ಬಂದ ನೀರಿಗೆ ಮನೆಯಲ್ಲಿದ್ದ ರಾಗಿ, ಅಕ್ಕಿ ಸೇರಿದಂತೆ ಇನ್ನಿತರ ಸಾಮಾನುಗಳು ನೆಂದು ಹೋಗಿವೆ. ತಿನ್ನಲು ಏನು ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ಗೃಹಿಣಿ ಲಲಿತಮ್ಮ.

ADVERTISEMENT

ಬೆಟ್ಟದ ಮೇಲಿನ ಮಣ್ಣು ಕೊಚ್ಚಿಕೊಂಡು ಬಂದಿರುವುದರಿಂದ ಇಲ್ಲಿನ ರಸ್ತೆಗಳು ಕೆಸರು ಗದ್ದೆಯಂತೆ ಆಗಿವೆ. ನೀರು ಸಂಗ್ರಹಕ್ಕೆ ನಿರ್ಮಿಸಿಕೊಂಡಿರುವ ನೆಲದ ತೊಟ್ಟಿ ತುಂಬಾ ಮಣ್ಣು ತೊಂಬಿಕೊಂಡಿದೆ. ಕೊಳಚೆ ಗಬ್ಬುನಾರುತ್ತಿದೆ. ದುರಸ್ತಿ ಆಗದಿರುವ ರಸ್ತೆಯಲ್ಲಿ ಸಾಕಷ್ಟು ಕೊರಕಲು ಬಿದ್ದಿದೆ. ಜನರು ತಿರುಗಾಡಲಿಕ್ಕೆ ತೀವ್ರ ತೊಂದರೆ ಆಗುತ್ತಿದೆ.

ಬೇಗ ಬಂದು ರಸ್ತೆ ಮೇಲಿನ ಮಣ್ಣು ತೆಗೆಯಿರಿ ಎಂದು ಪುರಸಭೆಗೆ ರಾತ್ರಿಯಿಂದ ಮನವಿ ಮಾಡಿದರೂ ಸಕಾಲಕ್ಕೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಗೃಹಿಣಿಯರಾದ ಸರೋಜಮ್ಮ, ಲತಮ್ಮ ಗುಡ್ಡದಲ್ಲಿ ಸಡಿಲಗೊಂಡಿರುವ ಕಲ್ಲುಗಳು ಬಿರುಸಿನ ಮಳೆಗೆ ಎಲ್ಲಿ ಮನೆಗಳ ಮೇಲೆ ಉರುಳುತ್ತವೆಯೋ ಎಂಬ ಭೀತಿ ಕಾಡುತ್ತಿದೆ.

ದೊಡ್ಡ ಅವಘಡ ಸಂಭವಿಸುವ ಮೊದಲು ಭೈರಪ್ಪನ ಬೆಟ್ಟಕ್ಕೆ ಮೆಟ್ಟಿಲು ಹಾಕಿಸುವ ಕಾಮಗಾರಿ ತತ್ವರಿತವಾಗಿ ಪೂರ್ಣಗೊಳಿಸಿ ಎಂದು ಹಲವು ಬಾರಿ ಪುರಸಭೆಗೆ ಮನವಿ ಮಾಡಿದರೂ, ಕ್ರಮ ಕೈಗೊಂಡಿಲ್ಲ. ಇನ್ನಾದರೂ ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿ ತಮ್ಮ ಹಿತ ಕಾಪಾಡಬೇಕು ಎಂಬುದು ಕೋಟೆ ಬಡಾವಣೆ ನಿವಾಸಿಗಳ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.