ADVERTISEMENT

ದೇಗುಲ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:13 IST
Last Updated 22 ಅಕ್ಟೋಬರ್ 2017, 5:13 IST

ಹೊಸದುರ್ಗ: ಇಲ್ಲಿನ ಕುಂಚಾದ್ರಿ ಬೆಟ್ಟದಲ್ಲಿ ₹ 4 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ವೆಂಕಟೇಶ್ವರಸ್ವಾಮಿ ದೇಗುಲದಿಂದ ಈ ಭಾಗದ ಭಕ್ತರ ಧಾರ್ಮಿಕ ಶ್ರದ್ಧೆ ಹೆಚ್ಚಾಗಲಿದೆ ಎಂದು ಶಾಂತವೀರ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ವೆಂಕಟೇಶ್ವರ ದೇವಸ್ಥಾನ ಚಾರಿಟಬಲ್‌ ಟ್ರಸ್ಟ್‌ ನೋಂದಣಿ ಕುರಿತು ಶನಿವಾರ ನಡೆದ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಅಂತರದನಿಯಂತೆ ತಿರುಪತಿ ಮಾದರಿಯಲ್ಲಿ ವೆಂಕಟೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಪಟ್ಟಣದ ಎಲ್ಲಾ ಧರ್ಮ ಹಾಗೂ ಜಾತಿಯ ಒಟ್ಟು 48 ಮಂದಿ ಮುಖಂಡರು ನೆರವು ನೀಡುತ್ತಿರುವುದು ಶ್ಲಾಘನೀಯ. ದೇವಸ್ಥಾನಕ್ಕೆ ಬರುವ ಆದಾಯದಲ್ಲಿ ಅನಾಥರಿಗೆ, ನಿರಾಶ್ರಿತರಿಗೆ, ಬಡವರಿಗೆ ಆಶ್ರಮ ತೆರೆಯವುದು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ಸೇರಿದಂತೆ ಪ್ರತಿ ಶನಿವಾರ ದಾಸೋಹ ವ್ಯವಸ್ಥೆ ಮಾಡಲಾಗುವುದು’ ಎಂದು ಮಾಹಿತಿ  ನೀಡಿದರು.

ADVERTISEMENT

ಅ. 25ರ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ವೆಂಕಟೇಶ್ವರ ದೇವಸ್ಥಾನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮಕ್ಕೆ ಬೆಲಗೂರಿನ ಬಿಂದು ಮಾದವಶರ್ಮ ಸ್ವಾಮೀಜಿ, ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಮಾದಾರ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕ ಬಿ.ಜಿ.ಗೋವಿಂದಪ್ಪ, ಸಂಸದ ಬಿ.ಎನ್‌.ಚಂದ್ರಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ವೆಂಕಟೇಶ್ವರ ದೇವಸ್ಥಾನ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಶಾಂತವೀರ ಸ್ವಾಮೀಜಿ ತಿಳಿಸಿದರು.

ದೇವಸ್ಥಾನ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಆಗ್ರೋ ಶಿವಣ್ಣ ಮಾತನಾಡಿ, ಶಾಂತವೀರ ಸ್ವಾಮೀಜಿ ಸಲಹೆ ಹಾಗೂ ವಿವಿಧ ಸಮಾಜದ ಮುಖಂಡರ ಪೂರ್ವಾನುಮತಿ ಮೇರೆಗೆ ವೆಂಕಟೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ದೇಗುಲ ನಿರ್ಮಾಣಕ್ಕೆ ಬೇಕಾದ ದೇಣಿಗೆಯನ್ನು ಪ್ರತಿ ಭಾನುವಾರ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದಲ್ಲೆಡೆ ಸಂಗ್ರಹಿಸಲಾಗುವುದು. ಭಕ್ತರು ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು. 48 ಮಂದಿ ಸದಸ್ಯರನ್ನೊಳಗೊಂಡ ವೆಂಕಟೇಶ್ವರ ದೇವಸ್ಥಾನ ಚಾರಿಟಬಲ್‌ ಟ್ರಸ್ಟ್‌ ನೋಂದಣಿ ಮಾಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.