ADVERTISEMENT

ನಲ್ಲಿಯಲ್ಲಿ ಹರಿಯುತ್ತಿದೆ ಅಶುದ್ಧ ನೀರು

​ಪ್ರಜಾವಾಣಿ ವಾರ್ತೆ
Published 21 ಮೇ 2017, 5:36 IST
Last Updated 21 ಮೇ 2017, 5:36 IST

ಚಿಕ್ಕಜಾಜೂರು:  ಗ್ರಾಮ ಪಂಚಾಯ್ತಿ ಪೂರೈಸುತ್ತಿರುವ ನೀರು ಅಶುದ್ಧವಾ ಗಿದ್ದು, ಬಾಟಲಿ, ಕ್ಯಾನ್‌ಗಳಲ್ಲಿ ತುಂಬಿಸಿದಾಗ ಕೆಂಪುನೀರು ಕಾಣಿಸುತ್ತಿದೆ. ಸಮೀಪದ ಹಿರೇಕಂದವಾಡಿಯ ಶುದ್ಧೀಕರಣ ಘಟಕದಿಂದ ನಿತ್ಯ ಸರಬರಾಜು ಆಗುತ್ತಿರುವ ನೀರನ್ನು ಕುಡಿಯಲು ಮತ್ತು ಬಳಸಲು ಜನರು ಹಿಂದೇಟು  ಹಾಕುತ್ತಿದ್ದಾರೆ.

ಬರಗಾಲದಿಂದಾಗಿ ಕೊಳವೆ ಬಾವಿಗಳಲ್ಲಿನ ನೀರು ಖಾಲಿಯಾಗಿದ್ದು, ಗ್ರಾಮ ಪಂಚಾಯ್ತಿಯವರು ಪೂರೈಸುವ ನೀರನ್ನೇ ಅವಲಂಬಿಸಿದ್ದಾರೆ. ಹಿರೇ ಕಂದವಾಡಿಯಲ್ಲಿರುವ ಶುದ್ಧೀಕರಣ ಘಟಕದಲ್ಲಿ ನೀರನ್ನು ಶುದ್ಧೀಕರಿಸಿ ಹೊಳಲ್ಕೆರೆ, ಜಗಳೂರು, ಚಿತ್ರದುರ್ಗ ತಾಲ್ಲೂಕುಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ, ಹೆಸರಿಗಷ್ಟೆ ಶುದ್ಧೀಕರಿಸಿದಂತೆ ಕಾಣಿಸುತ್ತಿದ್ದು, ಕೆಸರು ಮಿಶ್ರಣವಾಗಿ ಕೆಂಪಗೆ ಕಾಣಿಸುತ್ತಿದೆ.

‘ಸೂಳೆಕೆರೆಯಲ್ಲಿ ನೀರು ಖಾಲಿಯಾಗಿರುವುದರಿಂದ ತಳ ದಲ್ಲಿರುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ನೀರು ಸಂಪೂರ್ಣವಾಗಿ ಬಗ್ಗಡಾಗಿದ್ದು, ವಾಸನೆಯಿಂದ ಕೂಡಿದೆ. ಸ್ನಾನಕ್ಕೂ ಯೋಗ್ಯವಾಗಿಲ್ಲ. ಸಮೀಪದ ಹಳ್ಳಿಗಳ ಶುದ್ಧೀಕರಣ ಘಟಕಗಳಿಂದ ಗಂಡಸರು ನೀರನ್ನು ತಂದುಕೊಟ್ಟ ಮೇಲೆ ಅಡುಗೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಗೃಹಿಣಿಯರು.

ADVERTISEMENT

ಕೈಕೊಟ್ಟ ಶುದ್ಧೀಕರಣ ಘಟಕ:  ‘ಚಿಕ್ಕಜಾಜೂರಿನ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದ ಶುದ್ಧೀಕರಣ ಘಟಕ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿದೆ. ಹೊಸನಗರ ಬಡಾವಣೆಯಲ್ಲಿರುವ ಘಟಕವನ್ನೇ ಇಡೀ ಗ್ರಾಮಸ್ಥರು ಅವಲಂಬಿಸುವಂತಾಗಿದೆ. ಖಾಸಗಿ ಘಟಕದವರು ಕೊಳವೆ ಬಾವಿಯಲ್ಲಿ ನೀರಿಲ್ಲ ಎಂದು ಅವರ ಅಪರೂಪಕ್ಕೆ ನೀರು ಬಿಡುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಕುಡಿಯಲು ಶುದ್ಧ ನೀರಿನ ಸಮಸ್ಯೆ ಉದ್ಭವಿಸಿದೆ’ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಟೆಕ್ನೀಷಿಯನ್‌ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಶುದ್ಧೀಕರಣ ಘಟಕದ ಯಂತ್ರ ಸರಿಪಡಿಸಲು ತಡವಾಗಿದೆ. ದುರಸ್ತಿ ಆದ ತಕ್ಷಣ ನೀರನ್ನು ನೀಡಲಾಗುವುದು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ಸಿ. ಮೋಹನ್‌ ತಿಳಿಸಿದ್ದಾರೆ.

ಇನ್ನಾದರೂ, ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಕಾಟಾಚಾರಕ್ಕೆ ನೀರನ್ನು ಬಿಡುವ ಬದಲು, ಕಾಳಜಿ ವಹಿಸಿ, ಶುದ್ಧ ನೀರನ್ನು ಬಿಡಲು ವ್ಯವಸ್ಥೆ ಮಾಡುವಂತೆ ಹೋಬಳಿಯ ಸಾಸಲು, ಬಿ.ದುರ್ಗ, ಗುಂಜಿಗನೂರು, ಚಿಕ್ಕಜಾಜೂರು, ಬಾಣಗೆರೆ, ಪಾಡಿಗಟ್ಟೆ, ಆಡನೂರು ಗ್ರಾಮಗಳ ಜನರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.