ADVERTISEMENT

ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ

ತಲೆ ಎತ್ತಿದ ಅಂಗಡಿ ಮುಂಗಟ್ಟು; ಭರ್ಜರಿ ವ್ಯಾಪಾರದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:34 IST
Last Updated 14 ಮಾರ್ಚ್ 2017, 5:34 IST

ನಾಯಕನಹಟ್ಟಿ: ಅವಧೂತ ಪರಂಪರೆಯ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಮಹಾ ರಥೋತ್ಸವ ಮಾರ್ಚ್‌ 15ರಂದು ಮಧ್ಯಾಹ್ನ 3ಕ್ಕೆ ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ.

ರಥೋತ್ಸವದ ಅಂಗವಾಗಿ ಮಧ್ಯ ಕರ್ನಾಟಕದ ಮೂಲೆ–ಮೂಲೆಗಳಿಂದ ಬಂದ ಭಕ್ತರ ದಂಡು ನಾಯಕನಹಟ್ಟಿಯಲ್ಲಿ ಬುಧವಾರ ದಿಂದಲೇ ಬೀಡುಬಿಟ್ಟಿದೆ. ಹೊರಮಠ–ಒಳಮಠಗಳಲ್ಲಿ ಸಾಧು–ಸಂತರ ಗುಂಪು ಜಮಾಯಿಸಿ ದೇವರ ಭಜನೆ, ಪ್ರಾರ್ಥನೆಯಲ್ಲಿ ತೊಡಗಿದೆ.

15ರಂದು ಬೆಳಿಗ್ಗೆ ಜನಪದ ಕಲಾಮೇಳದೊಂದಿಗೆ ವೃಷಭ ವಾಹನ ಒಳಗೊಂಡ ಚಿಕ್ಕ ರಥೋತ್ಸವ ಜರುಗಲಿದೆ. ನಂತರ ನಾಯಕನಹಟ್ಟಿ, ತಳಕು, ಮನ್ನೇಕೋಟೆ ಭಕ್ತರಿಂದ ಮಹಾಮಂಗಳಾರತಿ ನಡೆಯಲಿದೆ. ನಂತರ ಮಹಾರಥೋತ್ಸವದ ಧಾರ್ಮಿಕ ವಿಧಿ–ವಿಧಾನಗಳಿಗೆ ಚಾಲನೆ ಸಿಗಲಿದೆ. ಮಧ್ಯಾಹ್ನ ಪಲ್ಲಕ್ಕಿಯಲ್ಲಿ ವಿರಾಜ ಮಾನಗೊಂಡ ತಿಪ್ಪೇರುದ್ರಸ್ವಾಮಿ, ಕುಪ್ಪಿನಕೆರೆ ಆಂಜನೇಯ ದೇಗುಲದಲ್ಲಿ ಪೂಜೆ ಮುಗಿಸಿ, ಮಹಾರಥದತ್ತ ಸಾಗುತ್ತದೆ. ಅಲ್ಲಿ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ಮುಗಿದ ಮೇಲೆ ತಿಪ್ಪೇರುದ್ರಸ್ವಾಮಿಯ ರಥ ಸಿಂಹಾಸನ ಅಲಂಕಾರ ನಡೆಯಲಿದೆ.

ಭಕ್ತರ ಸಾಗರದ ನಡುವೆ ತಿಪ್ಪೇರುದ್ರ ಸ್ವಾಮಿಯ ರಥ ಪಾದಗಟ್ಟೆಯತ್ತ ಸಾಗುತ್ತದೆ. ರಥಬೀದಿಯಲ್ಲಿ ಮಹಾರಥವನ್ನು ಭಕ್ತರು ಮಿಣಿ (ಹಗ್ಗ) ಹಿಡಿದು ಎಳೆಯಲಿದ್ದಾರೆ. ರಥ ಸಂಜೆ 5ರ ವೇಳೆಗೆ ಪಾದಗಟ್ಟೆ ತಲುಪಿ ಅಲ್ಲಿಂದ ಹಿಮ್ಮುಖ ಸಾಗಲಿದೆ. ಈ ಸಂದರ್ಭದಲ್ಲಿ ತಿಪ್ಪೇರುದ್ರಸ್ವಾಮಿಯ ಪ್ರಭಾವಳಿಯ ಪುನಃ ಅಲಂಕಾರ ನಡೆಯುತ್ತದೆ. ಹಿಮ್ಮುಖ ಗೊಂಡ ರಥ ಸ್ವಸ್ಥಾನಕ್ಕೆ ಬಂದು ನಿಲ್ಲಲಿದೆ.

ಬೆಂಡು ಬತ್ತಾಸ್ ಅಂಗಡಿ:  ಜಾತ್ರೆ ಅಂಗವಾಗಿ ಈಗಾಲೇ ಪಟ್ಟಣದಲ್ಲಿ ಬೆಂಡು–ಬತ್ತಾಸ್‌ನ ನೂರಾರು ಅಂಗಡಿ ಗಳನ್ನು ಹಾಕಲಾಗಿದೆ. ಹೊರಮಠ–ತೇರುಬೀದಿ– ಒಳಮಠದಲ್ಲಿನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈವಿಧ್ಯಮಯ ಅಂಗಡಿಗಳನ್ನು ತೆರೆಯಲಾಗಿದ್ದು, ಇದು ಜಾತ್ರೆಗೆ ಮೆರುಗು ತಂದಿದೆ.
ಹೆಚ್ಚಿದ ಬಿಸಿಲಿನ ತಾಪ:  ಈ ಬಾರಿ ಜಾತ್ರೆಯಲ್ಲಿ ಜನರಿಗೆ ಬಿಸಿಲಿನ ತಾಪ ಕಾಡಲಿದೆ. ಸದ್ಯ 34 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದೆ. ಭಕ್ತರು ನೆರಳಿಗಾಗಿ ಪರಿತಪಿಸುವಂತಾಗಿದೆ. ಪಟ್ಟಣದಲ್ಲಿದ್ದ ಮರಗಳು ಕ್ಷೀಣಿಸಿರುವ ಪರಿಣಾಮ ನೆರಳಿನ ಅಭಾವವನ್ನು ಜನರು ಎದುರಿಸುವಂತಾಗಿದೆ. ಅಲ್ಲಲ್ಲಿ ಜೀವ ಹಿಡಿದುಕೊಂಡಿರುವ ಮರಗಳಡಿ ಭಕ್ತರು ಆಶ್ರಯ ಪಡೆದುಕೊಳ್ಳುತ್ತಿದ್ದಾರೆ.

ಅಧಿಕಾರಿಗಳು ಮೊಕ್ಕಾಂ:  ಜಾತ್ರೆಯ ಅಂಗವಾಗಿ ಉಪ ವಿಭಾಗಾಧಿಕಾರಿ ಟಿ.ರಾಘವೇಂದ್ರ, ತಹಶೀಲ್ದಾರ್ ಶ್ರೀಧರಮೂರ್ತಿ ಎಸ್.ಪಂಡಿತ್‌, ವೃತ್ತ ನಿರೀಕ್ಷಕ ಎನ್‌.ತಿಮ್ಮಣ್ಣ ಸೇರಿದಂತೆ ಹಲವು ಅಧಿಕಾರಿಗಳು ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸೌಲಭ್ಯಗಳ ಕೊರತೆ ಉಂಟಾಗದಂತೆ ಕ್ರಮ ವಹಿಸಲು ಅಧಿಕಾರಿಗಳ ಹಲವು ತಂಡಗಳನ್ನು ರಚಿಸಲಾಗಿದೆ.

ಕ್ಷೀಣಿಸಿದ ಸಾಧ ಸಂತರ ಗುಂಪು: ತಿಪ್ಪೇರುದ್ರಸ್ವಾಮಿ ಜಾತ್ರೆಯೆಂದರೆ ಸಾಧು–ಸಂತರ, ಅವಧೂತರ, ಯೋಗಿಗಳ, ಸನ್ಯಾಸಿಗಳ ಶರಣರ ಸಂಗಮ ಸ್ಥಾನ ಎಂದು ಕರೆಯುತ್ತಾರೆ. ಆದರೆ, ಕಳೆದು ಎರಡು ವರ್ಷಗಳಿಂದ ಇವರ ಸಂಖ್ಯೆ ಕಡಿಮೆಯಾಗುತ್ತಿದೆ. ಭಿಕ್ಷಾಟನೆ ಮಾಡುತ್ತಾರೆ ಎಂದು ನಿರ್ಗತಿಕ ಕೇಂದ್ರದವರು ಹಾಗೂ ಪೊಲೀಸರು ತೊಂದರೆ ಕೊಡುತ್ತಾರೆ ಎಂದು ಹೊರಮಠದ ಬಳಿ ಜಾತ್ರೆಗೆ ಬಂದಿರುವ ಹಲವು ಶರಣರು, ಸಾಧು ಆರೋಪಿಸುತ್ತಾರೆ.
– ವಿ.ಧನಂಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.