ADVERTISEMENT

ಚಿಕ್ಕಜಾಜೂರು: ವೈಕುಂಠ ಮಹಾದ್ವಾರ ದರ್ಶನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 8:29 IST
Last Updated 30 ಡಿಸೆಂಬರ್ 2017, 8:29 IST

ಚಿಕ್ಕಜಾಜೂರು: ವೈಕುಂಠ ಏಕಾದಶಿ ಅಂಗವಾಗಿ ಸಹಸ್ರಾರು ಭಕ್ತರು ವೈಕುಂಠ ಮಹಾದ್ವಾರದ ದರ್ಶನ ಪಡೆದರು. ಪ್ರತಿ ವರ್ಷ ಧನುರ್ಮಾಸದ ಏಕಾದಶಿಯಂದು ವೈಕುಂಠ ದರ್ಶನ ನಡೆಯುತ್ತದೆ. ಇದಕ್ಕಾಗಿ ಶ್ರೀಮನ್ನಾರಾಯಣನ ಅವತಾರಗಳ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ಹಾಗೂ ಪ್ರಸಾದ ವಿತರಣೆಯನ್ನು ದೇವಸ್ಥಾನ ಸಮಿತಿಗಳು ಏರ್ಪಡಿಸಿರುತ್ತವೆ ಎಂದು ಪ್ರಧಾನ ಅರ್ಚಕ ಸಂಪತ್‌ ಕುಮಾರ್ ತಿಳಿಸಿದರು.

ಸರತಿ ಸಾಲಲ್ಲಿ ವೈಕುಂಠ ದ್ವಾರ ಪ್ರವೇಶ: ಶುಕ್ರವಾರ ಮುಂಜಾನೆ 5ಕ್ಕೆ ಗ್ರಾಮದ ವಿವಿಧ ದೇವಾಲಗಳಲ್ಲಿ ನಡೆಯುವ ಧನುರ್ಮಾಸ ಪೂಜೆಗೆ ಬಂದ ಭಕ್ತರು, ರಾಮಕೃಷ್ಣ ದೇವಸ್ಥಾನದಲ್ಲಿ ನಡೆದ ಮಹಾ ಮಂಗಳಾರತಿಯಲ್ಲಿ ಪಾಲ್ಗೊಂಡರು. ಬಳಿಕ ದೇವಸ್ಥಾನದ ಆವರಣದಲ್ಲಿ ಉತ್ತರ ದಿಕ್ಕಿನಲ್ಲಿ ನಿರ್ಮಿಸಿದ್ದ ವೈಕುಂಠ ಮಹಾ ದ್ವಾರದ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಿದ್ದ ಪಂಚ ಲೋಹದಿಂದ ತಯಾರಿಸಿದ ಶ್ರೀಮನ್ನಾರಾಯಣನ ಮೂರ್ತಿಗೆ ನಮಸ್ಕರಿಸಿ, ಮಹಾದ್ವಾರದ ಮೂಲಕ ಸಹಸ್ರಾರು ಭಕ್ತರು ವೈಕುಂಠ ದ್ವಾರವನ್ನು ಪ್ರವೇಶಿಸಿದರು. ದೇವಸ್ಥಾನದಿಂದ ತಿರುಪತಿ ಲಾಡು ವಿತರಿಸಲಾಯಿತು.

ಆಂಜನೇಯ ದೇವಸ್ಥಾನದಲ್ಲೂ ವಶೇಷ ಪೂಜೆ: ಗ್ರಾಮ ದೇವರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ಸ್ವಾಮಿಗೆ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ನಡೆಸಲಾಯಿತು. ಬನಶಂಕರಿ ಅಮ್ಮನವರ ಹಾಗೂ ರಾಮ ಕೃಷ್ಣ ದೇವಸ್ಥಾನಗಳಿಂದ ಬಂದ ಭಕ್ತರು ಗ್ರಾಮ ದೇವರ ಪೂಜೆಯಲ್ಲಿ ಪಾಲ್ಗೊಂಡರು.

ADVERTISEMENT

ಮುಕ್ಕೋಟಿ ದ್ವಾದಶಿ ವಿಶೇಷ ಪೂಜೆ: ಶನಿವಾರ ಮುಕ್ಕೋಟಿ ದ್ವಾದಶಿ ಪ್ರಯುಕ್ತ ರಾಮಕೃಷ್ಣ ದೇವಾಲಯ ಮತ್ತು ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಮುಂಜಾನೆ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.