ADVERTISEMENT

ಚೆಂದದ ಉದ್ಯಾನಕ್ಕೆ ‘ಟಾರ್ಗೆಟ್ ಟೆನ್ ಥೌಸೆಂಡ್ ತಂಡ’ ಪಣ

ಉದ್ಯಾನದ ಸೌಂದರ್ಯ ಹೆಚ್ಚಿಸಲು ಮುಂದಾದ ಯುವಕರ ತಂಡ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 8:15 IST
Last Updated 23 ಏಪ್ರಿಲ್ 2018, 8:15 IST

ಚಿತ್ರದುರ್ಗ: ನಗರದ ಹೃದಯ ಭಾಗದಲ್ಲಿರುವ ಧೀರ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹೆಸರಿನ ಉದ್ಯಾನ ಸ್ಚಚ್ಛಗೊಳಿಸಿ, ಗಿಡಗಳನ್ನು ನೆಟ್ಟು, ಸುಣ್ಣ ಬಣ್ಣ ಬಳಿದು ಉದ್ಯಾನಕ್ಕೆ ಹೊಸ ಪೋಷಾಕು ನೀಡಲು ಮುಂದಾಗಿದ್ದಾರೆ ‘ಟಾರ್ಗೆಟ್ ಟೆನ್ ಥೌಸೆಂಡ್’ ತಂಡದ ಸದಸ್ಯರು.

ಇದೇ ತಂಡದ ಸದಸ್ಯರು ಕಳೆದ ವರ್ಷ ಇಲ್ಲಿನ ವಿವಿಧ ಬಡಾವಣೆಗಳಲ್ಲಿ ಅನೇಕ ಸಸಿಗಳನ್ನು ನೆಡುವ ಮೂಲಕ ನಾಗರಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಮುಂದಾಗಿದ್ದರು. ಈ ಬಾರಿ ಯುವಕರು ಉದ್ಯಾನಗಳ ಸೌಂದರ್ಯ ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ.

‘ಈ ಉದ್ಯಾನವೂ ಸೌಂದರ್ಯಯುತ ಹಾಗೂ ಆಕರ್ಷಣೆಯಾಗುವಂತೆ ಮಾಡಲು ಯುವಕರು ಪಣ ತೊಟ್ಟಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ ಕಳೆದ ಎರಡು ತಿಂಗಳಿಂದ ಉದ್ಯಾನವನ ಅಭಿವೃದ್ಧಿಗೊಳಿಸಲು ಮುಂದಾಗಿದ್ದೇವೆ. ಮೊದಲು ಪಾರ್ಕ್‌ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಕಸದ ರಾಶಿಯನ್ನು ಹೊರಹಾಕಲಾಯಿತು. ನೂರಾರು ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಕೆಲಸಕ್ಕೆ ಮುಂದಾಗಿದ್ದೇವೆ’ ಎನ್ನುತ್ತಾರೆ ತಂಡದ ಸದಸ್ಯರಾದ ಗಂಗಾಧರ್, ಹರೀಶ್.

ADVERTISEMENT

ವಿವಿಧ ರೀತಿಯ ಸಸ್ಯಗಳು:  ಉದ್ಯಾನ ಒಳಭಾಗದ ಪಾದಚಾರಿ ಮಾರ್ಗದ ಕಟ್ಟಿನ ಸುತ್ತಲೂ ವಿವಿಧ ಬಗೆಯ ಸಸ್ಯಗಳನ್ನು ನೆಡಲಾಗಿದೆ. ಅತ್ತಿ ಹಣ್ಣಿನ ಗಿಡ, ನೇರಳೆ, ಹೊಂಗೆ, ಅರಳಿ ಗಿಡ ಸೇರಿದಂತೆ ವಿವಿಧ ರೀತಿಯ ಅಲಂಕಾರಿಕ ಗಿಡಗಳನ್ನು ನೆಟ್ಟಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ಸದಸ್ಯ ಸುನೀಲ್ ಲಾಡ್.

ಹನಿ ನೀರಾವರಿ ಮೂಲಕ ನೀರು ಪೂರೈಕೆ ಯೋಜನೆ: ‘ಉದ್ಯಾನ ದೊಳಗಿನ ಮೂಲೆಗಳಲ್ಲಿ ಸಿಂಟೆಕ್ಸ್ ಅಳವಡಿಸಿ ಆ ಮೂಲಕ ಪ್ರತಿಯೊಂದು ಗಿಡಕ್ಕೂ ಹನಿ ನೀರಾವರಿ ಪದ್ಧತಿ ವ್ಯವಸ್ಥೆ ಮೂಲಕ ನೀರುಣಿಸುವ ಯೋಜನೆ ಹಾಕಿಕೊಂಡಿದ್ದೇವೆ. ಪಾರ್ಕ್‌ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಬಯಕೆ’ ಎನ್ನುತ್ತಾರೆ ತಂಡದ ಸದಸ್ಯರಾದ ಮೋಹನ್, ಸಂತೋಷ್, ಸತೀಶ್.

ಆವರಣ ಗೋಡೆಗೆ ಬಣ್ಣ:  ಉದ್ಯಾನ ಹಿಂಭಾಗದ ಗೋಡೆಗೆ ಸುಣ್ಣ ಬಳಿಯಲಾಗಿದ್ದು, ಹೊಸ ರೂಪ ನೀಡಲಾಗಿದೆ. ಜತೆಗೆ ಒಳಭಾಗದಲ್ಲಿರುವ ಪಾದಚಾರಿ ಮಾರ್ಗದ ಕಟ್ಟೆಗೆ ಹಸಿರು ಬಣ್ಣ ಬಳಿದು ಸಾರ್ವಜನಿಕ ಆಸ್ತಿಯಾದ ಪಾರ್ಕ್‌ ಅನ್ನು ಆಕರ್ಷಣೀಯವಾಗಿ ಮಾಡುವಲ್ಲಿ ತಂಡದವರು ಶ್ರಮಿಸುತ್ತಿದ್ದಾರೆ.

‘ಉದ್ಯಾನ ಪೋಷಣೆಯೇ ನಮ್ಮ ಗುರಿ’

‘ಕಳೆದ ವರ್ಷ ‘ಟಾರ್ಗೆಟ್ ಟೆನ್ ಥೌಸೆಂಡ್‌’ ಅಭಿಯಾನ ಕೈಗೊಂಡು ನಗರದಾದ್ಯಂತ 10 ಸಾವಿರ ಸಸಿಗಳನ್ನು ನೆಡಲಾಯಿತು. ಅದರಲ್ಲಿ 8 ಸಾವಿರ ಸಸಿಗಳು ಜೀವಂತವಾಗಿದ್ದು, ಅವುಗಳನ್ನು ಪೋಷಿಸಲಾಗುತ್ತಿದೆ. ಈ ಬಾರಿ ಉದ್ಯಾನಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಂಡದ ಸದಸ್ಯರು ತೀರ್ಮಾನಿಸಿದ್ದೇವೆ. ಮೊದಲನೆಯದಾಗಿ ಭಗತ್‌ ಸಿಂಗ್ ಪಾರ್ಕ್ ಆಯ್ಕೆ ಮಾಡಿಕೊಂಡಿದ್ದು, ಗಿಡಗಳನ್ನು ನೆಟ್ಟು, ಬಣ್ಣ ಬಳಿಯಲಾಗುತ್ತಿದೆ’ ಎನ್ನುತ್ತಾರೆ ತಂಡದ ಮುಖ್ಯಸ್ಥ ಸಿದ್ದರಾಜು ಜೋಗಿ.

– ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.