ADVERTISEMENT

ಜನಪದ ಕಲಾ ಚಟುವಟಿಕೆಗೆ ಅನುದಾನ ಹೆಚ್ಚಿಸಿ: ತಿಪ್ಪಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 21 ಮೇ 2017, 5:41 IST
Last Updated 21 ಮೇ 2017, 5:41 IST

ಚಿತ್ರದುರ್ಗ: ಜನಪದ ಕಲೆಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು. ಇಂಥ ಕಲಾಸೇವೆಯಲ್ಲಿ ಜಾನಪದ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.

ನಗರದ ಮಠದ ಕುರುಬರಹಟ್ಟಿಯಲ್ಲಿ ಶನಿವಾರ ರೇಣುಕಾದೇವಿ ಸೋಬಾನೆ ಕಲಾವಿದರ ಮಹಿಳಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಜನಪದ ಕಲಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗಳಲ್ಲಿರುವ ಜನಪದ ಕಲಾವಿದರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕಲೆ ಸಾಹಿತ್ಯ ಸಂಸ್ಕೃತಿ ಪ್ರೋತ್ಸಾಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದ್ದರೂ ಅದು ಗ್ರಾಮೀಣ ಭಾಗದ ನೈಜ ಕಲಾವಿದರನ್ನು ಗುರುತಿಸಿ ಅವಕಾಶ ಮತ್ತು ಅನುದಾನ ನೀಡುವಲ್ಲಿ ನಿರ್ಲ್ಯಕ್ಷ ವಹಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಇತ್ತೀಚೆಗೆ ಈ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಕಲಾವಿದರಲ್ಲದವರು ಸಹ ಕಲಾವಿದರ ಹೆಸರು ಹೇಳಿ­ಕೊಂಡು ಅನುದಾನ ಪಡೆದಿರುವ ಉದಾಹರಣೆಗಳು ನಮ್ಮ ಜಿಲ್ಲೆಯಲ್ಲಿ ನಡೆದಿವೆ. ಇಂಥವುಗಳಿಗೆ ಕಡಿವಾಣ ಹಾಕಬೇಕು. ಕಲಾವಿದರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡರೆ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಹರಿಸಲು ಮತ್ತು ಕಲಾವಿದರಿಗೆ ಸಹಾಯ ಮಾಡಲು ಸಿದ್ಧವಿದ್ದೇನೆ’ ಎಂದರು.

ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ‘ಹಳ್ಳಿಯ ಮಹಿಳೆಯರು ದಣಿವಾರಿಸಿಕೊಳ್ಳಲು ಜನಪದ ಗೀತೆಗಳನ್ನು ಹಾಡುತ್ತಿದ್ದರು. ಅಂಥವರಿಂದ ರೂಪುಗೊಂಡ ಜನಪದ ಸಾಹಿತ್ಯ ಮತ್ತು ಗೀತೆಗಳಿಗೆ ಕೊನೆ ಎಂಬುದಿಲ್ಲ’ ಎಂದರು.

ದೃಶ್ಯ ಮಾಧ್ಯಮಗಳು ಇಂಥ ಕಲೆ ಮತ್ತು ಕಲಾವಿದರಿಗೆ ಹೆಚ್ಚು ಪ್ರಚಾರ ನೀಡುತ್ತಿಲ್ಲ. ಬೇರೆಯವರ ಅನುಕರಣೆ ಮಾಡುವಂತಹ ಕಲಾವಿದರಿಗೆ ಹೆಚ್ಚು ಮನ್ನಣೆ, ಪ್ರಚಾರ ನೀಡಲಾಗುತ್ತಿದೆ. ಇದು ಪರಿವರ್ತನೆ ಆಗಬೇಕಿದೆ. ಜನಪದ ನೈಜ ಕಲೆ.  

ಹಲವಾರು ತಲೆಮಾರುಗಳು ಗತಿಸಿದರೂ ಅದನ್ನು ಪ್ರೀತಿಸುವ ಆಸ್ವಾದಿಸುವ ಮನಸ್ಸುಗಳಿಗೆ ಕೊರತೆಯಾಗಿಲ್ಲ. ಅದರಲ್ಲೂ ಸೋಬಾನೆ ಪದಗಳಂತೂ ಎಲ್ಲಾ ಕಾಲದಲ್ಲಿ ಗಟ್ಟಿತನ ಉಳಿಸಿಕೊಂಡಿವೆ. ಮುಂದಿನ ಪೀಳಿಗೆಗೆ ಈ ಹಾಡುಗಳನ್ನು ಪರಿಚಯಿಸುವ ಕಾರ್ಯ ಆಗಬೇಕಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ವಿಮುಕ್ತಿ ವಿದ್ಯಾ ಸಂಸ್ಥೆ ಸಂಸ್ಥಾಪಕ ಆರ್. ವಿಶ್ವ ಸಾಗರ್, ಜಿಲ್ಲಾ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಿನ್ನೋಬನಹಳ್ಳಿ ಮುರಾರ್ಜಿ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ನರಸಿಂಹರಾಜು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಆನಂದಪ್ಪ, ಉಪಾಧ್ಯಕ್ಷೆ ಗಂಗಮ್ಮ, ರೇಣುಕಾ ದೇವಿ ಸೋಬಾನೆ ಕಲಾವಿದರ ಸಂಘದ ಅಧ್ಯಕ್ಷೆ ಸುಶಿಲಮ್ಮ, ಉಪಾಧ್ಯಕ್ಷೆ ಕಣುಮಕ್ಕ, ಕಾರ್ಯದರ್ಶಿ ಶಾಂತಮ್ಮ, ಖಜಾಂಚಿ ಹನುಮಕ್ಕ, ಸದಸ್ಯರಾದ ಮಾರಕ್ಕ, ನಾಗಮ್ಮ, ಸಿದ್ದಮ್ಮ, ಲಕ್ಷ್ಮಿದೇವಿ ಗ್ರಾಮ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು. ಕಲಾಮೇಳ­ದಲ್ಲಿ ಸೋಬಾನೆ, ಭಜನೆ, ಹುಲಿವೇಷದ ತಂಡಗಳು ಕಲಾ ಪ್ರದರ್ಶನ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.