ADVERTISEMENT

ನೀರಿನ ಘಟಕ: ಅನುಷ್ಠಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 5:05 IST
Last Updated 8 ಜುಲೈ 2017, 5:05 IST

ಚಿತ್ರದುರ್ಗ: ‘ಸರ್ಕಾರ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ಶುದ್ಧ ಕುಡಿಯುವ ನೀರಿನ  ಘಟಕಗಳನ್ನು ಹೆಚ್ಚು ಪೂರೈಸಲು ಆದೇಶಿಸಿದೆ. ಇದು ಕೇವಲ ಕಾಗದಕ್ಕೆ ಸೀಮಿತವಾಗದೇ ತಕ್ಷಣ ಅನುಷ್ಠಾನವಾಗಬೇಕು’ ಎಂದು ಸಂಸದ ಬಿ.ಎನ್. ಚಂದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ (ದಿಶಾ) ಪ್ರಗತಿ ಪರಿಶೀಲನೆ ನಡೆಸಿ  ಅವರು ಮಾತನಾಡಿದರು.

ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆದ ಸಂಸದರು, ‘ಕುಡಿಯುವ ನೀರು ಪೂರೈಕೆ ವಿಚಾರ ಪುಸ್ತಕಕ್ಕೇ ಸೀಮಿತಗೊಳಿಸ­ಬೇಡಿ. ಅಧಿಕಾರಿಯೊಬ್ಬರನ್ನು ಖುದ್ದಾಗಿ ಕಳುಹಿಸಿ ಸರ್ಕಾರದಿಂದ ಆದೇಶ ಪ್ರತಿ ತರಿಸಿ, ಅನುಷ್ಠಾನಗೊಳಿಸಿ’ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಸೂಚಿಸಿದರು.

ADVERTISEMENT

ಈ ಬಗ್ಗೆ ನಿತೇಶ್ ಪಾಟೀಲ್ ಮಾಹಿತಿ ನೀಡಿ, ‘2017–18 ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆ ಜಿಲ್ಲೆಗೆ 368 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಜೂರು ಮಾಡಿದೆ. ಫ್ಲೋರೈಡ್ ಸಮಸ್ಯೆಯಿರುವ ಬಹುತೇಕ ಗ್ರಾಮಗಳಿಗೆ ಈ ವರ್ಷ ಘಟಕಗಳನ್ನು ಪೂರೈಸಬಹುದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಪ್ಪ, ‘50:50ರ ಪಾಲುದಾರಿಕೆಯಲ್ಲಿ ಸಂಸದರ ಅನುದಾನದಡಿ 50 ಘಟಕಗಳನ್ನು ಕೊಡುತ್ತೇನೆ’ ಎಂದು ತಿಳಿಸಿದರು. ‘ಸಂಸದರ ಅನುದಾನದಲ್ಲಿ ಪ್ರತಿ ತಾಲ್ಲೂಕು ಪಂಚಾಯ್ತಿಗೆ ಒಂದೊಂದು ಟ್ಯಾಂಕರ್ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಶಾಂತಿಸಾಗರದಿಂದ ಕಲುಷಿತ ನೀರು ಪೂರೈಕೆ ಕುರಿತು ನಗರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಜಲಾಶಯದ ನೀರು ಪೂರೈಕೆ ಸ್ಥಗಿತಗೊಳಿಸಿದ್ದು, ಸದ್ಯ ವಿ.ವಿ.ಸಾಗರದ ನೀರನ್ನು ಆರು ವಾರ್ಡ್‌ಗಳಿಗೆ ಪೂರೈಸಲಾಗುತ್ತಿದೆ. ಹಳೆಯ ಕೊಳವೆಬಾವಿಗಳಿಂದ ಸಂಪರ್ಕ ಕೊಡಿಸುವ ಜತೆಗೆ, 16 ಟ್ಯಾಂಕರ್‌ಗಳ ಮೂಲಕ ನಿತ್ಯ 230ರಿಂದ 250 ಟ್ರಿಪ್ ನೀರು ಕೊಡುತ್ತಿದ್ದೇವೆ. 175 ಕೊಳವೆಬಾವಿಗಳು ಚಾಲ್ತಿಯಲ್ಲಿವೆ’ ಎಂದು ನಗರಸಭೆ ಅಧಿಕಾರಿ ಮಾಹಿತಿ ನೀಡಿದರು.

‘ಆಂಬುಲೆನ್ಸ್‌ಗೆ ಡೀಸೆಲ್ ಹಾಕಿಸಲು ರೋಗಿಗಳ ಕಡೆಯವರಿಂದ ಚಾಲಕರು ಒತ್ತಾಯ ಮಾಡುತ್ತಾರೆಂಬ ದೂರಿದೆಯಲ್ಲ’ ಎಂದು ಚಂದ್ರಪ್ಪ ಪ್ರಶ್ನಿಸಿದರು. ಇದಕ್ಕೆ ಯಾರೂ ಉತ್ತರಿಸದಿದ್ದಾಗ ನಿತೇಶ್ ಪಾಟೀಲ್, ‘ಇದೊಂದು ಗಂಭೀರ ಆರೋಪ. ಅಂಥ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಬೇಕು.

ಇಲಾಖೆಯ ಚಾಲಕರಾದರೆ, ಅವರನ್ನು ಅಮಾನತುಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ‘ಇಂಥ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಇಲಾಖೆಗೆ ದೂರು ನೀಡಬಹುದು. ತಕ್ಷಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

‘ಕೇಂದ್ರ ಪುರಸ್ಕೃತ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳಿಗೆ ಶಿಷ್ಟಾಚಾರದಂತೆ ನಮ್ಮನ್ನು ಆಹ್ವಾನಿಸುವುದಿಲ್ಲ’ ಎಂದು ಕೆಲವು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ಆಕ್ಷೇಪಿಸಿದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಈ ಮಾತಿಗೆ ದನಿಗೂಡಿಸಿದರು. ಇದರಿಂದ ಕೋಪಗೊಂಡ ಸಂಸದರು, ‘ಇಂಥ ಕಾರ್ಯಕ್ರಮಗಳು ಯಾರ ಸ್ವಂತ ಮನೆಯದ್ದಲ್ಲ.

ಯಾವುದೇ ಪಕ್ಷದವರಾಗಿರಲೀ ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ತಪ್ಪಿದರೆ ಆಯಾ ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳೇ ಕಾರಣರಾಗುತ್ತೀರಿ’ ಎಂದು ಎಚ್ಚರಿಸಿದರು.‘ಅಂಧತ್ವ ನಿವಾರಣಾ ಚಟುವಟಿಕೆಗಳಿಗೆ ಲಕ್ಷಗಟ್ಟಲೆ ಹಣ ಖರ್ಚಾಗಿದೆ.

ಆದರೆ, ಭೌತಿಕ ಪ್ರಗತಿ ತೋರಿಸಿಲ್ಲ’ ಎಂದು ಅಧ್ಯಕ್ಷೆ ಸೌಭಾಗ್ಯ ಆಕ್ಷೇಪಿಸಿದರು. ‘ನಗರ ಆರೋಗ್ಯ ಕಾರ್ಯಕ್ರಮಗಳಿಗೆ ಮೂರು ತಿಂಗಳಲ್ಲಿ ಶೇ 25ರಷ್ಟು ಹಣ ಖರ್ಚಾಗಬೇಕು. ಈಗ ಶೇ 60ಕ್ಕಿಂತ ಹೆಚ್ಚು ಖರ್ಚಾಗಿದೆ. ಇದು ಹೇಗೆ’ ಎಂದು ನಿತೇಶ್ ಪಾಟೀಲ್ ಪ್ರಶ್ನಿಸಿದರು. ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಚಂದ್ರಪ್ಪ, ಸಭೆಗೆ ಬರುವಾಗ ಸಮರ್ಪಕ ಮಾಹಿತಿ ತರಬೇಕು. ಇಲ್ಲಿ ಬಂದು ಅಧಿಕಾರಿಗಳನ್ನು ಕೇಳಬಾರದು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.