ADVERTISEMENT

ತಂಬಾಕು ಸೇವನೆಯಿಂದ ದೂರವಿರಿ

ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಜಿಲ್ಲಾ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:48 IST
Last Updated 1 ಜೂನ್ 2018, 12:48 IST

ಚಿತ್ರದುರ್ಗ: ‘ತಂಬಾಕು ಸೇವನೆಯಂಥ ದುಶ್ಚಟದಿಂದ ದೂರವಿದ್ದು, ಆರೋಗ್ಯದ ಕುರಿತು ಎಲ್ಲರೂ ಕಾಳಜಿ ವಹಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಸಲಹೆ ನೀಡಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಗುರುವಾರ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘19ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಅನೇಕರಿಗೆ ಸಿಗರೇಟ್ ಸೇದಬೇಕು ಎನಿಸುತ್ತದೆ. ಮೊದ ಮೊದಲು ಹವ್ಯಾಸ
ವಾಗಿ ದಿನ ಕಳೆದಂತೆ ಅದು ದುಶ್ಚಟವಾಗಿ ಪರಿಣಮಿಸಿ, ದೇಹದ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ. ತಂಬಾಕು ಬೆಳೆಯುವ ಪ್ರದೇಶಗಳಲ್ಲಿ ವಿಷಕಾರಿ ಸರೀಸೃಪಗಳೇ ಹೋಗಲು ಹಿಂದೇಟು ಹಾಕುವಾಗ ಅದನ್ನು ಮಾನವ ಸೇವಿಸುವುದು ಆರೋಗ್ಯವಂಥ ಸಮಾಜದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ’ ಎಂದರು.

ADVERTISEMENT

‘ತಂಬಾಕಿನಲ್ಲಿ ನಿಕೋಟಿನ್ ಎನ್ನುವ ವಿಷಕಾರಿ ವಸ್ತು ಇದ್ದು, ಇದರ ಸೇವನೆಯಿಂದ ಕ್ಯಾನ್ಸರ್‌ ಹಾಗೂ ಹೃದ್ರೋಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 2020 ಕ್ಕೆ ವಿಶ್ವದ ಅತಿ ದೊಡ್ಡ ಮಾರಕ ರೋಗವಾಗಿ ಕ್ಯಾನ್ಸರ್‌ ಪರಿಣಮಿಸಲಿದೆ ಎಂಬ ಮುನ್ಸೂಚನೆ ಕಂಡು ಬರುತ್ತಿದೆ. ನಾಗರಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ’ ಎಂದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, ‘19 ವರ್ಷದೊಳಗಿನವರೇ ಹೆಚ್ಚು ಮಂದಿ ಇದಕ್ಕೆ ದಾಸರಾಗುತ್ತಿದ್ದಾರೆ. ಸಿಗರೇಟು ಸೇದುವುದು ಸ್ಟೈಲ್ ಎಂಬ ಭಾವನೆ ಯುವಕರಲ್ಲಿದೆ. ಅಂಥವರನ್ನು ಮೆಚ್ಚಿಕೊಳ್ಳುವಂಥ ವರ್ಗ ಕಾಲೇಜುಗಳಲ್ಲಿ ನಿರ್ಮಾಣವಾಗುತ್ತಿದೆ. ಮಹಾನಗರಗಳಲ್ಲಿ ಯುವತಿಯರು ಇದಕ್ಕೆ ಹೊರತಾಗಿಲ್ಲ. ಕಲಿಕಾ ಹಂತದಲ್ಲೇ ಇದನ್ನು ಬಿಟ್ಟರೆ ಜೀವನವಿಡಿ ಆರೋಗ್ಯವಂತರಾಗಿ ಇರಬಹುದು. ಇಲ್ಲದಿದ್ದರೆ, ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ’ ಎಂದು ಸಲಹೆ ನೀಡಿದರು.

‘ಕೆಲವರು ಆಯಾಸ ಪರಿಹರಿಸಿಕೊಳ್ಳಲು ಸಿಗರೇಟು ಸೇದಲು ಪ್ರಾರಂಭಿಸುತ್ತಾರೆ. ಇದರಿಂದ ಖಂಡಿತ ಪರಿಹಾರ ಸಿಗುವುದಿಲ್ಲ. ಬದಲಿಗೆ ಮೆದುಳಿನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ತಾವೂ ಸೇದುವುದರ ಜತೆಗೆ ಅವರ ಪಕ್ಕದಲ್ಲಿ ನಿಂತವರ ಆರೋಗ್ಯಕ್ಕೂ ಹಾನಿ ಉಂಟಾಗಲಿದೆ. ಆದ್ದರಿಂದ ಆರೋಗ್ಯ ಕಾಪಾಡಿಕೊಳ್ಳಲಿಕ್ಕಾಗಿ ದೂರವಿರುವುದೇ ಉತ್ತಮ’ ಎಂದರು.

‘ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ನಮ್ಮ ಬಳಿ ಸ್ನೇಹ ಬೆಳೆಸುತ್ತಾರೆ. ಇಲ್ಲದಿದ್ದರೆ, ನಮ್ಮಿಂದ ದೂರ ಉಳಿಯುವವರೇ ಹೆಚ್ಚು. ಆದ್ದರಿಂದ ಸ್ವಯಂ ಪ್ರೇರಿತರಾಗಿ ತಂಬಾಕು ಸೇವನೆಯಿಂದ ಮುಕ್ತರಾಗಿ’ ಎಂದು ಮನವಿ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಲಕೊಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ವಿ.ನೀರಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಲಕ್ಷ್ಮಣ ಅರಸಿದ್ಧಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ವಿಶ್ವನಾಥ್, ಉಪಾಧ್ಯಕ್ಷ ಕೆ.ವೀರಭದ್ರಪ್ಪ, ಸಿ. ಶಿವುಯಾದವ್, ಶೈಲಜಾ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಕಾರ್ಯಕ್ರಮ
ಆಯೋಜಿಸಲಾಗಿತ್ತು.

‘ತಂಬಾಕು ಮುಕ್ತ ದೇಶ ನಿರ್ಮಿಸಿ’

ಪ್ರತಿ ವರ್ಷ ತಂಬಾಕು ಸೇವನೆಯಿಂದ 70ಲಕ್ಷಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ 60 ಲಕ್ಷದಷ್ಟು ಪ್ರಕರಣಗಳಿಗೆ ನೇರ ಬಳಕೆ ಕಾರಣವಾಗಿದೆ. 8.9 ಲಕ್ಷ ಪರೋಕ್ಷ ಸೇವನೆಯಿಂದ ಸಂಭವಿಸಿದೆ.

ವಿಶ್ವದ 100 ಕೋಟಿ ತಂಬಾಕು ವ್ಯಸನಿಗಳಲ್ಲಿ ಶೇ 80ರಷ್ಟು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿದ್ದಾರೆ. ಆದ್ದರಿಂದ ತಂಬಾಕು ಮುಕ್ತ ದೇಶ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

**
ದೇಶದ ಅಭಿವೃದ್ಧಿಗೆ ಯುವಸಮೂಹ ಅತ್ಯಗತ್ಯ. ಆದ್ದರಿಂದ ದುಶ್ಚಟಕ್ಕೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ – ವಸ್ತ್ರಮಠ, ಜಿಲ್ಲಾ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.