ADVERTISEMENT

ಗರಿಗೆದರಿದ ಕೃಷಿ ಚಟುವಟಿಕೆ

ಚಿಕ್ಕಜಾಜೂರು: ಹಲವೆಡೆ ಉತ್ತಮ ಮಳೆ, ರೈತರಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 14 ಮೇ 2018, 12:27 IST
Last Updated 14 ಮೇ 2018, 12:27 IST
ಚಿಕ್ಕಜಾಜೂರಿನ ಜಮೀನೊಂದರಲ್ಲಿ ಭಾನುವಾರ ಉಳುಮೆ ಮಾಡುತ್ತಿರುವುದು
ಚಿಕ್ಕಜಾಜೂರಿನ ಜಮೀನೊಂದರಲ್ಲಿ ಭಾನುವಾರ ಉಳುಮೆ ಮಾಡುತ್ತಿರುವುದು   

ಚಿಕ್ಕಜಾಜೂರು: ಮಳೆ ಸುರಿಯುತ್ತಿರುವುದರಿಂದ ರೈತರಲ್ಲಿ ಹರ್ಷ ಮನೆ ಮಾಡಿದೆ. ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ.

ಗುರುವಾರ ರಾತ್ರಿ ಸುರಿದ ಉತ್ತಮ ಮಳೆಯಿಂದಾಗಿ ಬಹುತೇಕ ಜಮೀನು ಹದವಾಗಿವೆ. ಆದರೆ ಚುನಾವಣೆ ಇದ್ದ ಕಾರಣ ರೈತರು ಜಮೀನಿಗೆ ಇಳಿದಿರಲಿಲ್ಲ. ಶನಿವಾರ ಮತದಾನ ಮುಗಿದಿದೆ. ಹಾಗಾಗಿ ಭಾನುವಾರ ಬೆಳಿಗ್ಗೆಯೇ ರೈತರು ಕೃಷಿಗೆ ಮುಂದಾಗಿದ್ದಾರೆ. ಕೆಲ ರೈತರು ಟ್ರ್ಯಾಕ್ಟರ್‌ಗಳ ಮೂಲಕ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ.

ಮುಂಗಾರು ಬಿತ್ತನೆಗೆ ಸಿದ್ಧತೆ: ‘ಸೆಪ್ಟಂಬರ್‌ನಿಂದ ಮಳೆ ಇಲ್ಲದ ಕಾರಣ ಜಮೀನುಗಳು ಒಣಗಿದ್ದವು. ಈಗ ಹದವಾದ ಮಳೆಯಾಗಿದೆ. ಈಗ ಹಸನು ಮಾಡಿಕೊಳ್ಳದಿದ್ದರೆ, ಜೋರು ಮಳೆಯಾದ ಬಳಿಕ ಹಸನು ಮಾಡುವುದು ಕಷ್ಟವಾಗುತ್ತದೆ.
ಮತ್ತೆ ಮಳೆ ಬಂದರೆ ಜಮೀನುಗಳನ್ನು ಹಸನು ಮಾಡಿಕೊಳ್ಳಲು ಬರುವುದಿಲ್ಲ. ಈಗ ಒಮ್ಮೆ ಬಲರಾಮ ನೇಗಿಲನ್ನು ಹೊಡೆಸಿದರೆ, ಮತ್ತೆ ಮಳೆ ಬಂದಾಗ ಭೂಮಿ ನೀರನ್ನು ಹೀರಿಕೊಳ್ಳುತ್ತದೆ. ಮಳೆ ಬಿಡುವು ನೀಡಿರುವ ಈ ಸಮಯದಲ್ಲಿ ಉಳುಮೆ ಮಾಡಿಸುತ್ತಿದ್ದೇವೆ’ ಎಂದು ರೈತ ಚಿಕ್ಕಪ್ಪ ತಿಳಿಸಿದರು.

ADVERTISEMENT

ಮತ್ತೆ ಮಳೆ: ಭಾನುವಾರ ಮಧ್ಯಾಹ್ನ 3.45ರಿಂದ 4 ಗಂಟೆಯವರೆಗೆ ಪಟ್ಟಣದಲ್ಲಿ ಸಾಧಾರಣ ಮಳೆಯಾಯಿತು. ಚರಂಡಿಗಳಲ್ಲಿ ನೀರು ತುಂಬಿ ಹರಿದವು. ಸಮೀಪದ ಆಡನೂರು, ಪಾಡಿಗಟ್ಟೆ, ಅಪ್ಪರಸನಹಳ್ಳಿ, ಬಾಣಗೆರೆ, ಕೋಟೆಹಾಳ್‌ ಮೊದಲಾದ ಕಡೆಗಳಲ್ಲಿ ಸುಮಾರು ಅರ್ಧ ಗಂಟೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.