ADVERTISEMENT

ತುರ್ತು ಸಭೆಯಲ್ಲೂ ಕೊಳವೆಬಾವಿ ಸದ್ದು!

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 5:11 IST
Last Updated 19 ಜುಲೈ 2017, 5:11 IST

ಚಿತ್ರದುರ್ಗ: ‘ನಗರದ ವಿವಿಧೆಡೆ  ₹ 8.5 ಕೋಟಿ ವೆಚ್ಚದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಕೊಳವೆ ಬಾವಿಗಳನ್ನು ಕೊರೆಸುವ ಮೂಲಕ ಜನತೆಗೆ ನೀರು ಕೊಟ್ಟಿದ್ದಾರಂತೆ, ಎಲ್ಲೆಲ್ಲಿ ಎಂಬುದರ ಕುರಿತು ಮಾಹಿತಿ ಕೊಡಿ, ಇಲ್ಲವೇ ಅವೆಲ್ಲವನ್ನೂ ವಶಕ್ಕೆ ಪಡೆದು ಜನಸಾಮಾನ್ಯರಿಗೆ ನೀರು ಪೂರೈಸಿ..’

ನಗರದಲ್ಲಿ ಮಂಗಳವಾರ ನಗರಸಭೆ ಪ್ರಭಾರ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯೂ ಕೊಳವೆಬಾವಿಗಳ ಸುತ್ತ ಗಿರಕಿ ಹೊಡೆಯಿತು. ಈ ಮೇಲ್ಕಂಡ ವಿಷಯ ಪ್ರಸ್ತಾಪಿಸಿದ ಸದಸ್ಯ ಬಿ.ಕಾಂತರಾಜ್ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ನಗರದಾದ್ಯಂತ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಇಲ್ಲಿನ ಶಾಸಕರು ಶ್ರಮಿಸುತ್ತಿದ್ದಾರೆ. ಇದನ್ನು ಸ್ವಾಗತಿಸಿ ಅವರಿಗೆ ಅಭಿನಂದಿಸುತ್ತೇವೆ. ಆದರೆ, ಅವರು ತಮ್ಮ ಅನುದಾನದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಕಳೆದ ಸಭೆಯಲ್ಲಿ ನಾನು ಈ ವಿಷಯ ಪ್ರಸ್ತಾಪಿಸಿ ಮಾಹಿತಿ ಕೇಳಿದ್ದೆ. ಈವರೆಗೂ ಪೌರಾಯುಕ್ತರು ಕೊಟ್ಟಿಲ್ಲ’ ಎಂದು ದೂರಿದರು.

ADVERTISEMENT

‘ಸಾರ್ವಜನಿಕರಿಗಾಗಿ ಯಾರೇ ಕೊಳವೆ ಬಾವಿಗಳನ್ನು ಕೊರೆಸಿದರೂ ನಗರಸಭೆ ಸಿಬ್ಬಂದಿಯೇ ನಿರ್ವಹಣೆ ಮಾಡಬೇಕು. ವಿದ್ಯುತ್ ಸಂಪರ್ಕಕ್ಕೆ ಎನ್‌ಓಸಿ ಕೊಡಬೇಕು. ನಿರಾಕ್ಷೇಪಣಾ ಪತ್ರ ನೀಡುವಾಗಲಾದರೂ ಎಲ್ಲಿ ಕೊರೆಸಲಾಗಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಗುವುದಿಲ್ಲವೇ’ ಎಂದು ಪ್ರಶ್ನಿಸಿದರು. ‘ಎಲ್ಲ ಕೊಳವೆಬಾವಿ
ಗಳನ್ನು ಮೊದಲು ವಶಕ್ಕೆ ಪಡೆದುಕೊಳ್ಳಿ. ಆಗಲಾದರೂ ಲೆಕ್ಕ ಸಿಗುತ್ತದೆ. ಆನಂತರ ಮಾಹಿತಿಯಾದರೂ ನಮಗೆ ನೀಡಿ’ ಎಂದು ಆಗ್ರಹಿಸಿದರು.

‘ಕೊಳವೆಬಾವಿಗಳ ಲೆಕ್ಕಕೊಡಿ ಎಂಬುದಾಗಿ ಶಾಸಕರಿಗೆ ಕೇಳುವ ಅಧಿಕಾರ ನಮಗಿಲ್ಲ. ನಗರಸಭೆಯಿಂದ ವಿದ್ಯುತ್  ಸಂಪರ್ಕಕ್ಕೆ  ಎನ್‌ಓಸಿ ನೀಡಬೇಕು. ಆದರೆ, ಈಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಳವೆಬಾವಿ ಕೊರೆಯಿಸಿದ ತಕ್ಷಣ ಜನರಿಗೆ ನೀರು ಪೂರೈಸುವ ಕೆಲಸ ಮಾಡಬೇಕು. ವಿದ್ಯುತ್ ಸಂಪರ್ಕ ವಿಚಾರವಾಗಿ ಸಬೂಬು ಹೇಳುವ ಹಾಗಿಲ್ಲ.

ಈ ಕುರಿತು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದ್ದರಿಂದ ಎಲ್ಲೆಲ್ಲಿ ಕೊರೆಯಿಸಿದ್ದಾರೆ ಎಂಬ ಉಸಾಬರಿಗೆ ನಗರಸಭೆ ಅಧಿಕಾರಿಗಳು ಹೋಗಿಲ್ಲ. ಆ ಕೊಳವೆ ಬಾವಿಗಳಿಂದ ಜನರಿಗೆ ನೀರು ಪೂರೈಸಲಾಗುತ್ತಿದೆ’ ಎಂದು  ಪೌರಾಯುಕ್ತ ಚಂದ್ರಪ್ಪ ಪ್ರತಿಕ್ರಿಯಿಸಿದರು.

ಕಾಂತರಾಜ್‌ ಸೇರಿದಂತೆ ಕೆಲ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಪ್ರತಿ ಕೊಳವೆಬಾವಿಗಳ ಮೇಲೆ ನಿಗಾ ಇಡಲು ನೀರಗಂಟಿಗಳಿಗೆ ಹೇಳಿ ಎಂದರು.
ಸದಸ್ಯರಾದ ಛಾಯಾತಕ್ಕಡಿ ಸುರೇಶ್‌, ಚಂದ್ರಕಲಾ, ಎಂ. ಮಲ್ಲಿಕಾರ್ಜುನ್, ಖಾದರ್‌ಖಾನ್ ‘ನಗರದಲ್ಲಿ ಕುಡಿಯವ ನೀರಿನ ಸಮಸ್ಯೆ ತೀವ್ರವಾಗಿದ್ದು, ಈಗಾಗಲೇ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ನೀರು ಸಾಕಾಗುವುದಿಲ್ಲ. ಪ್ರತಿ ವಾರ್ಡ್‌ಗೂ ಒಂದೊಂದು ಟ್ಯಾಂಕರ್ ಒದಗಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.