ADVERTISEMENT

ಜಿಲ್ಲೆಯಲ್ಲಿ ಬರದ ತೀವ್ರತೆ ಮೇಲ್ನೋಟಕ್ಕಿಂತಲೂ ಹೆಚ್ಚು

ಜಿಲ್ಲೆಯಲ್ಲಿ ಬರ ಅಧ್ಯಯನ ತಂಡದ ಪ್ರವಾಸ: ಪರಿಹಾರ ಕಾಮಗಾರಿಗಳ ಪರಿಶೀಲಿಸಿದ ಸದಸ್ಯ ಡಾ.ಕೆ.ಪೊನ್ನುಸ್ವಾಮಿ ಆತಂಕದ ನುಡಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 9:50 IST
Last Updated 12 ಫೆಬ್ರುವರಿ 2017, 9:50 IST
ಚಿತ್ರದುರ್ಗ ತಾಲ್ಲೂಕು ಗೋನೂರು ಕೆರೆಯ ಅಂಗಳದಲ್ಲಿ ಶನಿವಾರ ಮೇವು ಬೆಳೆಗಾಗಿ ಬೀಜ ಬಿತ್ತನೆ ಮಾಡುತ್ತಿರುವ ಕಾಮಗಾರಿ ವೀಕ್ಷಿಸಿದ ಬರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದ ಜಿ.ಪಂ ಸಿಇಒ ನಿತೇಶ್ ಪಾಟೀಲ್ ಮತ್ತು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ (ಎಡಚಿತ್ರ). ಬಚ್ಚಬೋರನಹಟ್ಟಿಯಲ್ಲಿ ನರೇಗಾ ಕಾಮಗಾರಿ ವೀಕ್ಷಣೆ ವೇಳೆ ಕಾಮಗಾರಿಯಲ್ಲಿ ಪಾಲ್ಗೊಂಡ ಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅವರಿಗೆ ಜಾಬ್‌ಕಾರ್ಡ್‌ ವಿತರಣೆ ಕುರಿತು ಮಾಹಿತಿ ನೀಡಿದರು
ಚಿತ್ರದುರ್ಗ ತಾಲ್ಲೂಕು ಗೋನೂರು ಕೆರೆಯ ಅಂಗಳದಲ್ಲಿ ಶನಿವಾರ ಮೇವು ಬೆಳೆಗಾಗಿ ಬೀಜ ಬಿತ್ತನೆ ಮಾಡುತ್ತಿರುವ ಕಾಮಗಾರಿ ವೀಕ್ಷಿಸಿದ ಬರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದ ಜಿ.ಪಂ ಸಿಇಒ ನಿತೇಶ್ ಪಾಟೀಲ್ ಮತ್ತು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ (ಎಡಚಿತ್ರ). ಬಚ್ಚಬೋರನಹಟ್ಟಿಯಲ್ಲಿ ನರೇಗಾ ಕಾಮಗಾರಿ ವೀಕ್ಷಣೆ ವೇಳೆ ಕಾಮಗಾರಿಯಲ್ಲಿ ಪಾಲ್ಗೊಂಡ ಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅವರಿಗೆ ಜಾಬ್‌ಕಾರ್ಡ್‌ ವಿತರಣೆ ಕುರಿತು ಮಾಹಿತಿ ನೀಡಿದರು   

ಚಿತ್ರದುರ್ಗ: ‘ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಬೆಳೆ ನಷ್ಟ, ಕುಡಿಯುವ ನೀರಿಗೆ ತೊಂದರೆ, ಮೇವಿನ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವಾಸ್ತವ ವರದಿಯನ್ನು ತಂಡದಿಂದ ಸಲ್ಲಿಸಲಾಗುತ್ತದೆ ಎಂದು ಕೇಂದ್ರ ಬರ ಅಧ್ಯಯನ ಮೂರನೇ ತಂಡದ ಸದಸ್ಯ ಹೈದರಾಬಾದ್‌ ಎಣ್ಣೆ ಬೀಜ ನಿಗಮ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಪೊನ್ನುಸ್ವಾಮಿ  ತಿಳಿಸಿದರು.

ತಾಲ್ಲೂಕಿನ ಗೋನೂರು ಕೆರೆ ಬತ್ತಿದ್ದು, ಅಲ್ಲಿ ಮೇವಿಗಾಗಿ ಮೇವಿನ ಬೀಜ ಬಿತ್ತನೆ, ಬಚ್ಚಬೋರನಹಟ್ಟಿಯಲ್ಲಿ ಉದ್ಯೋಗ ಖಾತರಿಯಡಿ ರಾಜಕಾಲುವೆ ಹೂಳೆತ್ತುವ ಕಾಮಗಾರಿ ವೀಕ್ಷಣೆ, ಹಾಯ್ಕಲ್‌ನಲ್ಲಿ ಮೇವು ಬ್ಯಾಂಕ್ ವೀಕ್ಷಣೆ, ಬೆಳಗಟ್ಟ ಪಂಚಾಯ್ತ ವ್ಯಾಪ್ತಿಯ ಹಳೆಚೂರಿ ಪಾಪಯ್ಯನಹಟ್ಟಿಯಲ್ಲಿ ಗೋಕಟ್ಟೆ ಹೂಳೆತ್ತುವ ಉದ್ಯೋಗ ಖಾತರಿ ಕಾಮಗಾರಿ, ತುರುವನೂರು ಗೋಶಾಲೆ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮುಂಗಾರು ಕೈಕೊಟ್ಟು ರೈತರಿಗೆ ಆರ್ಥಿಕ ನಷ್ಟ ಉಂಟುಮಾಡಿದೆ. ಹಿಂಗಾರಿನಲ್ಲೂ ಜಾನುವಾರಿಗೆ ಮೇವಿನ ಕೊರತೆ ಉಂಟಾಗಿದೆ. ಜಿಲ್ಲಾಡಳಿತ ಉತ್ತಮವಾಗಿ ಬರ ನಿರ್ವಹಣೆ ಮಾಡಿದೆ. ಜಾನುವಾರಿಗೆ ಗೋಶಾಲೆಯಲ್ಲಿ ಉಚಿತವಾಗಿ ಮೇವು ಒದಗಿಸಲಾಗುತ್ತಿದೆ. ಆದರೆ, ಮೇಲ್ನೋಟಕ್ಕೆ ಕಾಣುತ್ತಿರುವುದಕ್ಕಿಂತ ಬರಗಾಲದ ತೀವ್ರತೆ ಇನ್ನೂ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಸರ್ಕಾರಕ್ಕೆ ಆ ವರದಿಯನ್ನು ಸಲ್ಲಿಸುತ್ತೇವೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಗೋನೂರು ಕೆರೆ ಅಂಗಳದಲ್ಲಿ ಮೇವು ಬೆಳೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ತಂಡಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ವಿವರಣೆ ನೀಡಿದರು.

‘ಈ ಕೆರೆಯಲ್ಲಿ ನೀರು ಬರಿದಾಗಿರುವ 40 ಎಕರೆ ಪ್ರದೇಶದಲ್ಲಿ ತೇವಾಂಶವಿದೆ. ಈ ಸ್ಥಳದಲ್ಲಿ ಎರಡು ತಿಂಗಳಿಗೆ ಬೆಳೆಯುವಂತಹ ಮೇವಿನ ಬೆಳೆ ಬೆಳೆಸಲು ಆರಂಭಿಸಿದ್ದೇವೆ. ಸುಮಾರು 100 ಟನ್‌ನಷ್ಟು ಮೇವು ಉತ್ಪಾದನೆಯಾಗುವ ನಿರೀಕ್ಷೆ ಇದೆ. ಪಶುವೈದ್ಯಕೀಯ ಇಲಾಖೆ ಮಾರ್ಗದರ್ಶನ
ದಲ್ಲಿ ಈ ಕಾರ್ಯ ನಡೆಯುತ್ತಿದೆ’ ಎಂದು ವಿವರಿಸಿದರು.

‘ಗೋನೂರಿನ ಮಹಿಳಾ ಸ್ವಸಹಾಯ ಗುಂಪುಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಏಳೆಂಟು ಮಹಿಳಾ ಗುಂಪುಗಳಿಗೆ ಮೇವಿನ ಬೀಜದ ಕಿಟ್ ಕೊಡಲಾಗಿದೆ. ಅವರು ಮೇವು ಬೆಳೆದು ಕೊಡಬೇಕು. ಎರಡು ತಿಂಗಳ ನಂತರ ನಮ್ಮ ಇಲಾಖೆಯವರು ಈ ಸಂಘಗಳಿಂದ ಒಂದು ಟನ್‌ಗೆ ₹1,500ರಂತೆ ಖರೀದಿಸುತ್ತೇವೆ. ಈ ಕುರಿತು ಅವರ ಜತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ’ ಎಂದು ವಿವರಿಸಿದರು.

ತಂಡದಲ್ಲಿ ಸದಸ್ಯರಾದ ವಿಜಯ್ ತ್ಯಾಕರೆ, ಎಲ್.ಚತ್ರುನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಾಸಕರಾದ ಟಿ.ರಘುಮೂರ್ತಿ, ಜಿ.ಎಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಉಪವಿಭಾಗಾಧಿಕಾರಿ ರಾಘವೇಂದ್ರ, ತಹಶೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನಾಯಕನಹಟ್ಟಿಸಮೀಪದ ಹಿರೇಕೆರೆ ಕಾವಲು ಪ್ರದೇಶದಲ್ಲಿನ  ಗೋಶಾಲೆಗೆ ಶನಿವಾರ ಕೇಂದ್ರ  ಬರ ಅಧ್ಯಯನ ತಂಡದ ಸದಸ್ಯರು ಭೇಟಿ ನೀಡಿ ಪರಿಶೀಲಿಸಿ, ರೈತರಿಂದ ಮಾಹಿತಿ ಪಡೆದರು.

ಇದೇ ವೇಳೆ ಗೋಶಾಲೆಯಲ್ಲಿ ಅಸ್ತವ್ಯಸ್ತವಾಗಿ ಹರಡಿಕೊಂಡಿದ್ದ ಮೆಕ್ಕೆಜೋಳದ ಮೇವನ್ನು ಪರಿಶೀಲಿಸಿದ ತಂಡದ ಸದಸ್ಯರು, ‘ಮೇವನ್ನು ಸಣ್ಣಗೆ ಕತ್ತರಿಸಿ ಕೊಡಿ. ಇದರಿಂದ ಮೇವು ವ್ಯರ್ಥವಾಗುವುದು ತಪ್ಪುತ್ತದೆ’ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ‘ಜಿಲ್ಲೆಯ ಹಲವಾರು ಕಡೆಗಳಲ್ಲಿ ಮೇವನ್ನು ಕತ್ತರಿಸಿ ನೀಡಲಾಗುತ್ತಿದೆ. ಆದರೆ ಇಲ್ಲಿನ ರೈತರು ಕತ್ತರಿಸಿದ ಮೇವು ಜಾನುವಾರು ನಾಲಿಗೆ ಕೊಯ್ಯುತ್ತದೆ ಎಂದು, ಮೇವನ್ನು ಕತ್ತರಿಸಿ ನೀಡುವಂತೆ ಕೇಳುತ್ತಿದ್ದಾರೆ. ರೈತರ ಅಪೇಕ್ಷೆಯಂತೆ ಹಾಗೇ ವಿತರಿಸುತ್ತಿದ್ದೇವೆ’ ಎಂದರು.

ವಿಧಾನಪರಿಷತ್‌ ಸದಸ್ಯೆ ಜಯಮ್ಮ ಬಾಲಾರಾಜ್ ‘ಜಿಲ್ಲೆಗೆ ಹೆಚ್ಚುವರಿಯಾಗಿ ನಾಲ್ಕು ಗೋಶಾಲೆ ಆರಂಭಿಸಬೇಕು. ಗೋಶಾಲೆ ಹಾಗೂ ಮೇವು ಬ್ಯಾಂಕ್‌ಗಳಿಗೆ ನಿರಂತರವಾಗಿ ಮೇವನ್ನು ಪೂರೈಸಿ’ ಎಂದು ಒತ್ತಾಯಿಸಿದರು. ನಂತರ ತಂಡ ಮೇವು ದಾಸ್ತಾನು ಬ್ಯಾಂಕ್‌ ಪರಿಶೀಲಿಸಿತು. ಮೇವಿನ ಗುಣಮಟ್ಟದ ಬಗ್ಗೆ ರೈತರನ್ನು ವಿಚಾರಿಸಿತು.

ಪಟ್ಟಣದ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ತಂಡ  ಭೇಟಿ ನೀಡಿ ದಾಸೋಹ ಭವನದಲ್ಲಿ ಉಪಾಹಾರ ಸೇವಿಸಿತು. ನಂತರ ತಂಡ ಬಳ್ಳಾರಿ ಜಿಲ್ಲೆ ಕೂಡ್ಲಿಗೆಗೆ ತೆರಳಿತು. ತಂಡದಲ್ಲಿ ಕೇಂದ್ರ ಪಶುಸಂಗೋಪನಾ ಇಲಾಖೆಯ ವಿಜಯತ್ಯಾಕರೆ, ಕೇಂದ್ರ ಆಹಾರ ನಿಗಮದ ಉಪ ಮಹಾಪ್ರಬಂಧಕ ಎಲ್.ಚತ್ರುನಾಯ್ಕ ಇದ್ದರು. 

ಈ ವೇಳೆ ತಹಶೀಲ್ದಾರ್ ಶ್ರೀಧರಮೂರ್ತಿ ಎಸ್.ಪಂಡಿತ್, ಉಪ ತಹಶೀಲ್ದಾರ್ ಟಿ.ಜಗದೀಶ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಪ್ರಸನ್ನ ಕುಮಾರ್, ಕೃಷಿ ಇಲಾಖೆ ಉಪನಿರ್ದೇಶಕಿ ಸುಜಾತಾ, ಸಹಾಯಕ ನಿರ್ದೇಶಕ ಮಾರುತಿ, ಗಿರೀಶ್ ರೆಡ್ಡಿ, ಪ್ರಕಾಶ್, ಉಮಾ ಉಪಸ್ಥಿತರಿದ್ದರು.

ADVERTISEMENT

‘ಎಲ್ರಿಗೂ ಕೆಲ್ಸಕೊಡಿ, ಕೂಲಿ ಕೊಡಿ’

ಚಿತ್ರದುರ್ಗ: ತಾಲ್ಲೂಕಿನ ಬಚ್ಚಬೋರನಹಟ್ಟಿಯಲ್ಲಿ ಶನಿವಾರ ಬರ ಅಧ್ಯಯನ ತಂಡದೊಂದಿಗೆ ಜತೆಯಾದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ, ನರೇಗಾ ಕಾಮಗಾರಿಯನ್ನು ವೀಕ್ಷಿಸಿದರು.

ಕಾರ್ಮಿಕರ ಬಳಿ ನರೇಗಾದಿಂದ ನೀಡುತ್ತಿರುವ ಕೂಲಿ ಹಣದ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೂಲಿ ಕಾರ್ಮಿಕರು, ‘15 –20 ದಿನಗಳಿಂದ ಕೆಲಸ ಮಾಡುತ್ತಿದ್ದೇವೆ. ಜಾಬ್‌ ಕಾರ್ಡ್‌ ಕೊಟ್ಟಿದ್ದಾರೆ. ನವೀಕರಣಗೊಳಿಸಲು ಗ್ರಾಮ ಪಂಚಾಯ್ತಿಯವರು ತೆಗೆದುಕೊಂಡು ಹೋಗಿ, ವಾಪಸ್ ಕೊಟ್ಟಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಯಾರ್ಯಾರು ಬ್ಯಾಂಕ್‌ ಖಾತೆ ಮಾಡಿಸಿದ್ದೀರಿ, ಎಷ್ಟು ಜನ ಬ್ಯಾಂಕ್‌ನಿಂದ ಹಣ ತೆಗೆದುಕೊಂಡಿದ್ದೀರಿ’ ಎಂದು ಪ್ರಶ್ನಿಸಿದರು. ಬಹುತೇಕ ಕಾರ್ಮಿಕರು ‘ನಾವು ಬ್ಯಾಂಕ್‌ಗೆ ಹೋಗಿಲ್ಲ. ಹಣ ಬಿಡಿಸಿಕೊಂಡಿಲ್ಲ’ ಎಂದರು.

ಈ ವೇಳೆ ಸಚಿವರು ಪಿಡಿಒ ವಿದ್ಯಾ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿ ಸತೀಶ್ ರೆಡ್ಡಿ ಅವರನ್ನು ಕರೆದು, ‘ಎಲ್ಲರಿಗೂ ಜಾಬ್‌ ಕಾರ್ಡ್ ಕೊಡಬೇಕು. ಎಲ್ಲರಿಗೆ ಉದ್ಯೋಗ ನೀಡಬೇಕು. ನರೇಗಾದಲ್ಲಿ ಕೆಲಸ ಮಾಡಿ, ಹೇಗೆ ಹಣ ಪಡೆಯಬೇಕು ಎಂಬುದನ್ನು ತಿಳಿಸಿಕೊಡಬೇಕು’ ಎಂದು ಸೂಚಿಸಿದರು.

ಹೆಚ್ಚಿನ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ

ಚಿತ್ರದುರ್ಗ: ‘ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಕೈಕೊಟ್ಟಿದ್ದ ಪರಿಣಾಮ ಬೆಳೆ ನಷ್ಟವಾಗಿದೆ. ಜನ ಜಾನುವಾರಿಗೆ ಕುಡಿಯುವ ನೀರಿಲ್ಲ. ಹೆಚ್ಚಿನ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಶುಕ್ರವಾರ ತುರುವನೂರಿನ ಗೋಶಾಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡದೊಂದಿಗೆ ಭಾಗವಹಿಸಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರ ಅತ್ಯಂತ ಸಮರ್ಪಕವಾಗಿ ಬರ ನಿರ್ವಹಣೆ ಮಾಡುತ್ತಿದ್ದೆ. ಅಧ್ಯಯನ ನಡೆಸಿ ಹೋದ ಕೇಂದ್ರ ತಂಡಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಮುಂಗಾರು ನಷ್ಟದ ಬಗ್ಗೆ ಕೇಂದ್ರಕ್ಕೆ ವರದಿ ನೀಡಲಾಗಿದೆ. ಹಿಂಗಾರು ನಷ್ಟದ ಬಗ್ಗೆಯು ಕೇಂದ್ರಕ್ಕೆ ವರದಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರಾಜ್ಯಕ್ಕೆ ಹೆಚ್ಚಿನ ನೆರವನ್ನು ನೀಡಬೇಕಾಗಿದೆ’ ಎಂದರು.

* ಇನ್‌ಪುಟ್ ಸಬ್ಸಿಡಿ ವಿವರವನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುತ್ತಿದೆ. ರೈತರ ಆಧಾರ್, ಬ್ಯಾಂಕ್ ಖಾತೆ ಸಂಖ್ಯೆ, ಜಮೀನಿನ ವಿವರವನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಹಣ ರೈತರ ಖಾತೆಗೆ ಜಮಾ ಆಗುತ್ತದೆ.
ಎಚ್.ಆಂಜನೇಯ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.