ADVERTISEMENT

ಜಾರಿಯಾಗುವುದೇ ಕೃಷಿ, ಕುಡಿವ ನೀರಿನ ಯೋಜನೆಗಳು

ಶಾಶ್ವತ ಬರಪೀಡಿತ ಪಟ್ಟಿಗೆ ಸೇರ್ಪಡೆ: ಭಣಗುಡುವ ಜಲಾಶಯ, ಕೆರೆಗಳು

​ಪ್ರಜಾವಾಣಿ ವಾರ್ತೆ
Published 25 ಮೇ 2018, 8:31 IST
Last Updated 25 ಮೇ 2018, 8:31 IST
ಹಲವು ವರ್ಷಗಳಿಂದ ನೀರನ್ನೇ ಕಾರಣ ರಂಗಯ್ಯನದುರ್ಗ ಜಲಾಶಯದ ನಾಲೆ
ಹಲವು ವರ್ಷಗಳಿಂದ ನೀರನ್ನೇ ಕಾರಣ ರಂಗಯ್ಯನದುರ್ಗ ಜಲಾಶಯದ ನಾಲೆ   

ಮೊಳಕಾಲ್ಮುರು: ಮೊಳಕಾಲ್ಮುರು ಎಂದಾಕ್ಷಣ ಥಟ್ಟನೆ ಜ್ಞಾಪಕವಾಗುವುದು ಕಣ್ಣಿಗೆ ಕಾಣುವಷ್ಟು ದೂರ ಬರಡು ಭೂಮಿ, ಬಿರು ಬಿಸಿಲು, ಹಳ್ಳಿಗಳಲ್ಲಿನ ಬೀದಿ ನಲ್ಲಿಗಳ ಮುಂದೆ ಸಾಲುಗಟ್ಟಿದ ಕೊಡಗಳು, ಒಣಗಿ ನಿಂತಿರುವ ತೋಟಗಳು... ಇವುಗಳ ಚಿತ್ರಣ ಬದಲಾಗುತ್ತದೆ ಎಂಬ ನಿರೀಕ್ಷೆ ಇಲ್ಲಿನ ಜನರದ್ದು.

‘ಈ ಕ್ಷೇತ್ರದಲ್ಲಿ ಮಳೆ ಅಪರೂಪ. ಹೀಗಾಗಿ ಅಂತರ್ಜಲ 800–1000 ಅಡಿ ಪಾತಾಳಕ್ಕಿಳಿದಿದೆ. ಕೃಷಿ ಕಾರ್ಯಗಳು ಸ್ಥಗಿತವಾಗಿವೆ. ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಹೆಚ್ಚಳವಾಗಿ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ. 25–30 ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ಈ ಸಮಸ್ಯೆಗಳಿಗೆ ತುಸು ಪರಿಹಾರ ಸಿಕ್ಕಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕು ಕೈಬಿಟ್ಟು ಹೋಗಿತ್ತು. ಈಗ ಕ್ಷೇತ್ರದ 38 ಕೆರೆಗಳಿಗೆ ನೀರು ಹಾಯಿಸಲು 1.20 ಟಿಎಂಸಿ ನೀರು ಮೀಸಲಿಡಲಾಗಿದೆ. ಇದು ಎಷ್ಟರ ಮಟ್ಟಿಗೆ ಅನುಷ್ಠಾನವಾಗಲಿದೆ ಎಂಬುದೂ ಪ್ರಶ್ನೆಯಾಗಿ ಉಳಿದಿದೆ’ ಎನ್ನುತ್ತಾರೆ ರೈತ ರಾಮಸ್ವಾಮಿ, ನಿಂಗಪ್ಪ.

ಶುದ್ಧ ಕುಡಿಯುವ ನೀರು ನೀಡುವ ನಿಟ್ಟಿನಲ್ಲಿ ₹2,150 ಕೋಟಿ ವೆಚ್ಚದಲ್ಲಿ ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಕೊನೆ ದಿನಗಳಲ್ಲಿ ಅನುಮೋದನೆ ನೀಡಿದೆ. ಟೆಂಡರ್ ಕಾರ್ಯ ಪ್ರಗತಿಯಲ್ಲಿತ್ತು. ಈ ಸರ್ಕಾರ ಅವಧಿಯಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆಯೇ ಎಂಬುದು ಈ ಭಾಗದ ಜನರ ನಿರೀಕ್ಷೆ.

ADVERTISEMENT

‘ಈ ಯೋಜನೆಗೆ ಬಳ್ಳಾರಿಯ ಕೂಡ್ಲಿಗಿ, ಮೊಳಕಾಲ್ಮುರು, ಚಳ್ಳಕೆರೆ, ತುಮಕೂರಿನ ಪಾವಗಡ ತಾಲ್ಲೂಕುಗಳು ಹಾಗೂ ಚಿತ್ರದುರ್ಗದ ತುರುವನೂರು ಹೋಬಳಿ ಗ್ರಾಮಗಳು ಒಳಪಡಲಿವೆ.  ಭದ್ರಾ ಮೇಲ್ದಂಡೆ ಯೋಜನೆ ಹಾಗೂ ತುಂಗಭದ್ರಾ ಹಿನ್ನೀರು ಯೋಜನೆ ಶೀಘ್ರ ಜಾರಿಯಾಗಬೇಕು. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ.  ಈ ಯೋಜನೆ ಜಾರಿಯಾಗದಿದ್ದರೆ ಈಗಾಗಲೇ ಮರುಭೂಮಿ ಸ್ಥಿತಿ ಇರುವ ಕ್ಷೇತ್ರ ಮತ್ತಷ್ಟು ಅವಕೃಪೆಗೆ ಒಳಗಾಗುವ ಆತಂಕ ಮೂಡಿದೆ’ ಎಂದು ವಿರೂಪಾಕ್ಷಪ್ಪ ಹೇಳುತ್ತಾರೆ.

‘ಜಿಲ್ಲೆಯ ಎರಡು ಜಲಾಶಯಗಳ ಪೈಕಿ ಒಂದಾಗಿರುವ ರಂಗಯ್ಯನದುರ್ಗ ಜಲಾಶಯ ಮತ್ತು 21 ಕೆರೆಗಳು ತಾಲ್ಲೂಕಿನಲ್ಲಿವೆ. ಇವುಗಳಲ್ಲೂ ನೀರಿಲ್ಲ. ತೋಟಗಳ ಮಾಲೀಕರಾಗಿದ್ದ ನೂರಾರು ಮಂದಿ ಈಗ ತೋಟಗಳು ಒಣಗಿದ ಕಾರಣ ಹೊಟ್ಟೆಪಾಡಿಗೆ ಗುಳೆ ಹೋಗಿದ್ದಾರೆ. ಇನ್ನಾದರೂ ನೀರಾವರಿ ಸಮಸ್ಯೆಗೆ ಪರಿಹಾರ ಕೈಗೊಳ್ಳದಿದ್ದಲ್ಲಿ ಇಲ್ಲಿನ ಜನವಸತಿ ಕ್ಷೀಣಿಸುವುದರಲ್ಲಿ ಅನುಮಾನವೇ ಇಲ್ಲ’ ಎಂದು ರಾಂಪುರದ ಶಿಕ್ಷಕ ಜಿ.ಸಿ. ನಾಗರಾಜ್‌ ಅತಂಕ ವ್ಯಕ್ತಪಡಿಸಿದರು.

ಶೀಘ್ರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಜನರ ಒತ್ತಾಯ.

**
ತಾಲ್ಲೂಕಿನ ಜನರು ಫ್ಲೋರೈಡ್‌ಯುಕ್ತ ನೀರನ್ನೇ ಕುಡಿಯುವಂತಾಗಿದೆ. ತುಂಗಭದ್ರಾ ಹಿನ್ನೀರು ಯೋಜನೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಬೇಕು
ಮಂಜುಳಾ ಸ್ವಾಮಿ, ರೈತ ಮುಖಂಡರು 
**
ತುಂಗಭದ್ರಾ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಶ್ರಮಿಸಲಾಗುವುದು. ಕೃಷ್ಣಾ ನದಿಯಿಂದಲೂ ಕೆರೆ ತುಂಬಿಸುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ
ಟಿ. ರಘುಮೂರ್ತಿ, ಶಾಸಕ

ಕೊಂಡ್ಲಹಳ್ಳಿ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.