ADVERTISEMENT

ಬಿಸಿಲ ತಾಪಕ್ಕೆ ಬಸವಳಿಯುತ್ತಿರುವ ಜಾನುವಾರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:47 IST
Last Updated 19 ಜನವರಿ 2017, 5:47 IST

ಮೊಳಕಾಲ್ಮುರು: ‘ಕಣ್ಣು ಹಾಯಿಸಿದಷ್ಟು ದೂರ ಕಾಣುವ ಜಾನುವಾರು, ಕೆರೆ ಅಂಗಳ ಪೊದೆಗಳಲ್ಲಿ ಕಟ್ಟಿ ಹಾಕಿರುವ ದನ, ಕರುಗಳ ಜತೆ ಮಾಲೀಕರ ವಿಶ್ರಾಂತಿ, ಬಿಡುವಿಲ್ಲದೇ ಮೇವು ಕಟಾವು ಮಾಡುವ ಯಂತ್ರದ ಸದ್ದು.

– ಇದು ತಾಲ್ಲೂಕಿನ ಮುತ್ತಿಗಾರಹಳ್ಳಿ ಕೆರೆ ಅಂಗಳಲ್ಲಿ ತಾಲ್ಲೂಕು ಆಡಳಿತ ಸ್ಥಾಪಿಸಿರುವ ಗೋಶಾಲೆಯ ಚಿತ್ರಣ.

ಜಿಲ್ಲೆಯಲ್ಲಿ ಹೆಚ್ಚು ಪರಿಶಿಷ್ಟ ಜಾತಿ, ಪಂಗಡದ ಜನರನ್ನು ಹೊಂದಿರುವ ಈ ಭಾಗದಲ್ಲಿ ಜಾನುವಾರು ಸಾಕಣೆಯೂ ಹೆಚ್ಚಾಗಿದೆ. ಈ ವರ್ಷ ಮಳೆ ಕೊರತೆ, ಬೆಳೆನಷ್ಟದಿಂದಾಗಿ ಜಾನುವಾರಿಗೆ ಗೋಶಾಲೆ ಬಿಟ್ಟರೆ ಬೇರೆಲ್ಲೂ ಮೇವು ದೊರೆಯುತ್ತಿಲ್ಲ. ಆರಂಭದಲ್ಲಿ 900ರಷ್ಟಿದ್ದ ಜಾನುವಾರು ಸಂಖ್ಯೆ ಪ್ರಸ್ತುತ 4 ಸಾವಿರ ಮುಟ್ಟುವ ಮೂಲಕ ಬರದ ತೀವ್ರತೆಗೆ ಸಾಕ್ಷಿಯಾಗಿದೆ, ಇಲ್ಲಿನ ಜಾನುವಾರು ಸಂಖ್ಯೆ ರಾಜ್ಯದಲ್ಲಿನ ಗೋಶಾಲೆಗಳ ಪೈಕಿ ಅತೀ ಹೆಚ್ಚು ಎಂದು ಹೇಳಲಾಗುತ್ತಿದೆ.

‘ಜನವರಿ ಆರಂಭದಿಂದ ಜಾನುವಾರು ಬರುವುದು ತೀವ್ರ ಹೆಚ್ಚಿದೆ, ಜ. 10ರಂದು 3169, 11ರಂದು 3223, 12ರಂದು 3287, 13ರಂದು 3304, 14ರಂದು 3418, 15ರಂದು 3488, 16ರಂದು 3572, 17ರಂದು 3626, 18ರಂದು 3800 ಜಾನುವಾರು ಬಂದಿವೆ. ಜತೆಗೆ ಒಂದು ಸಾವಿರಕ್ಕೂ ಹೆಚ್ಚು ಕುರಿ, ಮೇಕೆ ನಿತ್ಯವೂ ಗೋಶಾಲೆಗೆ ಬರುತ್ತಿವೆ. ಈ ಮೂಲಕ ಪ್ರತಿದಿನ 5 ಸಾವಿರ ಜಾನುವಾರು ಹಾಜರಾತಿಯಿದೆ ಎಂದು ಮಾಹಿತಿ ನೀಡುತ್ತಾರೆ ಗೋಶಾಲೆ ಸಿಬ್ಬಂದಿ.

ಈ ಗೋಶಾಲೆಗೆ ಮರ್ಲಹಳ್ಲಿ, ನೇರ್ಲಹಳ್ಳಿ, ಓಬಯ್ಯನಹಟ್ಟಿ, ಕೋನ ಸಾಗರ, ಕೊಂಡ್ಲಹಳ್ಳಿ, ಮೊಗಲಹಳ್ಳಿ, ಮುತ್ತಿಗಾರಹಳ್ಳಿ, ರಾವಲಕುಂಟೆ, ಬಿ.ಜಿ.ಕೆರೆ, ಸೂರಮ್ಮನಹಳ್ಳಿ, ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ, ರುದ್ರಮ್ಮನಹಳ್ಳಿ, ತೊರೆಕೋಲಮ್ಮಹಳ್ಳಿ, ಚೌಳಕೆರೆ, ಬಳ್ಳಾರಿ ಜಿಲ್ಲೆಯ ತಾಯಕನಹಳ್ಳಿ, ಹೂಡೇಂ, ಕರ್ನಾಲಹಟ್ಟಿ ಮುಂತಾದ ಗ್ರಾಮಗಳಿಂದ ಜಾನುವಾರು ಬರುತ್ತಿವೆ. ಕಳೆದ ವರ್ಷ ಅಗತ್ಯವಿರುವ ಕಡೆ ಗೋಶಾಲೆ ಆರಂಭಿಸಲಾಗಿತ್ತು, ಆದರೆ, ಈ ವರ್ಷ ಹೋಬಳಿಗೆ ಒಂದರಂತೆ ಗೋಶಾಲೆ ಆರಂಭಿಸಿರುವುದು ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ಅವರು.

ಸದ್ಯಕ್ಕೆ ಗೋಶಾಲೆಯಲ್ಲಿ 2 ದೇವರ ಎತ್ತುಗಳ ಶೆಡ್‌ ಹಾಗೂ ಇತರೆ 10 ಶೆಡ್ ಸೇರಿ ಒಟ್ಟು 12 ಶೆಡ್‌ಗಳಿವೆ. ಒಂದು ಶೆಡ್‌ನಲ್ಲಿ 60–70 ಜಾನುವಾರು ಕಟ್ಟಿ ಮೇಯಿಸಬಹುದು. ಈ ಮೂಲಕ ಅಂದಾಜು 1 ಸಾವಿರ ಜಾನುವಾರಿಗೆ ಮಾತ್ರ ನೆರಳಿನ ವ್ಯವಸ್ಥೆಯಿದೆ, ಇದಕ್ಕೆ ನಾಲ್ಕು ಪಟ್ಟು ಹೆಚ್ಚು ಜಾನುವಾರು ಗೋಶಾಲೆಗೆ ಬರುತ್ತಿವೆ. ಪ್ರವೇಶ ಮುಕ್ತವಾಗಿರುವ ಕಾರಣ ಯಾರಿಗೂ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಜಾನುವಾರಿಗೆ ತಾವೇ ನೆರಳಿನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ನಿತ್ಯ ಗೋಶಾಲೆಗೆ 500 ಜನ ಜಾನುವಾರು ಮಾಲೀಕರು ಬರುತ್ತಿದ್ದಾರೆ, ಈ ಪೈಕಿ 200 ಜನ ರಾತ್ರಿ ವೇಳೆ ಉಳಿದುಕೊಳ್ಳುತ್ತಾರೆ. ದೂರದ ಗ್ರಾಮಗಳ 2,000 ಜಾನುವಾರುಗಳು ಇಲ್ಲಿಯೇ ಇರುತ್ತವೆ,  ಗೋಶಾಲೆಯಲ್ಲಿ ರಾತ್ರಿ ಬೆಳಕಿನ ವ್ಯವಸ್ಥೆ ಇಲ್ಲದೇ ತೊಂದರೆಯಾಗಿದೆ. 25 ಕಿ.ಮೀ. ದೂರದಿಂದ ಬರುತ್ತಿರುವ ಕಾರಣ ಬಿಸಿಯೂಟ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಾರೆ ಜಾನುವಾರು ಮಾಲೀಕರಾದ ತಿಪ್ಪಣ್ಣ, ರಾಮಾಂಜಿನಪ್ಪ, ಸೂರಯ್ಯ.

ಮೇವನ್ನು ಕಟಾವು ಮಾಡಿಕೊಡಲಾಗುತ್ತಿದೆ, ಪ್ರತಿ 100 ಜಾನುವಾರಿಗೆ ಒಬ್ಬ ಸಿಬ್ಬಂದಿ ನೀಡಲಾಗುತ್ತಿದೆ, ಇದರಿಂದ ಮೇವು ಹಾಕಲು, ಸ್ವಚ್ಛತೆ ಮಾಡಲು ಅಡ್ಡಿಯಾಗಿದೆ. ಹೆಚ್ಚುವರಿ ಸಿಬ್ಬಂದಿ ಮಂಜೂರು ಮಾಡಬೇಕು ಎಂದು ಅವರು ಮನವಿ ಮಾಡಿದರು.

ಗೋಶಾಲೆಯಲ್ಲಿ ಒಟ್ಟು 19 ಶೆಡ್‌್ ಮಂಜೂರಾಗಿದ್ದು, ಇನ್ನೂ ಏಳು ಶೆಡ್‌ ನಿರ್ಮಿಸಬೇಕಿದೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಶೆಡ್‌ಗಳ ನಿರ್ಮಾಣ ವಿಳಂಬವಾಗಿದೆ. ಇದರ ಜತೆಗೆ ಇನ್ನೂ ಕನಿಷ್ಠ 10 ಹೆಚ್ಚುವರಿ ಶೆಡ್‌್ ನಿರ್ಮಿಸಿಕೊಡಬೇಕು. ಭವರಸೆಯಂತೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ, ಇನ್ನೂ ಆರು ತಿಂಗಳು ಗೋಶಾಲೆ ನಡೆಯುವ ಜತೆಗೆ ಬಿಸಿಲು ಹೆಚ್ಚುವ ಸಂಭವವಿರುವ ಕಾರಣ ಜಿಲ್ಲಾಡಳಿತ ನೆರಳಿನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಅವರು.

**
– ಕೊಂಡ್ಲಹಳ್ಳಿ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT