ADVERTISEMENT

ನಾಡು, ನುಡಿ, ಸಂಸ್ಕೃತಿಗೆ ಟಿಪ್ಪುವಿನ ಕೊಡುಗೆ ಏನು?

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:31 IST
Last Updated 8 ನವೆಂಬರ್ 2017, 6:31 IST

ಚಿತ್ರದುರ್ಗ: ‘ನಾಡು, ನುಡಿ, ಸಂಸ್ಕೃತಿಗೆ ದ್ರೋಹ ಮಾಡಿದ ಟಿಪ್ಪುವಿನ ಜಯಂತಿಯನ್ನು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಿಸುವುದು, ಒಂದು ರೀತಿ ಅರಣ್ಯ ಇಲಾಖೆಯವರು ಕಾಡುಗಳ್ಳ ವೀರಪ್ಪನ್ ಜಯಂತಿಯನ್ನು ಆಚರಿಸಿದಂತೆ’ ಎಂದು ಸಂಸದ ಪ್ರತಾಪ ಸಿಂಹ ವ್ಯಂಗ್ಯವಾಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸರ್ಕಾರ ಎರಡು ವರ್ಷಗಳಿಂದ ಕನ್ನಡ ಸಂಸ್ಕೃತಿ ಇಲಾಖೆಯಿಂದ ಟಿಪ್ಪು ಜಯಂತಿ ಆಚರಿಸುತ್ತಿದೆ. ಆದರೆ, ನಾಡು, ನುಡಿ ಸಂಸ್ಕೃತಿಗಾಗಿಗಿ ಟಿಪ್ಪುವಿನ ಕೊಡುಗೆ ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಬೇಕು’ ಎಂದು ಕೋರಿದರು.

‘ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅಣೆಕಟ್ಟುಗಳನ್ನು ಕಟ್ಟಿದರು. ಮೈಸೂರು ವಿಶ್ವವಿದ್ಯಾಲಯ. ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಅಂಥ ಯದುವಂಶದವರ ವಿರುದ್ಧ ದಾಳಿ ಮಾಡಿದ ಟಿಪ್ಪುವಿನ ಜಯಂತಿಯನ್ನು ಏಕೆ ಆಚರಿಸಬೇಕು’ ಎಂದು ಪ್ರಶ್ನಿಸಿದರು.

ADVERTISEMENT

‘ಮುರುಘಾಮಠದ ಕೃತಿ ಹಾಗೂ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಅರವಿಂದ ಮಾಲಗತ್ತಿ ಸಂಪಾದಕತ್ವದ ಕೃತಿಯಲ್ಲಿ ಟಿಪ್ಪುವಿನ ಕ್ರೌರ್ಯಗಳ ಬಗ್ಗೆ ಉಲ್ಲೇಖವಾಗಿದೆ. ಇವ್ಯಾವೂ ಸಂಘ ಪರಿವಾರದ ಕೃತಿಗಳಲ್ಲ. ಇಂಥ ಚರಿತ್ರೆಯಿರುವ ವ್ಯಕ್ತಿ ಯಾರಿಗೆ ಪ್ರೇರಣೆಯಾಗುತ್ತಾನೆ’ ಎನ್ನುತ್ತಾ ಎರಡು ಕೃತಿಗಳನ್ನು ಪ್ರದರ್ಶಿಸುತ್ತಾ ಪ್ರಶ್ನಿಸಿದರು.

‘ನಾವು ಮೂರು ವರ್ಷಗಳಿಂದ ಟಿಪ್ಪು ಜಯಂತಿ ವಿರೋಧಿಸುತ್ತಿದ್ದೇವೆ. ಆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ. ಕಾನೂನು ಸುವ್ಯವಸ್ಥೆಯನ್ನು ಯಾರು ಹದಗೆಡಿಸುತ್ತಿದ್ದಾರೆ ಎಂದು ಪೊಲೀಸರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿ, ‘ಟಿಪ್ಪು ಜಯಂತಿ ಯಾಕೆ ಬೇಡ ಎಂಬುದರ ಕುರಿತು ವಿಚಾರ ಗೋಷ್ಠಿ ನಡೆಸಿ, ನಂತರ ಮೌನ ಪ್ರತಿಭಟನೆ ಮೂಲಕ ಸರ್ಕಾರದ ಗಮನಸೆಳೆಯುವುದು ನಮ್ಮ ಉದ್ದೇಶವಾಗಿತ್ತು. ಆದರೆ,ಜಿಲ್ಲಾಡಳಿತ ನಿನ್ನೆ ತರಾತುರಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ, ಇಡೀ ಚಿತ್ರದುರ್ಗವನ್ನು ಪೊಲೀಸರಿಂದ ತುಂಬಿಸಿದೆ’ ಹೇಳಿದರು.

‘ನಾವು ಮಂಗಳವಾರ 144 ಸೆಕ್ಷನ್ ವಜಾ ಮಾಡಬೇಕು ಎಂದು ಜಿಲ್ಲಾ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದೆವು. ನ್ಯಾಯಾಧೀಶರು ವಿಚಾರಣೆ ನಡೆಸಿ, ಬುಧವಾರ ಡಿಸಿ ಮತ್ತು ಎಸ್ಪಿಗೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ. ಜತೆಗೆ 144 ಸೆಕ್ಷನ್ ಉಲ್ಲಂಘನೆಯಾಗದ ರೀತಿ ಸುದ್ದಿಗೋಷ್ಟಿ ನಡೆಸಿ ಎಂದು ಅನುಮತಿಸಿದೆ’ ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ವಕೀಲ ಮಲ್ಲಿಕಾರ್ಜುನ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.