ADVERTISEMENT

ದೌರ್ಜನ್ಯ ಪ್ರಕರಣಗಳಿಗೆ ₹ 11.77ಲಕ್ಷ ಪರಿಹಾರ

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 5:55 IST
Last Updated 20 ಮಾರ್ಚ್ 2017, 5:55 IST

ಚಿತ್ರದುರ್ಗ: ‘ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನಾಂಗದ  ಮೇಲೆ ನಡೆದ 12 ದೌರ್ಜನ್ಯ ಪ್ರಕರಣಗಳಿಗೆ ₹11.77 ಲಕ್ಷ ಪರಿಹಾರಧನ ವಿತರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ 2017ನೇ ಸಾಲಿನ ಮೊದಲ ತ್ರೈಮಾಸಿಕದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲಿ ಮಾತನಾಡಿದ ಅವರು,  ‘ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳಿಗೆ ಉದ್ಯೋಗ ದೊರೆತಾಗ ನೀಡುವ ಸಿಂಧುತ್ವ ಪ್ರಮಾಣಪತ್ರ ವಿಳಂಬವನ್ನು ತಪ್ಪಿಸಬೇಕು.

ಆಯಾ ತಹಶೀಲ್ದಾರರೇ ನೀಡಿರುವ ಜಾತಿ ಪ್ರಮಾಣ ಪತ್ರಗಳ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾ ಸಿಂಧುತ್ವ ಪ್ರಮಾಣ ಪತ್ರ ನೀಡಿ, ಸಮಿತಿಗೆ ಕೂಡಲೇ ಕಳುಹಿಸಿಕೊಡು ವಂತೆ ಸರಳ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

‘ಒಂದು ಗ್ರಾಮದಲ್ಲಿ ಎರಡು ಮೂರು ಕಡೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯಿದ್ದು, ಎ.ಕೆ ಕಾಲೊನಿ, ಹಟ್ಟಿಗಳಿಗೆ ನೀರು ಕೊಡುವುದಿಲ್ಲ ಎನ್ನುವುದು ಸಮಂ ಜಸವಲ್ಲ, ಅಂಥ ಪ್ರಕರಣ ಎಲ್ಲಾದರೂ ಕಂಡುಬಂದಲ್ಲಿ ಕೂಡಲೇ ಸಮಸ್ಯೆ ಬಗೆಹರಿಸಬೇಕು’ ಎಂದರು.     
                  
ಸಮಾಜ ಕಲ್ಯಾಣ ಅಧಿಕಾರಿ ಮಂಜುಳಮ್ಮ ಮಾತನಾಡಿ ‘ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಇನ್ನೂ 25 ಪ್ರಕರಣಗಳು ಬಾಕಿ ಇವೆ’ ಎಂದು ಮಾಹಿತಿ ನೀಡಿದರು.

ಸರ್ಕಾರಿ ಅಭಿಯೋಜಕ ನಾರಾಯಣ ಮಾತನಾಡಿ, ‘ಪರಿಶಿಷ್ಟ ಜಾತಿ, ಜನಾಂಗಗಳ ಮೇಲೆ ನಡೆದಿರುವ ಕೊಲೆ, ಅತ್ಯಾಚಾರ, ಜಾತಿನಿಂದನೆ ಹಾಗೂ ಗುಂಪು ಘರ್ಷಣೆ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಬರುವ ಮೊದಲು ಪ್ರಕರಣಗಳ ಸರಿಯಾದ ತನಿಖೆ ನಡೆಸಿ, ನಂತರ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶ್ರೀರಂಗಯ್ಯ, ‘ಸರ್ಕಾರ ಪರಿಹಾರ ನೀಡಿದ ಮೇಲೆ ರಾಜಿ ಸಂಧಾನದಿಂದ ಪ್ರಕರಣಗಳು ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತವೆ. ಇದರಿಂದ ಸರ್ಕಾರಕ್ಕೆ ನಷ್ಟ ಸಂಭವಿಸುತ್ತಿದ್ದು, ಇಂಥ ಪ್ರಕರಣಗಳು ಮರುಕಳಿಸದಂತೆ ಮತ್ತು ಇಂಥ ಪ್ರಕರಣಗಳಲ್ಲಿ ಪರಿಹಾರದ ಮೊತ್ತವನ್ನು ಸರ್ಕಾರಕ್ಕೆ ಹಿಂಬರಿಸುವ ವ್ಯವಸ್ಥೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿ ‘2017–18ನೇ ಸಾಲಿನಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ. ಯೋಜನೆಯಡಿ ಪರಿಶಿಷ್ಟ ಜನಾಂಗಗಳ ಕಾಲೋನಿ, ಹಟ್ಟಿ, ತಾಂಡಾಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸುವಂತೆ  ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.  ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT