ADVERTISEMENT

ಪರ್ಯಾಯ ಬೆಳೆಯಲ್ಲಿ ಆದಾಯದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 10:04 IST
Last Updated 13 ಸೆಪ್ಟೆಂಬರ್ 2017, 10:04 IST
ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದ ಜಮೀನಿನಲ್ಲಿ ನೀರಿಲ್ಲದೇ ಒಣಗಿದ ಮಾವಿನ ಮರಗಳನ್ನು ಕಡಿದು ರಾಶಿ ಹಾಕಿದುರುವು.
ಚಿಕ್ಕಜಾಜೂರು ಸಮೀಪದ ಹಿರೇಎಮ್ಮಿಗನೂರು ಗ್ರಾಮದ ಜಮೀನಿನಲ್ಲಿ ನೀರಿಲ್ಲದೇ ಒಣಗಿದ ಮಾವಿನ ಮರಗಳನ್ನು ಕಡಿದು ರಾಶಿ ಹಾಕಿದುರುವು.   

ಚಿಕ್ಕಜಾಜೂರು: ಎರಡು, ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗಿಲ್ಲ. ಕಳೆದ ವರ್ಷ ಅಂತರ್ಜಲ ಕುಸಿದಿದ್ದರಿಂದ ಸಂಪೂರ್ಣವಾಗಿ ಒಣಗಿಹೋಗಿದ್ದ ಮಾವಿನ ಮರಗಳನ್ನು ಕಡಿದು ಹಾಕಿದ್ದ ರೈತರು ಈ ಬಾರಿ ಆ ಜಾಗದಲ್ಲಿ ಮೆಕ್ಕೆಜೋಳವನ್ನು ಪರ್ಯಾಯ ಬೆಳೆಯಾಗಿ ಬೆಳೆದು ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.

ಸಮೀಪದ ಹಿರೇಎಮ್ಮಿಗನೂರು ಗ್ರಾಮದಲ್ಲಿ ಕಳೆದ ಏಪ್ರಿಲ್‌ ತಿಂಗಳಲ್ಲಿ ಸರಿಯಾಗಿ ಮಾವು ಬೆಳೆ ಬಾರದಿರುವುದರಿಂದ ಹಲವು ರೈತರಿಗೆ ಸ್ವಲ್ಪವೂ ಆದಾಯ ಲಭಿಸಿಲ್ಲ. ಇದರಿಂದ ಬೇಸತ್ತು ಒಣಗಿದ ನೂರಾರು ಮಾವಿನ ಮರಗಳನ್ನು ಕಡಿದು ಹಾಕಿದ್ದರು.

ಪರ್ಯಾಯ ಬೆಳೆಯಾಗಿ ಮೆಕ್ಕೆಜೋಳ: ಬೇರು ಸಹಿತ ಮಾವಿನ ಮರಗಳನ್ನು ಕಿತ್ತು ಹಾಕಿದ್ದ ರೈತರು ಮುಂಗಾರು ಮಳೆಯಾದ ಬಳಿಕ ಜಮೀನು ಹಸನು ಮಾಡಿ, ಪರ್ಯಾಯ ಬೆಳೆ ಬೆಳೆಯಲು ಸಿದ್ಧತೆ ನಡೆಸಿದರು. ಹಿರೇಎಮ್ಮಿಗನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರೂ ಆಗಿರುವ ರೈತ ಕೆ.ಸಿ.ಈಶ್ವರಪ್ಪ ಮತ್ತು ಸಹೋದರರು 18 ಎಕರೆ ಪ್ರದೇಶದಲ್ಲಿ ಬೆಳೆಸಿದ್ದ ಮಾವಿನ ಮರಗಳನ್ನು ಕಡಿಸಿ, ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದಾರೆ.

ADVERTISEMENT

‘ಐದು ವರ್ಷಗಳಿಂದ ಮಾವಿನಿಂದ ಯಾವುದೇ ಆದಾಯ ಬರಲಿಲ್ಲ. ಬೇಸಾಯ, ಗೊಬ್ಬರ ಹಾಗೂ ಔಷಧಿಗಳಿಗಾಗಿ ಪ್ರತಿ ವರ್ಷ ₹ 1 ಲಕ್ಷದವರೆಗೆ ಖರ್ಚು ಮಾಡಿದ್ದೆವು. ಆದರೆ, ಸರಿಯಾಗಿ ಮಳೆಯಾಗದೇ ಕೊಳೆವಬಾವಿಗಳು ಬತ್ತಿದ್ದವು. ಖರ್ಚು ಮಾತ್ರ ನಿಲ್ಲಲಿಲ್ಲ. ಮಾವು ಬೆಳೆಯಲ್ಲಿ ಆದಾಯ ಶೂನ್ಯವಾಗಿತ್ತು. ಹೀಗಾಗಿ ಮಾವಿನ ಮರಗಳನ್ನು ತೆಗೆಸಿ, ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇವೆ’ ಎಂದು ಈಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಬಾರಿ ಮಳೆ ಸುಮಾರಾಗಿ ಬಂದಿದೆ. ಹೀಗಾಗಿ ಮೆಕ್ಕೆಜೋಳದ ಪೈರಿನ ಬೆಳವಣಿಗೆ ಸ್ವಲ್ಪ ಕುಂಠಿತವಾಗಿದೆ. ಆದರೆ, ನಾಲ್ಕೈದು ದಿನಗಳಿಂದ ಹದವಾದ ಮಳೆಯಾಗುತ್ತಿದ್ದು, ಉತ್ತಮ ಆದಾಯ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಅವರು ಹೇಳಿದರು.

ಖರ್ಚು–ಆದಾಯ: ‘18 ಎಕರೆಗೆ 36 ಪಾಕೆಟ್‌ ಬೀಜ ಬಿತ್ತನೆ ಮಾಡಿದ್ದೆವು. ಮೂರು ಬಾರಿ ಎಡೆಕುಂಟೆ ಹೊಡೆಸಿದ್ದು, ಎರಡು ಬಾರಿ ಮೇಲು ಗೊಬ್ಬರ ಹಾಕಲಾಗಿದೆ. ಬೇಸಾಯ, ಕೂಲಿ ಸೇರಿ ಒಟ್ಟು ₹ 1.80 ಲಕ್ಷ ಖರ್ಚಾಗಿದೆ’ ಎಂದು ಅವರು ವಿವರ ನೀಡಿದರು.

‘ಈಗ ಹಾಲುಗಾಳು ಇದೆ. 20–25 ದಿನಗಳಲ್ಲಿ ಒಂದೆರಡು ಬಾರಿ ಮಳೆ ಬಂದರೆ, ಎಕರೆಗೆ 18ರಿಂದ 20 ಕ್ವಿಂಟಲ್‌ ಜೋಳ ಸಿಗುವ ನಿರೀಕ್ಷೆ ಇದೆ. ಉತ್ತಮ ಬೆಲೆ ಸಿಕ್ಕರೆ ಮಾವಿನ ಮರ ತೆಗೆದು ಮೆಕ್ಕೊಜೋಳ ಬಿತ್ತನೆ ಮಾಡಿದ್ದೂ ಸಾರ್ಥಕವಾಗಲಿದೆ’ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದರು.

ಗ್ರಾಮದ ರೈತರಾದ ವಡೇರಹಳ್ಳಿ ಈಶ್ವರಪ್ಪ, ಮಾಳಿಗೆ ರವಿಕುಮಾರ್‌, ಮಾಳಿಗೆ ನಾಗರಾಜ್‌, ನಂದಿಬಸಪ್ಪರ ಗಂಗಪ್ಪ, ಮಾಳಿಗೆ ಕುಬೇರಪ್ಪ ಅವರು ತಲಾ ಮೂರು ಎಕರೆ, ಗೌಡ್ರ ರೇವಣಸಿದ್ದಪ್ಪ ಅವರ 15 ಎಕರೆ ಪ್ರದೇಶಗಳಲ್ಲಿ ಬೆಳೆದಿದ್ದ ಮಾವಿನ ಮರಗಳನ್ನು ತೆಗೆದು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಈ ರೈತರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.