ADVERTISEMENT

ನೀರಿಲ್ಲವೆಂಬ ಕೊರಗು ಬಿಟ್ಟು ತರಕಾರಿ ಬೆಳೆಯಿರಿ

26ನೇ ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಸೌಭಾಗ್ಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 7:18 IST
Last Updated 13 ಫೆಬ್ರುವರಿ 2017, 7:18 IST
ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಭಾನುವಾರ ನಡೆದ 26ನೇ ಫಲಪುಷ್ಪ ಪ್ರದರ್ಶನದ ಸಮಾರೋಪದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿದರು
ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಭಾನುವಾರ ನಡೆದ 26ನೇ ಫಲಪುಷ್ಪ ಪ್ರದರ್ಶನದ ಸಮಾರೋಪದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿದರು   

ಚಿತ್ರದುರ್ಗ: ತಾಲ್ಲೂಕಿನ ತೋಟಗಾರಿಕೆ ಇಲಾಖೆ ಸತತ ನಾಲ್ಕನೇ ಬಾರಿ ರೋಲಿಂಗ್ ಶೀಲ್ಡ್ ಪಡೆದು ಅಗ್ರ ಸ್ಥಾನ ಪಡೆದಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮೆಚ್ಚುಗೆ ವ್ಯಕ್ತ ಪಡಿಸಿದರು.

ತೋಟಗಾರಿಕೆ ಇಲಾಖೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 26ನೇ ಫಲಪುಷ್ಪ ಪ್ರದರ್ಶನದ ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಚಿತ್ರದುರ್ಗ ತಾಲ್ಲೂಕು ಕಳೆದ ಮೂರು ಸಲವೂ ‘ಸಮಗ್ರ ಪ್ರಶಸ್ತಿ’ ಮುಡಿಗೇರಿಸಿಕೊಂಡಿತು. ಇದು ನಾಲ್ಕನೇ ವರ್ಷದ ಪ್ರಶಸ್ತಿಯಾಗಿದೆ. ಇದರಲ್ಲಿ ತಾಲ್ಲೂಕಿನ ಅಧಿಕಾರಿಗಳ ಪರಿಶ್ರಮ ಎದ್ದು ಕಾಣುತ್ತಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ಫಲಪುಷ್ಪ ಪ್ರದರ್ಶನ ಅತ್ಯಂತ ಯಶಸ್ವಿಯಾಗಿದೆ. ನಗರ ಪ್ರದೇಶಕ್ಕೆ ಸೀಮಿತವಾಗದೆ, ಜಿಲ್ಲೆಯ ಗ್ರಾಮೀಣ ಭಾಗದ ಕಡೆಯಿಂದಲೂ ಸಾಕಷ್ಟು ಮಂದಿ ಬಂದು ಫಲಪುಷ್ಪ ಪ್ರದರ್ಶನ ವೀಕ್ಷಿಸಿ ಸಾಕಷ್ಟು ಖುಷಿಪಟ್ಟಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬರ ಇದೆ, ನೀರಿಲ್ಲ ಎಂಬ ಕೊರಗು ಬಿಡಿ. ಪ್ರತಿ ಮನೆಗಳ ಚಾವಣಿ, ತಡೆಗೋಡೆ ಆವರಣದಲ್ಲಿ ವಿವಿಧ ರೀತಿಯ ಪುಷ್ಪಗಳು, ತರಕಾರಿಗಳನ್ನು ಬೆಳೆದು ಪರಿಸರಕ್ಕೆ ಹೆಚ್ಚಿನ ಕೊಡುಗೆ ನೀಡಬೇಕು ಎಂದರು.

‘ನೀರನ್ನು ಪೋಲು ಮಾಡದೆ, ಇರುವ ಸ್ಥಳವನ್ನು ಸದ್ಬಳಕೆ ಮಾಡಿಕೊಂಡು ಹಣ್ಣು, ಹೂ, ತರಕಾರಿ ಸೇರಿದಂತೆ ಗಿಡ–ಮರಗಳನ್ನು ಹೆಚ್ಚು ಹೆಚ್ಚು ಬೆಳೆಸಿದಲ್ಲಿ ಪಕ್ಷಿಗಳು, ರೈತ ಮಿತ್ರ ಕೀಟಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ಮನೆ ಆವರಣದಲ್ಲೇ ತೋಟಗಾರಿಕೆ ಫಲ, ಪುಷ್ಪಗಳನ್ನು ಬೆಳೆದು ಇತರರಿಗೂ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಹೂ ಮಾರುಕಟ್ಟೆಯಲ್ಲಿ ರೈತರ ಶೋಷಣೆ ಮಿತಿಮೀರಿದೆ. ಕಷ್ಟ ಪಟ್ಟು ರೈತರು ಹೂ, ಹಣ್ಣು, ತರಕಾರಿ ಬೆಳೆಯುತ್ತಾರೆ. ಆದರೆ, ಮಧ್ಯವರ್ತಿಗಳ ಶೋಷಣೆಯಿಂದಾಗಿ ಆರ್ಥಿಕ ನಷ್ಟ ಹೊಂದುತ್ತಾರೆ. ಆದ್ದರಿಂದ ಎಪಿಎಂಸಿ ಮಾರುಕಟ್ಟೆ ಕಾಯ್ದೆ ಪರಿಣಾಮಕಾರಿ
ಯಾಗಿ ಜಾರಿಗೆ ಬಾರದ ಹೊರೆತು ರೈತರ ಶೋಷಣೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಾರುಕಟ್ಟೆ ಲಾಬಿಯನ್ನು ತಡೆಗಟ್ಟಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದರ ದೊರೆಯಬೇಕು. ಜಿಲ್ಲೆಯಲ್ಲಿ ಬೆಳೆಯುತ್ತಿರುವ ಹೂವುಗಳಿಗೆ ವಿವಿಧೆಡೆ ಬೇಡಿಕೆ ಇದೆ. ರೈತರಿಗೆ ನೀರಿನ ಸೌಲಭ್ಯ ಒದಗಿಸಿದಲ್ಲಿ ನಿರೀಕ್ಷೆಗೂ ಮೀರಿ ತೋಟಗಾರಿಕಾ ಬೆಳೆಗಳ ಉತ್ಪಾದನೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯ್ತಿ ಸಿಇಒ ನಿತೇಶ್ ಪಾಟೀಲ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣ, ಅಧಿಕಾರಿಗಳಾದ ದೇವರಾಜ್, ತೋಟಯ್ಯ, ವೆಂಕಟೇಶ್ ಮೂರ್ತಿ ಇದ್ದರು.

ಫಲಪುಷ್ಪ ಪ್ರದರ್ಶನದಲ್ಲಿ ಚಿತ್ರದುರ್ಗ ತಾಲ್ಲೂಕಿಗೆ 62, ಹಿರಿಯೂರು, ಹೊಳಲ್ಕೆರೆಗೆ ತಲಾ 26, ಹೊಸದುರ್ಗ 24, ಚಳ್ಳಕೆರೆ 19 ಹಾಗೂ ಮೊಳಕಾಲ್ಮುರು 15 ಪ್ರಶಸ್ತಿಗಳನ್ನು ಪಡೆದವು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.