ADVERTISEMENT

ಗ್ರಾ.ಪಂ. ಉಪಾಧ್ಯಕ್ಷರ ಅಮಾನತಿಗೆ ಆಗ್ರಹ

ಯರಬಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 9:24 IST
Last Updated 27 ಜುಲೈ 2016, 9:24 IST

ಚಿತ್ರದುರ್ಗ: ‘ಅಧ್ಯಕ್ಷರಿಗೆ ಮನ್ನಣೆ ನೀಡದೆ, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಕೆ.ಜಗದೀಶ್ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ, ಸದಸ್ಯತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿ ಯರಬಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಸೋಮವಾರ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿ.ಪಂ ಸಿಇಒ ಅವರಿಗೆ ಮನವಿ ಸಲ್ಲಿಸಿದರು.

ಯರಬಳ್ಳಿಯಿಂದ ಆಗಮಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮಸ್ಥರು ಜಿಲ್ಲಾ ಪಂಚಾಯ್ತಿ ಬಳಿ ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಪ್ರತಿಭಟ ನಾಕಾರರು ‘ಉಪಾಧ್ಯಕ್ಷ ಜಗದೀಶ್ ಅಧ್ಯಕ್ಷರನ್ನು  ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅಧ್ಯಕ್ಷರೂ ಸೇರಿದಂತೆ 15 ಮಂದಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷಿಯಾಗಿ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘2015–16ನೇ ಸಾಲಿನ ನರೇಗಾ ಕಾಮಗಾರಿಗಳನ್ನು ಒಬ್ಬನೇ ಗುತ್ತಿಗೆದಾರನಿಗೆ ಕೆಲಸ ವಹಿಸಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯರು ಇವರ ವರ್ತನೆ, ದೌರ್ಜನ್ಯ, ದಬ್ಬಾಳಿಕೆಯಿಂದ ಬೇಸತ್ತಿದ್ದಾರೆ’ ಎಂದು ದೂರಿದರು.

‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸೌಭಾಗ್ಯ ಬಸವರಾಜನ್, ಆರ್‌ಡಿಪಿಆರ್ ಸಚಿವ ಎಚ್‌.ಕೆ.ಪಾಟೀಲ್ ಮತ್ತು ಅವರ ಆಪ್ತ ಕಾರ್ಯದರ್ಶಿ ಭುವನಹಳ್ಳಿ ನಾಗರಾಜ್ ಅವರ ಹೆಸರು ಹೇಳಿಕೊಂಡು ಎಲ್ಲರನ್ನೂ ಹೆದರಿಸುತ್ತಾರೆ. ಇವರ ವರ್ತನೆಗಳ ಬಗ್ಗೆ ಹಲವು ಬಾರಿ ದೂರು ನೀಡಿದ್ದೇವೆ. ದಯವಿಟ್ಟು ಈ ನಮ್ಮ ಮನವಿ ಪರಿಗಣಿಸಿ, ಜಗದೀಶ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಅಧ್ಯಕ್ಷ ಎಸ್‌.ಗುರುಸಿದ್ದಪ್ಪ, ನೀಲಮ್ಮ, ಲಿಂಗಣ್ಣ, ಟಿ.ಎಸ್ ಮಲ್ಲಮ್ಮ, ಜಿ.ಸಿ.ರಂಗಮ್ಮ, ಯಶೋಧಮ್ಮ, ವನಜಾಕ್ಷಮ್ಮ ಸೇರಿದಂತೆ ಹಲವು ಮಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.