ADVERTISEMENT

ಗೋಶಾಲೆಗಳಿಗೆ ಗುಣಮಟ್ಟದ ಮೇವು: ಸುಧಾಕರ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 5:23 IST
Last Updated 13 ಮಾರ್ಚ್ 2017, 5:23 IST

ಹಿರಿಯೂರು: ತಾಲ್ಲೂಕಿನ ಉಡುವಳ್ಳಿ, ಕತ್ತೆಹೊಳೆ, ಕರಿಯಾಲ, ಮೇಟಿಕುರ್ಕೆ ಮೊದಲಾದ   ಭಾಗಗಳಲ್ಲಿರುವ ಕೆರೆಗಳಲ್ಲಿ ಬಿತ್ತನೆ ಮಾಡಿರುವ ಮೇವು ಬೆಳೆ  ಕಟಾವು ಮಾಡುವ ಹಂತಕ್ಕೆ ಬಂದಿದೆ ಎಂದು ಶಾಸಕ ಡಿ. ಸುಧಾಕರ್ ಹೇಳಿದರು.

ಭಾನುವಾರ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಅವರೊಂದಿಗೆ ಉಡುವಳ್ಳಿ ಕೆರೆ ಅಂಗಳದಲ್ಲಿ ಬೆಳೆದು ನಿಂತಿರುವ ಮೇವು ಬೆಳೆಯನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.

‘ತಾಲ್ಲೂಕಿನ ಗೊಲ್ಲಹಳ್ಳಿ, ವದ್ದೀಗೆರೆ, ಕರಿಯಾಲ ಹಾಗೂ ಕೃಷಿ ಮಾರುಕಟ್ಟೆ ಆವರಣದಲ್ಲಿ  ನಾಲ್ಕು ಗೋಶಾಲೆಗಳನ್ನು ಆರಂಭಿಸಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಭತ್ತ ಅಥವಾ ಮೆಕ್ಕೆ ಜೋಳದ ಸಪ್ಪೆಯೂ ಸಿಗುತ್ತಿಲ್ಲ. ಸದ್ಯಕ್ಕೆ ಆಂಧ್ರಪ್ರದೇಶದಿಂದ ಮೇವು ತರಲಾಗುತ್ತಿದೆ. ಅಲ್ಲಿನ ಮೇವು ಗುಣಮಟ್ಟದಿಂದ ಕೂಡಿಲ್ಲ ಎಂದು ರೈತರು ದೂರುತ್ತಿದ್ದಾರೆ. ನಾವು ಅನ್ಯ ಮಾರ್ಗವಿಲ್ಲದೆ ಅದೇ ಮೇವನ್ನು ಬಳಸುತ್ತಿದ್ದೇವೆ. ಕೆರೆ ಅಂಗಳಗಳಲ್ಲಿ ಬಿತ್ತನೆ ಮಾಡಿರುವ ಮೇವು ಹದಿನೈದು ದಿನಗಳಲ್ಲಿ ಕಟಾವಿಗೆ ಬರಲಿದೆ’ ಎಂದರು.

ಶಾಸಕ ರಘುಮೂರ್ತಿ, ‘ಇದೊಂದು ಅನುಸರಣನೀಯ ಪ್ರಯೋಗ. ಸ್ವಂತ ಖರ್ಚಿನಲ್ಲಿ ಯಾರೂ ಮೇವು ಬೆಳೆ ಬೆಳೆದಿದ್ದು ಕೇಳಿರಲಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಚಾರ ತಂದು ರಾಜ್ಯದಾದ್ಯಂತ ಈ ಯೋಜನೆ ವಿಸ್ತರಿಸಲು ಮನವಿ ಮಾಡೋಣ’ ಎಂದರು.

ಜಿಲ್ಲಾ ಪಂಚಾಯ್ತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗೇಂದ್ರನಾಯ್ಕ,  ಅಬ್ದುಲ್ ರೆಹಮಾನ್, ಮಹಾಲಿಂಗಪ್ಪ, ನಿಂಗಣ್ಣ, ಕುಮಾರ್, ರಾಜಣ್ಣ, ಪೂಜಣ್ಣ, ಬಿ.ಎನ್.ಪ್ರಕಾಶ್, ಅಶೋಕ್ ಬಾಬು, ಶ್ರೀನಿವಾಸ್, ವಿಶ್ವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.