ADVERTISEMENT

ಧರ್ಮಪುರ ತಾಲ್ಲೂಕು ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 9:03 IST
Last Updated 5 ಸೆಪ್ಟೆಂಬರ್ 2017, 9:03 IST

ಧರ್ಮಪುರ: ಹೋಬಳಿಯೂ ನೂತನ ತಾಲ್ಲೂಕಾಗಲು ಎಲ್ಲಾ ಅರ್ಹತೆಗಳನ್ನು ಒಳಗೊಂಡಿರುವುದರಿಂದ ಸರ್ಕಾರ ಧರ್ಮಪುರವನ್ನು ನೂತನ ತಾಲ್ಲೂಕಾಗಿ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಸದಸ್ಯ ಡಾ.ತಿಪ್ಪೇಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.

ಧರ್ಮಪುರ ತಾಲ್ಲೂಕು ರಚನೆ ಮತ್ತು ಪೂರಕ ನಾಲೆ ಮಾಡುವಂತೆ ಒತ್ತಾಯಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 43ನೇ ದಿನವಾದ ಸೋಮವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಜೆಗಳು ಭ್ರಷ್ಟರಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಸ್ಫರ್ಧಾಳುಗಳು ನೀಡುವ ಹಣದ ಆಮಿಷಕ್ಕೆ ಬಲಿಯಾಗಿ ಭ್ರಷ್ಟ ರಾಜಕಾರಣಿಗಳನ್ನು ಗೆಲ್ಲಿಸುವಂಥ ಪರಿಪಾಠ ಬೆಳೆದುಬಿಟ್ಟಿದೆ. ಇದರಿಂದ ಪ್ರತಿನಿಧಿಗಳು ನಮ್ಮ ಕೈಗೆ ಸಿಗದೇ ನಾವು ಪರಿತಪಿಸುವಂತಾಗುತ್ತಿದೆ. ಇದಕ್ಕಾಗಿ ಸ್ಥಳಿಯರನ್ನೇ ಗೆಲ್ಲಿಸಬೇಕು. ‘ಮತ ನಮ್ಮದು, ಮಾತು ನಮ್ಮದೇ ಆಗಬೇಕು’ ಆಗ ಮಾತ್ರ ನಾವು ಏನಾದರೂ ಬದಲಾವಣೆ ಕಾಣಲು ಸಾಧ್ಯ ಎಂದರು.

ADVERTISEMENT

ರೈತ ಈ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ, ದೇಶದಲ್ಲಿ ಶೇ 70ರಷ್ಟಿರುವ ರೈತರು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಯನ್ನೇ ಬಿಡಬೇಕಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಮಸ್ಕಲ್‌ ರಾಮಯ್ಯ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದೇಶ್‌ ಯಾದವ್‌, ರಾಜ್‌ಕುಮಾರ್‌ ಮಾತನಾಡಿದರು. ಪ್ರತಿಭಟನೆಯಲ್ಲಿ ಹಾರ್ಡ್‌ವೇರ್‌ ಶಿವಣ್ಣ, ಅರಳೀಕೆರೆ ತಿಪ್ಪೇಸ್ವಾಮಿ, ಗ್ರಾಮ ಪಂಚಾಯ್ತಿ ಸದಸ್ಯ ಶಿವಣ್ಣ, ನಾಗರಾಜ್‌ ರಾವ್‌, ನಿವೃತ್ತ ಡಿವೈಎಸ್‌ಪಿ ರೆಹಮಾನ್‌ಖಾನ್‌, ಮಹಮ್ಮದ್‌ ನಿಜಾಮ್‌, ದೇವರಾಜು, ಅಡವೆಪ್ಪ, ಚೋಟು, ಬಸವರಾಜು, ಶ್ರೀನಿವಾಸ್‌, ಅರಳೀಕೆರೆ ಬಸಣ್ಣ, ರಂಗಸ್ವಾಮಿ, ಹೊರಕೇರಪ್ಪ, ಪುಟ್ಟೀರಮ್ಮ, ವೀಣಾ, ಗುಣ್ಣಯ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.