ADVERTISEMENT

ಪೂರಕ ವಾತಾವರಣ ಸೃಷ್ಟಿಯಿಂದ ಕೃಷಿ ಆಸಕ್ತಿ

‘ರೇಡಿಯೋ ಕಿಸಾನ್ ದಿವಸ್’ದಲ್ಲಿ ಬಸವ ಶಾಂತವೀರ ಸ್ವಾಮೀಜಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 5:52 IST
Last Updated 16 ಫೆಬ್ರುವರಿ 2017, 5:52 IST
ಚಿತ್ರದುರ್ಗ: ‘ಕೃಷಿಯಲ್ಲಿ ಲಾಭ ಗಳಿಸಬಹುದೆಂಬ ವಿಶ್ವಾಸ ಮೂಡಿಸುವುದು ಹಾಗೂ ಆ ವಿಶ್ವಾಸ ವೃದ್ಧಿಸುವಂತಹ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ, ಹಳ್ಳಿಗಳಲ್ಲಿ ಸುಸ್ಥಿರ ಜೀವನ ನಡೆಸುವ ಪೂರಕ ವಾತಾವರಣ ನಿರ್ಮಿಸಬೇಕು. ಆಗ ಯುವಕರಷ್ಟೇ ಅಲ್ಲದೆ ಹಳ್ಳಿ ಬಿಟ್ಟು ಪಟ್ಟಣ ಸೇರಿರುವ ಎಲ್ಲ ವರ್ಗದವರೂ ಕೃಷಿಯತ್ತ ಹೊರಳುತ್ತಾರೆ’ ಎಂದು ಹೊಸದುರ್ಗ ಕುಂಚಿಟಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಬಸವ ಶಾಂತವೀರ ಸ್ವಾಮೀಜಿ ಪ್ರತಿಪಾದಿಸಿದರು.
 
ನಗರದ ಆಕಾಶವಾಣಿ ಕೇಂದ್ರದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ರೇಡಿಯೋ ಕಿಸಾನ್ ದಿವಸ್’ ಕಾರ್ಯಕ್ರಮ ಉದ್ಘಾಟಿಸಿ, ‘ಯುವಕರನ್ನು ಕೃಷಿಯತ್ತ ಆಕರ್ಷಿಸುವುದು ಹೇಗೆ’ ಎಂಬ ವಿಷಯ ಕುರಿತು ಮಾತನಾಡಿದರು.
 
‘ಎಲ್ಲರಿಗೂ ಲಾಭದಾಯಕ ಉದ್ಯಮ ಬೇಕು. ತಿಂಗಳಿಗೆ ಇಂತಿಷ್ಟು ಕಾಯಂ ಹಣ ಸಿಗುವುದಾದರೆ ಜನ ಎಂಥ ಕೆಲಸವನ್ನಾದರೂ ಮಾಡುತ್ತಾರೆ. 5–6 ವರ್ಷಗಳ ಹಿಂದೆ ದಾಳಿಂಬೆಗೆ ಬೆಲೆ ಸಿಕ್ಕಾಗ ಅದೆಷ್ಟೋ ಜನ ಇದ್ದ ಉದ್ಯೋಗ ಬಿಟ್ಟು ಕೃಷಿಗೆ ಇಳಿದರು. ಈಗ ದಾಳಿಂಬೆ ಕೃಷಿ ರೋಗಗ್ರಸ್ತವಾಗಿದೆ. ಕೃಷಿ ಕೈಬಿಟ್ಟಿದ್ದಾರೆ. ಕೃಷಿಯಲ್ಲಿ ಹೀಗೆ ಆರ್ಥಿಕ ಭದ್ರತೆ ಇಲ್ಲ ಎನ್ನಿಸಿದಾಗಲೇ ಹೊಸದುರ್ಗದ ಸಾವಿರಾರು ಮಂದಿ ಬೆಂಗಳೂರಿನ ಗಾರ್ಮೆಂಟ್ ಕಾರ್ಖಾನೆಗಳನ್ನು ಸೇರಿಕೊಂಡರು. ಇಂಥ ಬೆಳವಣಿಗೆ ನಡುವೆ ಕೆಲವು ಯುವಕರು ಕೃಷಿಕರಾಗಲು ಸಲಹೆ ಕೊಡಿ ಎನ್ನುತ್ತಾರೆ. ಅವರಿಗೆ ಯಾವ ವಿಶ್ವಾಸದಿಂದ ಸಲಹೆ ಕೊಡಲಿ ಹೇಳಿ’ ಎಂದು ಸ್ವಾಮೀಜಿ ಪ್ರಶ್ನಿಸಿದರು.
 
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನುಲೇನೂರು ಶಂಕರಪ್ಪ, ‘ಕೃಷಿ ಕ್ಷೇತ್ರದ ಸಮಸ್ಯೆಗೆ ಪರಿಹಾರಗಳು’ ಕುರಿತು ಮಾತನಾಡಿ, ‘60ರ ದಶಕದ ಹಸಿರು ಕ್ರಾಂತಿಯ ಪರಿಣಾಮ ಇಡೀ ಕೃಷಿ ಕ್ಷೇತ್ರ ಅವಲಂಬನೆಯಿಂದ ಬದುಕುವಂತಾಯಿತು. ಈಗಲೂ ಬೀಜ, ಗೊಬ್ಬರ, ಮಾರುಕಟ್ಟೆ ಅವಲಂಬಿತವೇ ಆಗಿದೆ. ರೈತರಿಗೆ ತಾವು ಬೆಳೆಯುವ ಬೆಳೆಗೆ ಬೆಲೆ ನಿಗದಿಪಡಿಸುವ ಸ್ವತಂತ್ರ ಇಲ್ಲದಂತಾಗಿದೆ. ಹಾಗಾಗಿ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವಂತಹ ಯೋಜನೆ ರೂಪಿಸಿದರೆ ಮಾತ್ರ ಈಗಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು. 
 
ಭಾರತೀಯ ಕಿಸಾನ್ ಸಂಘದ ಸದಸ್ಯೆ ಸುಮಂಗಲಮ್ಮ ವೀರಭದ್ರಪ್ಪ ಮಾತನಾಡಿ, ‘ಕೃಷಿ ಕ್ಷೇತ್ರದಲ್ಲಿ ಆತ್ಮಹತ್ಯೆ ಗಳಾಗಿವೆ. ಆತ್ಮಹತ್ಯೆ ಮಾಡಿಕೊಂಡ ವರಲ್ಲಿ ರೈತ ಮಹಿಳೆಯರ ಸಂಖ್ಯೆ ತೀರಾ ತೀರಾ ಕಡಿಮೆ. ಮಹಿಳೆಯರು ಕೃಷಿಯಲ್ಲಿ ಏನೇ ಕಷ್ಟಗಳು ಬಂದರೂ ಎದುರಿಸಿ ಜೀವನ ಮಾಡುತ್ತಾರೆ. ಅದಕ್ಕೆ ನನ್ನ ಎರಡೂವರೆ ದಶಕಗಳ ಕೃಷಿ ಬದುಕೇ ಉದಾಹರಣೆ’ ಎನ್ನುತ್ತಾ, ಬಿ.ಜಿ.ಕೆರೆ ಯಲ್ಲಿರುವ ತಮ್ಮ ವಸುಂಧರಾ ಕೃಷಿ ಕ್ಷೇತ್ರದಲ್ಲಿ ಮಹಿಳೆಯಾಗಿ ತಾವು ಕೈಗೊಂಡಿರುವ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದರು.
 
ಚಿತ್ರದುರ್ಗದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ‘ಐದು ವರ್ಷಗಳಿಂದ ಜಿಲ್ಲೆಯಲ್ಲಿ ಬರ ನಿರಂತರ ವಾಗಿದೆ. ಈ ವರ್ಷ ತೀವ್ರ ಬರ ಕಾಡುತ್ತಿದ್ದು, 13 ಗೋಶಾಲೆಗಳನ್ನು ತೆರೆಯಲಾಗಿದೆ. ಮೇವು ಬ್ಯಾಂಕ್‌ಗಳನ್ನು ತೆರೆದಿದ್ದು, ಕಡಿಮೆ ಬೆಲೆಗೆ ಮೇವು ಪೂರೈಸುತ್ತಿದ್ದೇವೆ’ ಎಂದರು. ಜನರಿಗೆ ಮೇವು ಬೀಜ ನೀಡಿ, ಅವರಿಂದ ಟನ್‌ಗೆ ₹ 1,500 ರಂತೆ ಖರೀದಿಸುತ್ತಿದ್ದೇವೆ.  68 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸುತ್ತಿದ್ದೇವೆ’ ಎಂದರು.
 
ಜಿಲ್ಲೆಯಲ್ಲಿ ಕೈಗೊಂಡಿರುವ ಬರ ನಿರ್ವಹಣಾ  ಕಾರ್ಯಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಆಕಾಶವಾಣಿ ಕಾರ್ಯನಿರ್ವಾಹಕ ಶಶಿಕಾಂತ ಮುಮ್ಮಿಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಹನುಮಂತರಾಯಪ್ಪ, ವಿಧಾನಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್ ಹಾಜರಿದ್ದರು. ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.