ADVERTISEMENT

ನೀರು ಕದ್ದರೆ ಪ್ರಕರಣ ದಾಖಲು: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:31 IST
Last Updated 16 ಮೇ 2017, 5:31 IST

ಚಿತ್ರದುರ್ಗ: ಶಾಂತಿಸಾಗರದಿಂದ ನಗರದ ಸಾರ್ವಜನಿಕರಿಗೆ ಪೂರೈಕೆ ಆಗಬೇಕಾದ ನೀರನ್ನು ಮಾರ್ಗ ಮಧ್ಯದಲ್ಲಿ ಕದ್ದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ ತಿಳಿಸಿದರು.

ಶಾಂತಿಸಾಗರದಿಂದ ಪೂರೈಕೆಯಾಗುವ ನೀರು ಕೆಲವೊಮ್ಮೆ ಸೋರಿಕೆಯಾದಾಗ ತುರ್ತಾಗಿ ನೀರು ಖಾಲಿ ಮಾಡಲು ಹೊಳಲ್ಕೆರೆ ತಾಲ್ಲೂಕಿನ ಸಾಸಲು ಮತ್ತು ಕೊಟ್ಟಿಗೆ ಹಳ್ಳಿ ಮಾರ್ಗ ಮಧ್ಯದಲ್ಲಿ ಏರ್‌ ವಾಲ್ವ್‌ ಅಳವಡಿಸಲಾಗಿದೆ. ಇಲ್ಲಿಂದಲೂ ಕೆಲವರು ನೀರು ಕದಿಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಹಿತಿ ನೀಡಿದರು.

ಶಾಂತಿಸಾಗರದ ಪೈಪ್‌ಲೈನ್‌ ಸಾಸಲು ರೈತರೊಬ್ಬರ ತೋಟದಲ್ಲಿ ಹಾದು ಹೋಗಿದೆ. ಇಲ್ಲಿ ಏರ್‌ ವಾಲ್ವ್‌ ಕೂಡ ಅಳವಡಿಸಲಾಗಿದೆ. ಆದರೆ, ಈ ತೋಟದ ಮಾಲೀಕರು ತಮ್ಮ ತೋಟಕ್ಕೆ ನೀರು ಹಾಯಿಸಿಕೊಳ್ಳಲು ವಾಲ್ವ್‌ ಪಕ್ಕದಲ್ಲಿ ನೀರು ಸಂಗ್ರಹ ಇಂಗು ಗುಂಡಿ ನಿರ್ಮಿಸಿಕೊಂಡು ಅದರ ಸಮೀಪದಲ್ಲೇ ನೆಪಮಾತ್ರಕ್ಕೆ 30 ಅಡಿಯ ಕೊಳವೆಬಾವಿ ಕೊರೆಸಿಕೊಂಡಿದ್ದಾರೆ.

ADVERTISEMENT

ಅದಕ್ಕೆ 15 ಅಡಿಯ ಮೋಟರ್‌ ಪಂಪ್‌ ಅಳವಡಿಸಿಕೊಂಡಿದ್ದಾರೆ. ಅಲ್ಲದೆ, 10 ಅಡಿ ಹಾಳ ಮತ್ತು 15 ಅಡಿ ಉದ್ದದಲ್ಲಿ ನೀರು ಸುಲಭವಾಗಿ ಹರಿಯುವಂತೆ ಕೇಸಿಂಗ್‌ ಪೈಪ್‌ ಅನ್ನು ಯಾರಿಗೂ ಕಾಣದ ರೀತಿಯಲ್ಲಿ ಹಾಕಿಸಿದ್ದಾರೆ  ಎಂದು ಅಧ್ಯಕ್ಷರು ಹೇಳಿದರು.

ಇದನ್ನು ನೋಡಿದ ಅಕ್ಕಪಕ್ಕದ ತೋಟದವರು ಕೂಡ ಪರ್ಯಾಯವಾಗಿ ನೀರು ಕದಿಯಲು ಮುಂದಾಗಿರುವುದು ಕಂಡು ಬಂದಿದೆ ಎಂದು ಹೇಳಿದರು. ಸಾರ್ವಜನಿಕರಿಗೆ ಪೂರೈಸಬೇಕಾದ ನೀರನ್ನು ದುರುಪಯೋಗ ಮಾಡಿ ಕೊಂಡಿರುವ ಸಾಸಲಿನ ಕೆಲ ತೋಟದ ಮಾಲೀಕರ ವಿರುದ್ಧ ಚಿಕ್ಕಜಾಜೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪೌರಾಯುಕ್ತ ಚಂದ್ರಪ್ಪ, ನಗರಸಭೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.