ADVERTISEMENT

ಜಿಲ್ಲಾ ಆಸ್ಪತ್ರೆಯಲ್ಲಿ ‘ಪ್ರೀತಿಯಿಂದ’ ಲಂಚ ಕೇಳ್ತಾರೆ!

ತಾಲ್ಲೂಕು ಪಂಚಾಯ್ತಿ ಕೆಡಿಪಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರತಿಭಾ ರಮೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 6:39 IST
Last Updated 7 ಜುಲೈ 2015, 6:39 IST

ಚಿತ್ರದುರ್ಗ: ‘ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರಿಂದ ಪ್ರೀತಿಯಿಂದ ಲಂಚ ಕೇಳುತ್ತಾರೆ. ಇದನ್ನು ನಾನೇ ಖುದ್ದಾಗಿ ಕಂಡಿದ್ದೇನೆ. ಜನರು ನೋವಿನಿಂದ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ ಹೊರತು, ಪ್ರೀತಿಯಿಂದಲ್ಲ. ಅಂಥವರಿಂದ ಹಣ ಕೇಳಲು ಮನಸ್ಸಾದರೂ ಹೇಗೆ ಬರುತ್ತದೆ...?’

ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರುವ ಲಂಚಾವತಾರದ ಬಗ್ಗೆ ಹೀಗೆ ಮಾತನಾಡಿ ದವರು  ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರತಿಭಾ ರಮೇಶ್.
ಸೋಮವಾರ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಯನ್ನು ಅವರು ತರಾಟೆಗೆ ತೆಗೆದುಕೊಂಡರು.

‘ನಮ್ಮ ಪರಿಚಯದವರೊಬ್ಬರಿಗೆ ಚಿಕಿತ್ಸೆ ಕೊಡಿಸಲು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆ ವೇಳೆ ಮಹಿಳೆಯೊಬ್ಬರು ಹಣ ಕೊಟ್ಟಿದ್ದನ್ನು ಕಂಡಿದ್ದೇನೆ. ‘ಪ್ರೀತಿ ಯಿಂದ ನೀವು ಎಷ್ಟು ಕೊಡ್ತೀರಾ ಕೊಡಿ’ ಎಂದು ಜನರಲ್ಲಿ ಹಣ ಕೇಳುತ್ತಾರೆ. ಬಡತನ ಎಂದ ಸರ್ಕಾರಿ ಆಸ್ಪತ್ರೆಗೆ ಬಂದರೆ, ಇಲ್ಲೂ ಹೀಗೆ ಹಣ ಕೇಳುವುದು ನ್ಯಾಯವೇ?  ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಯಾಕೆ ಯೋಚಿಸುವುದಿಲ್ಲ. ಸರ್ಕಾರ ಸಂಬಳ ಕೊಡುತ್ತದೆ. ಅಭಿವೃದ್ಧಿಗೆ ಅನುದಾನ ಬರುತ್ತದೆ. ಇಷ್ಟಾದರೂ ಹಣ ಏಕೆ’ ಎಂದು  ತಾಲ್ಲೂಕು ವೈದ್ಯಾಧಿಕಾರಿ ಯನ್ನು ಪ್ರಶ್ನಿಸಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಶೌಚಾಲಯ ಕೊಳಕಾ ಗಿದೆ. ಅದನ್ನು ಬಳಸುವುದೇ ಕಷ್ಟ. ಬೆಡ್‌, ಬೆಡ್‌ಶೀಟ್ ಒಗೆದಿಲ್ಲ. ಇಂಥ ಅಶುಚಿತ್ವ ಪರಿಸರದಲ್ಲೇ ಜನರು ರೋಗ ವಾಸಿ ಮಾಡಿಕೊಳ್ಳುತ್ತಾರೋ, ಹೆಚ್ಚಿಸಿಕೊಳ್ಳು ತ್ತಾರೋ, ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಭಾವಿಗಳಿಗೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಾರೆ. ಆದರೆ, ಸಾಮಾನ್ಯ ಜನರಿಗೆ ಎಲ್ಲಿಂದ ಶಿಫಾರಸು ತರುತ್ತಾರೆ. ಇಷ್ಟಾದರೂ ಸಾಮಾನ್ಯ ಜನರು, ‘ಹೇಗೂ ಒಂದೆರಡು ದಿನ ಅಲ್ವಾ, ಅಡ್ಜೆಸ್ಟ್ ಮಾಡ್ಕೋತೀವಿ, ಬಿಡಿ’ ಎನ್ನುತ್ತಾರೆ. ಇಂಥ  ವಿಷಯಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಅಲ್ಲಿನ ವ್ಯವಸ್ಥೆ ಬದಲಾಯಿಸಬೇಕು’ ಎಂದು ಅಧ್ಯಕ್ಷರು ತಾಲ್ಲೂಕು ವೈದ್ಯಾಧಿಕಾರಿಗೆ ತಾಕೀತು ಮಾಡಿದರು.

ಇದಕ್ಕೆ ಪ್ರಕ್ರಿಯಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಫಾಲಾಕ್ಷ, ‘ಜಿಲ್ಲಾಸ್ಪತ್ರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರ ಗಮನಕ್ಕೆ ತರುತ್ತೇನೆ’ ಎಂದ ಭರವಸೆ ನೀಡಿದರು. ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅಧಿಕಾರಿಗಳು, ‘ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಎರಡು ತಿಂಗಳಲ್ಲಿ ಮಳೆ ಕಡಿಮೆಯಾಗಲಿದೆ. ಆದ್ದರಿಂದ, ರೈತರಿಗೆ ರಾಗಿ ಮತ್ತು ಸೂರ್ಯಕಾಂತಿ ಬೆಳೆ ಬೀಜಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ತಾಲ್ಲೂಕಿನಲ್ಲಿ ಶೇಂಗಾ ಬಿತ್ತನೆ ಬೀಜದ ಕೊರತೆಗೆ ಸಂಬಂಧಿಸಿದಂತೆ ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ‘ತಾಲ್ಲೂಕಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಶೇಂಗಾ ಬೀಜ ವಿತರಿಸಲಾಗಿದೆ. ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತವಾಗಿದ್ದರಿಂದ ಬೇಡಿಕೆ ಹೆಚ್ಚಿದೆ. ಸದ್ಯಕ್ಕೆ  ಬೀಜಗಳ ದಾಸ್ತಾನು ಇಲ್ಲ. ಇನ್ನು ಒಂದೆರೆಡು ದಿನಗಳಲ್ಲಿ ಬಿತ್ತನೆ ಶೇಂಗಾ ಬರಲಿದ್ದು, ವಾರದಳಗೆ ಪೂರೈಕೆ ಮಾಡಲಾಗು ವುದು’ ಎಂದು ಭರವಸೆ ನೀಡಿದರು.

‘ಕನಕ ಹತ್ತಿ ಬೀಜಗಳ ಗುಣಮಟ್ಟ ಕಳಪೆಯಾಗಿದೆ. ಆ ಬೀಜಗಳನ್ನು ಬಳಸಿ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಲಾಗಿದೆ. ಈಗ ಬೇರೆ ಕಂಪೆನಿಗಳ ಹತ್ತಿ ಬೀಜವನ್ನು ಗುಣಮಟ್ಟ ಪರೀಕ್ಷಿಸಿ ವಿತರಿಸಲಾಗುತ್ತಿದೆ’ ಎಂದು ಅಧ್ಯಕ್ಷರ ಪ್ರಶ್ನೆಯೊಂದಕ್ಕೆ ವಿವರಣೆ ನೀಡಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ರವಿಶಂಕರ ರೆಡ್ಡಿ ಮಾತನಾಡಿ, ‘ಬಾಲಕಿಯರ ಹಾಜರಾತಿ ಹೆಚ್ಚಳಕ್ಕಾಗಿ 309 ಸರಕಾರಿ ಶಾಲೆಗಳಿಂದ ಒಟ್ಟು ₹ 8,41,950 ಹಾಗೂ ರಾಷ್ಟ್ರೀಯ ಗ್ರಾಮಾಂತರ ವಿದ್ಯಾರ್ಥಿ ವೇತನ ಯೋಜನೆಯಡಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಪ್ರದೇಶದ ಪ್ರತಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ತಲಾ ₹ 300ರಂತೆ 25 ಸರ್ಕಾರಿ ಪ್ರೌಢಶಾಲೆಗಳಿಗೆ ₹ 22,500 ಮಂಜೂರಾಗಿದೆ. ಚೆಕ್  ಮೂಲಕ ಶಾಲಾ ಮುಖ್ಯಶಿಕ್ಷಕರಿಗೆ ಈ ಮೊತ್ತವನ್ನು ವಿತರಿಸಲಾಗಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರಂಗಮ್ಮ ಓಬಣ್ಣ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ, ಇಒ ಎನ್.ನಿಂಗಪ್ಪ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.